ಬೆಂಗಳೂರು : ಕಾವೇರಿ ನದಿ ನೀರು, ಮೇಕೆದಾಟು ಯೋಜನೆ ಸೇರಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿಚಾರಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚಿಸಲು ಆ.3ರಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ.

ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ

ಕಳೆದೊಂದು ವಾರದ ಹಿಂದೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲು ಮತ್ತು ಕರ್ನಾಟಕ-ತಮಿಳುನಾಡು ನಡುವಿನ ವಿಚಾರಗಳ ಕುರಿತು ಚರ್ಚಿಸಲು ದಿನಾಂಕ ನಿಗದಿ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಉತ್ತರಿಸಿರುವ ಡಿ.ಕೆ. ಶಿವಕುಮಾರ್‌, ಆ.3ಕ್ಕೆ ತಾವು ಬೆಂಗಳೂರಿಗೆ ಆಗಮಿಸಬಹುದು ಮತ್ತು ನನ್ನನ್ನು ಭೇಟಿಯಾಗಿ ಚರ್ಚಿಸಬಹುದು ಎಂದು ಮರು ಪತ್ರದ ಮೂಲಕ ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿ ವಿಜಯ್‌ ಅವರಿಂದ ಉತ್ತರ ಬಂದಿಲ್ಲ. ಒಂದು ವೇಳೆ ವಿಜಯ್‌ ಬೆಂಗಳೂರಿಗೆ ಬರಲು ಸಮ್ಮತಿಸಿದರೆ, ಆ. 3ರಂದು ಎರಡೂ ರಾಜ್ಯಗಳ ಮುಖ್ಯಮಂತ್ರಿ ನಡುವೆ ಮಹತ್ವದ ಸಭೆ ನಡೆಯಲಿದೆ.

ಡಿ.ಕೆ.ಶಿವಕುಮಾರ್‌ ಮತ್ತು ವಿಜಯ್‌ ನಡುವಿನ ಸಭೆ

ಡಿ.ಕೆ.ಶಿವಕುಮಾರ್‌ ಮತ್ತು ವಿಜಯ್‌ ನಡುವಿನ ಸಭೆಯಲ್ಲಿ ಪ್ರಮುಖವಾಗಿ, ಕಾವೇರಿ ನದಿ ನೀರು ಹಂಚಿಕೆ, ಪ್ರಸ್ತುತ ಮಳೆ ಕೊರತೆ, ಕಾವೇರಿ ನೀರು ತಮಿಳುನಾಡಿಗೆ ಬಿಡುಗಡೆ ಮಾಡದಿರುವುದು ಹಾಗೂ ಮೇಕೆದಾಟು ಯೋಜನೆ ಅನುಷ್ಠಾನದ ಕುರಿತಂತೆ ಚರ್ಚಿಸಬಹುದಾಗಿದೆ. ಅದರ ಜತೆಗೆ ಕರ್ನಾಟಕ ಮತ್ತು ತಮಿಳುನಾಡಿನ ಜತೆಗೆ ಅನುಷ್ಠಾನಗೊಳಿಸಬಹುದಾದ ಯೋಜನೆಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಗಳಿವೆ.