ದೊಡ್ಡ ಬಜೆಟ್‌ನ ಐತಿಹಾಸಿಕ ಚಿತ್ರಗಳನ್ನು ಒಪ್ಪಲು ಭಯ : ಧನಂಜಯ

| N/A | Published : Aug 18 2025, 01:03 PM IST

Daali Dhananjaya

ಸಾರಾಂಶ

ನನಗೆ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಆದರೆ, ದೊಡ್ಡ ಬಜೆಟ್‌ನ ಐತಿಹಾಸಿಕ ಚಿತ್ರಗಳನ್ನು ಒಪ್ಪುವುದಕ್ಕೆ ಭಯ ಆಗುತ್ತದೆ - ನಟ ಧನಂಜಯ

 ಸಿನಿವಾರ್ತೆ

ನನಗೆ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಆದರೆ, ದೊಡ್ಡ ಬಜೆಟ್‌ನ ಐತಿಹಾಸಿಕ ಚಿತ್ರಗಳನ್ನು ಒಪ್ಪುವುದಕ್ಕೆ ಭಯ ಆಗುತ್ತದೆ.

- ಹೀಗೆ ಹೇಳಿಕೊಂಡಿದ್ದು ನಟ ಧನಂಜಯ ಅವರು. ‘ಡಾ ರಾಜ್‌ಕುಮಾರ್‌ ಅವರು ನಟಿಸಿರುವ ಐತಿಹಾಸಿಕ ಚಿತ್ರಗಳನ್ನು ನೋಡಿ ತುಂಬಾ ಸ್ಫೂರ್ತಿಗೊಂಡವನು. ಆ ಕಾರಣಕ್ಕೆ ನಾನು‌ ಮೊದಲಿನಿಂದಲೂ ಐತಿಹಾಸಿಕ ಸಿನಿಮಾ ಮಾಡಬೇಕು ಎಂದು ಹೇಳುತ್ತಿದ್ದೆ. ಆದರೆ, ಐತಿಹಾಸಿಕ ಸಿನಿಮಾಗಳನ್ನು ಶುರು ಮಾಡುತ್ತಾರೆ. ಆಮೇಲೆ ಬಜೆಟ್ ಇರಲ್ಲ. ಅದಕ್ಕೆ ನ್ಯಾಯ ಒದಗಿಸಲು ಆಗುವುದಿಲ್ಲ. ಹೀಗಾಗಿ ಅಂಥ ಚಿತ್ರಗಳನ್ನು ಒಪ್ಪಲು ಭಯ ಆಗುತ್ತದೆ. ನನ್ನ ಕೆರಿಯರ್ ಆರಂಭದಲ್ಲಿ ಆ ರೀತಿಯ ಪ್ರಯತ್ನ ಮಾಡಿದ್ದೆ. ಆದರೆ, ನಟರಾಗಿ ನಮ್ಮ ಕಂಟ್ರೋಲ್‌ನಲ್ಲಿ ಏನೂ ಇರಲ್ಲ. ಕೆಲಸ ಮಾಡುತ್ತಿರುತ್ತೇವೆ. ಕೆಲವು ಸಂದರ್ಭಗಳಲ್ಲಿ ನಮ್ಮ ಕನಸು ಮುಂದಕ್ಕೆ ಹೋಗುತ್ತಿರುತ್ತದೆ’ ಎಂದರು.

ನನ್ನ ಐತಿಹಾಸಿಕ ಕನಸು ಈಡೇರುತ್ತಿದೆ

‘ಈಗ ‘ಹಲಗಲಿ’ ಸಿನಿಮಾ ನನ್ನ ಐತಿಹಾಸಿಕ ಸಿನಿಮಾ ಕನಸು ಈಡೇರಿಸುತ್ತಿದೆ. ಈ ಚಿತ್ರದ ನಿಜವಾದ ಹೀರೋಗಳು ನಿರ್ಮಾಪಕ ಕಲ್ಯಾಣ್‌ ಚಕ್ರವರ್ತಿ ಹಾಗೂ ನಿರ್ದೇಶಕ ಸುಕೇಶ್‌ ನಾಯಕ್‌ ಅವರು. ‘ಹಲಗಲಿ’ ಸ್ಕ್ರೀಪ್ಟ್ ಓದುತ್ತಾ ಓದುತ್ತಾ ಖುಷಿಯಾಯ್ತು. ನಂತರ ತಂಡವನ್ನು ಭೇಟಿಯಾದೆ. ಅವರು ಆಗಲೇ ಬ್ರಿಟಿಷರ ಎಪಿಸೋಡ್‌ಗಳ ಶೂಟಿಂಗ್‌ ಮುಗಿಸಿದ್ದರು. ಅದನ್ನು ನೋಡಿದ ನಂತರ ನನಗೆ ತಂಡದ ಮೇಲೆ ನಂಬಿಕೆ ಬಂತು.‘ಹಲಗಲಿ’ ಚಿತ್ರದ ಭಾಗವಾಗಿರುವುದಕ್ಕೆ ಖುಷಿ ಕೊಟ್ಟಿದೆ’ ಎಂದು ಧನಂಜಯ ಹೇಳಿಕೊಂಡರು.

ಇಮ್ಮಡಿ ಪುಲಿಕೇಶಿ ಯೋಚನೆ

‘ಇಮ್ಮಡಿ ಪುಲಿಕೇಶಿ ಮೇಲೆ ಚಿತ್ರ ಮಾಡುವ ಬಗ್ಗೆ ನನಗೆ ಹಲವು ಬಾರಿ ಯೋಚನೆಗಳು ಬಂದಿವೆ. ಅದು ನನ್ನ ಮತ್ತೊಂದು ದೊಡ್ಡ ಕನಸು. ಆ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳು ನಡೆಯುತ್ತಿವೆ. ನಮ್ಮ ‘ಡೇರ್‌ಡೆವಿಲ್‌ ಮುಸ್ತಾಫಾ’ ಚಿತ್ರ ಮಾಡಿದ ನಿರ್ದೇಶಕರ ತಂಡ ಆ ಕೆಲಸ ಮಾಡುತ್ತಿದೆ. ನೋಡೋಣ ನಾವು ಅಂದುಕೊಂಡಂತೆ ಬಜೆಟ್‌ ತೂಗಿಸುವ ನಿರ್ಮಾಪಕರು ಸಿಕ್ಕರೆ ಇಮ್ಮಡಿ ಪುಲಿಕೇಶಿ ಚಿತ್ರಕ್ಕೆ ಚಾಲನೆ ಕೊಡುತ್ತೇವೆ’

Read more Articles on