ಭಾರತದ ಅತ್ಯುತ್ತಮ ಮುವಾಯ್‌ ಥಾಯ್‌ ಫೈಟರ್‌

| Published : Jun 16 2024, 01:52 AM IST / Updated: Jun 16 2024, 04:39 AM IST

ಸಾರಾಂಶ

ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಅಂತಾರಾಷ್ಟ್ರಿಯ ಮಟ್ಟದಲ್ಲಿ ಮುವಾಯ್ ಥಾಯ್ ಸಾಧನೆ ಮಾಡುತ್ತಿದ್ದಾರೆ. ಅವರ ಸ್ಫೂರ್ತಿ ಕಥೆ.

- ರಾಜೇಶ್ ಶೆಟ್ಟಿ

ಮುವಾಯ್‌ ಥಾಯ್‌ ಫೈಟರ್‌ಗಳ ಅತಿ ಶ್ರೇಷ್ಠ ಸ್ಟೇಡಿಯಂ ಥಾಯ್‌ಲ್ಯಾಂಡಿನಲ್ಲಿದೆ. ಒಂದು ರಾಜಾದಾಮ್ನರ್ನ್ ಸ್ಟೇಡಿಯಂ, ಇನ್ನೊಂದು ಲುಂಪಿನಿ ಸ್ಟೇಡಿಯಂ. ಪ್ರತಿಯೊಬ್ಬ ಮುವಾಯ್ ಥಾಯ್‌ ಫೈಟರ್‌ ಕೂಡ ಇಲ್ಲಿ ಫೈಟ್‌ ಮಾಡುವ ಕನಸು ಕಂಡಿರುತ್ತಾನೆ. ಹಾಗೆಯೇ ಹಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕುಳಿತು ಟಿವಿ ನೋಡುತ್ತಿದ್ದ ಒಬ್ಬ ಹುಡುಗನೂ ಕನಸು ಕಂಡಿದ್ದ. ಮುವಾಯ್‌ ಥಾಯ್‌ ಫೈಟಿಂಗ್‌ನಲ್ಲಿ ಗೆಲ್ಲುವ ಕನಸು. ಲುಂಪಿನಿ, ರಾಜಾದಾಮ್ನರ್ ಸ್ಟೇಡಿಯಂನಲ್ಲಿ ಫೈಟ್‌ ಮಾಡುವ ಕನಸು ಆ ಫೈಟರ್‌ ಹೆಸರು ಸೂರ್ಯ ಸಾಗರ್‌, ಸನ್‌ ಆಫ್‌ ಅರುಣ್‌ ಸಾಗರ್‌.

ಸೂರ್ಯ ಸಾಗರ್‌ಗೆ ಚಿಕ್ಕಂದಿನಲ್ಲಿ ಲರ್ನಿಂಗ್ ಡಿಸೇಬಿಲಿಟಿ ಇತ್ತು. ಕಲಿಕೆ ಮೇಲೆ ಎಲ್ಲಾ ಮಕ್ಕಳಂತೆ ಗಮನ ಕೊಡುವುದಕ್ಕೆ ಆಗುತ್ತಿರಲಿಲ್ಲ. ಅದೇ ಕಾರಣದಿಂದ ಬಾಲ್ಯದಲ್ಲಿ ಸುಮಾರು 13 ಶಾಲೆ ಬದಲಿಸಿದ್ದರು ಸೂರ್ಯ. 10ನೇ ತರಗತಿ ವಿದ್ಯಾಭ್ಯಾಸದ ಬಳಿಕ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್ ಸೇರಿದರು. ಕೊನೆಯ ಪರೀಕ್ಷೆಯಲ್ಲಿ ಫೇಲಾದರು. ಎರಡನೇ ಬಾರಿ ಪರೀಕ್ಷೆ ಬರೆಯಲು ಎಕ್ಸಾಮ್‌ ಹಾಲ್‌ಗೆ ಹೋದ ಸೂರ್ಯ ಮನಸ್ಸಲ್ಲಿ ಏನೋ ಒಂದು ಗೊಂದಲ. ಸ್ವಲ್ಪ ಹೊತ್ತು ಹಾಗೇ ಯೋಚಿಸಿದ ಸೂರ್ಯ ಪರೀಕ್ಷೆ ಬರೆಯದೆಯೇ ಅಲ್ಲಿಂದ ಹೊರಬಂದರು. ಹಾಗೆ ಬಂದವರು ಮತ್ತೆ ಸ್ಕೂಲ್‌ ಮೆಟ್ಟಿಲು ಹತ್ತಲಿಲ್ಲ. ಆಗ ಅವರ ಕೈ ಹಿಡಿದ್ದು ಮುವಾಯ್‌ ಥಾಯ್‌.

ಅರುಣ್ ಸಾಗರ್ ಮತ್ತು ಮೀರಾ ಮನೆಯಲ್ಲಿ ಜಾಕಿಚಾನ್‌, ಜೆಟ್‌ಲೀ, ವ್ಯಾನ್‌ಡ್ಯಾಮ್‌ ಸಿನಿಮಾಗಳನ್ನು ನೋಡುವಾಗ ತಾನೂ ಫೈಟರ್ ಆಗುವ ಕನಸು ಕಂಡಿದ್ದರು. ಆ ಕನಸಿನ ಬೆಳಕಿನ ಕಿಡಿ ಸೂರ್ಯನ ಎದೆಯಲ್ಲಿ ಮೊಳಕೆಯೊಡೆಯುತ್ತಿತ್ತು. ಶಾಲೆಯಲ್ಲಿ ಕುಂಗ್‌ಫು, ಮುವಾಯ್‌ ಥಾಯ್‌ ತರಗತಿಗಳಿಗೆ ಹೋಗುತ್ತಿದ್ದ ಸೂರ್ಯ ಆರಂಭದಲ್ಲಿ ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು. 2015ರಲ್ಲಿ ಮುವಾಯ್‌ ಥಾಯ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲಿ ಸೋತು ಹೋದರು. ನಿಜವಾದ ಕಿಚ್ಚು ಹತ್ತಿಕೊಂಡಿದ್ದು ಅಲ್ಲಿಂದ. ಆ ಸೋಲು ಛಲ ಹುಟ್ಟಿಸಿತು. ಎದೆಯಲ್ಲಿ ಗೆಲ್ಲುವ ಹಂಬಲ ಮೂಡಿತು.

ಮತ್ತೆ ಪ್ರಾಕ್ಟೀಸ್‌ ಮಾಡಿದರು. ಮುವಾಯ್‌ ಥಾಯ್‌ ಎಂದರೆ ಎಂಟು ಅಂಗಗಳನ್ನು ಬಳಸಿಕೊಂಡು ಮಾಡುವ ಫೈಟಿಂಗ್‌. ಮೊಣಕಾಲು, ಮೊಣಕೈ, ಮುಷ್ಟಿ ಮತ್ತು ಕಾಲನ್ನು ಬಳಸಿಕೊಳ್ಳಬಹುದು. 2016ರಲ್ಲಿ ಮೈಸೂರಿನಲ್ಲಿ ನಡೆದ ದಸರಾ ಕಪ್‌ನಲ್ಲಿ ಭಾಗವಹಿಸಿ ಅಲ್ಲಿ ಗೆದ್ದರು. ಮಗನ ಉತ್ಸಾಹ ನೋಡಿ ತಂದೆ ಮೈಸೂರಿನಲ್ಲಿ ವಿಕ್ರಮ್ ನಾಗರಾಜ್ ಅವರ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ ಸೈನ್ಸ್‌ಗೆ ಸೇರಿಸಿದರು. ಸುಮಾರು ಮೂರು ವರ್ಷ ಅಲ್ಲಿ ಟ್ರೈನಿಂಗ್‌. ಆಗಲೇ ಸೂರ್ಯ ಹಲವರ ಬಳಿ ತಮ್ಮ ಲುಂಪಿನಿ ಕನಸನ್ನು ಹೇಳಿಕೊಂಡಿದ್ದರು. ಆದರೆ ಯಾರೂ ಅದನ್ನು ನಂಬಲಿಲ್ಲ.2018ರವರೆಗೆ ಸೂರ್ಯ 6 ನ್ಯಾಷನಲ್ ಗೋಲ್ಡ್ ಮೆಡಲ್, 2 ಸ್ಟೇಟ್ ಮೆಡಲ್, ಎಂಟಿಬಿಎಸ್ಎ ಆರ್ಗನೈಸೇಷನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಅದನ್ನು ಅಮೆಚ್ಯೂರ್‌ ಫೈಟಿಂಗ್‌ ಎನ್ನುತ್ತಾರೆ. ಆಗಲೇ ಅವರು ಪ್ರೊಫೆಷನಲ್‌ ಫೈಟರ್ ಆಗುವ ನಿರ್ಧಾರ ಮಾಡಿ ಆಗಿತ್ತು. 2018ರಲ್ಲಿ ಸೂರ್ಯ ಥಾಯ್‌ಲ್ಯಾಂಡ್‌ಗೆ ಹೊರಟರು. ಥಾಯ್‌ಲ್ಯಾಂಡ್‌ ಮುವಾಯ್‌ ಥಾಯ್‌ ಫೈಟರ್‌ಗಳ ಸ್ವರ್ಗ. ಅಲ್ಲಿ ಎಲ್ಲಿ ನೋಡಿದರೂ ಫೈಟರ್‌ಗಳು ಸಿಗುತ್ತಾರೆ. ನೀವು ಓಡಾಡುವ ಟುಕ್‌ಟುಕ್‌ ಡ್ರೈವರ್ ಒಬ್ಬ ಗ್ರೇಟ್‌ ಫೈಟರ್ ಆಗಿರಬಹುದು. ಅಲ್ಲಿನ ಅಂಗಡಿಗಳಲ್ಲಿ ದೊಡ್ಡ ಫೈಟರ್‌ ಕೆಲಸ ಮಾಡುತ್ತಿರಬಹುದು. ಮುವಾಯ್‌ಥಾಯ್‌ ಅಲ್ಲಿನ ರಾಷ್ಟ್ರೀಯ ಕ್ರೀಡೆ. ಅಲ್ಲಿ ಎಲ್ಲಾ ಫೈಟರ್‌ಗಳನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಾರೆ. ಸೋಲಿಗೂ ಅಲ್ಲಿ ಮರ್ಯಾದೆ ಇದೆ.

ಆದರೆ ಅಲ್ಲಿ ಸಾವಿರಾರು ಜಿಮ್‌ಗಳು. ಹತ್ತಾರು ಪ್ರಕಾರಗಳು. ಆರಂಭದಲ್ಲಿ ಚಿಯಾಂಗ್ ಮಯಿ ಎಂಬ ಊರಿನಲ್ಲಿ ಒಂದು ಸಾಂಪ್ರದಾಯಿಕ ಮುವಾಯ್‌ ಥಾಯ್‌ ಕ್ಯಾಂಪ್‌ ಸೇರಿಕೊಂಡರು. ಅಲ್ಲಿನ ಆಹಾರ, ಅಲ್ಲಿನ ನೀರು, ಅಲ್ಲಿ ಕಷ್ಟ ಸುಖಗಳಿಗೆ ಒಡ್ಡಿಕೊಂಡರು. ಒಂದೊಂದು ಜಿಮ್‌ ಒಂದೊಂದು ಪ್ರಕಾರವನ್ನು ಕಲಿಸುತ್ತದೆ. ಅದರಲ್ಲಿ ತನ್ನ ಪ್ರಕಾರ ಯಾವುದು ಎಂದು ಕಂಡುಕೊಳ್ಳುತ್ತಾ ಸಾಗಿದ್ದರು. ಒಂದೊಂದೇ ಹಂತ ಮೇಲಕ್ಕೆ ಹೋದರು. ಒಂದೊಂದೇ ಊರು, ಜಿಮ್‌ ಬದಲಾಯಿಸಿ ಕಡೆಗೆ ಪ್ರೊಫೆಷನಲ್‌ ಮುವಾಯ್‌ ಥಾಯ್‌ ಫೈಟರ್‌ ಆಗಿ ಹೊರಹೊಮ್ಮಿದರು. ಈಗ ಹಲವು ಸಮಯದಿಂದ ಅವರು ಸಿಟ್‌ಮೊನ್‌ಚಾಯ್ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಥಾಯ್‌ಲ್ಯಾಂಡಿನಲ್ಲಿ ಭಾರತದ ಫೈಟರ್‌ಗಳ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲಿ. ಭಾರತದಲ್ಲಿ ಮುವಾಯ್‌ ಥಾಯ್‌ಗೆ ಗಟ್ಟಿಯಾದ ಅಡಿಪಾಯ ಹಾಕುವವರಿಲ್ಲ. ಹಾಗಾಗೆ ದೊಡ್ಡ ಮಟ್ಟದ ಫೈಟರ್‌ಗಳು ಇಲ್ಲಿಂದ ಹೊರಹೊಮ್ಮಿಲ್ಲ. ಆದರೆ ಸೂರ್ಯ ಧೃತಿಗೆಡದೆ ಏಕಾಂಗಿಯಾಗಿ ಹೋರಾಡಿದರು. ಗೆದ್ದೇ ಗೆಲ್ಲುವೆ ಎಂಬ ಹಠದಿಂದ ಕಳೆದ ಐದು ವರ್ಷಗಳಲ್ಲಿ ಅವರು ಹರಿಸಿದ ಬೆವರಿಗೆ ಲೆಕ್ಕವಿಲ್ಲ. ಆದ ಗಾಯಗಳಿಗೆ ಕರುಣೆ ಇಲ್ಲ. ತೊರೆದು ಹೋದ ನೆತ್ತರಿಗೆ ಕನಸಿನ ಹಂಗಿಲ್ಲ.

ಪ್ರತೀ ದಿನ ದಿನಕ್ಕೆ ಆರು ಗಂಟೆ ಎಕ್ಸರ್‌ಸೈಸ್‌ ಪ್ರಾಕ್ಟೀಸ್‌ ಮಾಡುತ್ತಾರೆ. ವಾರದಲ್ಲಿ ಮೂರ್ನಾಲ್ಕು ದಿನ 10 ಕಿಮೀ ಓಡುತ್ತಾರೆ. ಸರಿಯಾದುದನ್ನೇ ತಿನ್ನುವುದಕ್ಕೆ ಹೋರಾಟ ನಡೆಸುತ್ತಾರೆ. ಗಾಯಗಳಿಂದ ತಪ್ಪಿಸಿಕೊಳ್ಳಲು, ದೇಹವನ್ನು ಚೆನ್ನಾಗಿಟ್ಟುಕೊಳ್ಳಲು ತಪಸ್ಸು ಮಾಡುತ್ತಾರೆ. ಆ ತಪಸ್ಸಿಗೆ ಫಲ ಸಿಗದೇ ಹೋಗುವುದಿಲ್ಲ. ಕಾಯುವಿಕೆಗೆ ಗೆಲುವು ಸಿಗದೇ ಇರುವುದಿಲ್ಲ.

2019ರಲ್ಲಿ ಪಟ್ಟಾಯದಲ್ಲಿ ಮ್ಯಾಕ್ಸ್ ಮುವಾಯ್ ಥಾಯ್ ಸ್ಟೇಡಿಯಂನಲ್ಲಿ ಫೈಟ್‌ ಗೆದ್ದರು. 2022ರ ಜುಲೈ 15ರಂದು ತನ್ನ ಒಂದು ಕನಸನ್ನು ನನಸು ಮಾಡಿಕೊಂಡರು. ರಾಜ ದಾಮ್ನರ್ನ್ ಮುವಾಯ್‌ ಥಾಯ್‌ ಸ್ಟೇಡಿಯಂಗೆ ಕಾಲಿಟ್ಟು ಸತತವಾಗಿ ಹೋರಾಟ ಮಾಡಿ ಗೆದ್ದರು. ಅಲ್ಲಿಗೆ ಇವರ ಹೋರಾಟ ನಿಲ್ಲಲಿಲ್ಲ. ಸೂರ್ಯ ಹೆಸರು ಫೈಟಿಂಗ್‌ ಸರ್ಕಲ್‌ಗಳಲ್ಲಿ ದೊಡ್ಡ ಹೆಸರಾಯಿತು.

2024, ಜೂನ್ 1. ಥಾಯ್‌ಲ್ಯಾಂಡಿನ ಅತಿದೊಡ್ಡ ಮುವಾಯ್‌ ಥಾಯ್‌ ಸ್ಟೇಡಿಯಂ ಲುಂಪಿನಿಯಲ್ಲಿ ಇಂಡಿಯಾದ ಸೂರ್ಯ ಸಾಗರ್‌ ಮತ್ತು ಲಿಥುವೇನಿಯಾದ ದೇವಿದಾಸ್‌ ಡೇನಿಯಲ್‌ ಮಧ್ಯೆ ಫೈಟು. ದೇವಿದಾಸ್‌ ಈಗಾಗಲೇ ಹೆಸರು ಮಾಡಿರುವ ಫೈಟರ್‌. ಅನೇಕ ಥಾಯ್‌ ಫೈಟರ್‌ಗಳನ್ನು ಸೋಲಿಸಿರುವ ಫೈಟರ್‌. ಸೂರ್ಯ ಆ ಸರ್ಕಲ್ಲಿನ ಭರವಸೆಯ ಫೈಟರ್‌. ಫೈಟ್‌ ಶುರುವಾಯಿತು. ಬಹುತೇಕರು ದೇವಿದಾಸ್‌ ಗೆಲ್ಲುವ ಊಹೆ ಮಾಡಿದ್ದರು. ಆದರೆ ಭಾರತದ, ಕನ್ನಡದ ಮಣ್ಣಿನ ಮಗ ಫೈಟಿಂಗ್‌ ರಿಂಗ್‌ ಒಳಗೆ ಛಲದಿಂದ, ಬಲದಿಂದ, ತಂತ್ರದಿಂದ ಹೋರಾಡಿ ಗೆದ್ದ.

ಶ್ರೇಷ್ಠ ಫೈಟರ್‌ಗಳು ಮಾತ್ರವೇ ಫೈಟ್‌ ಮಾಡಬಹುದಾದ ಲುಂಪಿನಿ, ರಾಜಾಗಾಮ್ನರ್ನ್ ಎಂಬ ಎರಡು ಮುವಾಯ್‌ ಥಾಯ್‌ ಫೈಟರ್‌ಗಳ ಸ್ವರ್ಗದಂತಿರುವ ಸ್ಟೇಡಿಯಂನಲ್ಲಿ ಗೆದ್ದ ಭಾರತದ ಮೊದಲ ಫೈಟರ್ ಎಂಬ ಕೀರ್ತಿಗೆ ಭಾಜನನಾದ. ಕನಸುಗಾರ ಫೈಟರ್‌ ಬಾಲ್ಯದ ಕನಸನ್ನು ಕೊನೆಗೂ ನನಸು ಮಾಡಿದ.

‘ಭಾರತೀಯ

 ಫೈಟರ್‌ಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಫೈಟರ್‌ಗಳ ತಂತ್ರವನ್ನು ಅರಿಯುವುದಕ್ಕೆ ಬಹಳ ಕಷ್ಟ. ಯಾಕೆಂದರೆ ಅವರಿಗೆ ಸರಿಯಾದ ತರಬೇತಿ ಸಿಕ್ಕಿರುವುದಿಲ್ಲ. ಅದರಿಂದಾಗಿಯೇ ಬಹಳ ಫೈಟರ್‌ಗಳು ಸೋತು ಹಿಂದೆ ಸರಿದಿದ್ದಾರೆ. ಈಗಲೂ ಪೂಜಾ ತೋಮರ್‌, ರಿತು ಫೋಗಟ್, ಹಿಮೇಶ್ ಕೌಶಿಕ್ ಥರದ ಫೈಟರ್‌ಗಳು ಫೈಟಿಂಗ್‌ ಕ್ಷೇತ್ರದಲ್ಲಿ ಹೋರಾಡುತ್ತಲೇ ಇದ್ದಾರೆ. ಮುಂದೊಂದು ದಿನ ಎಲ್ಲಾ ಫೈಟರ್‌ಗಳಿಗೆ ನೆರವಾಗುವ ಸನ್ನಿವೇಶ ದೇಶದಲ್ಲಿ ಉಂಟಾಗಬೇಕು. ಭಾರತದ ಫೈಟರ್‌ಗ‍ಳು ಎಲ್ಲಾ ಕಡೆ ಮೆರೆಯಬೇಕು. ಅದಕ್ಕಾಗಿ ನಾನು ಹೋರಾಡುತ್ತಿದ್ದೇನೆ. ಮುಂದೊಂದು ದಿನ ಭಾರತದ ಶ್ರೇಷ್ಠ ಮುವಾಯ್‌ ಥಾಯ್‌ ಫೈಟರ್‌ ಆಗಿ ಹೊರಹೊಮ್ಮುತ್ತೇನೆ. ಈಗಷ್ಟೇ ಈ ದಾರಿ ಆರಂಭವಾಗಿದೆ’.

ಸೂರ್ಯ ಅವರ ಮಾತುಗಳಲ್ಲಿ ವಿಶ್ವಾಸದ ಕಿಡಿ ಹೊರಹೊಮ್ಮುತ್ತದೆ. ಅವರ ಶ್ರದ್ಧೆ, ಪರಿಶ್ರಮ, ಗೆಲ್ಲುವ ಹಠ ಅವರ ಮಾತಿನಲ್ಲಿ, ನಿಲುವಿನಲ್ಲಿ, ಮುಷ್ಠಿಯಲ್ಲಿ, ನಗುವಲ್ಲಿ, ಗಾಯಗಳಲ್ಲಿ ಕಾಣಿಸುತ್ತದೆ. ಸೂರ್ಯ ಮುಂದೊಂದು ದಿನ ನಮ್ಮ ದೇಶದ ಬಹು ದೊಡ್ಡ ಆಸ್ತಿಯಾಗುವ ಸೂಚನೆ ನೀಡುತ್ತಾರೆ. ಅವರೇ ಹೇಳಿದರೆ, ಪ್ರಯಾಣ ಈಗಷ್ಟೇ ಶುರುವಾಗಿದೆ.

ಸೂರ್ಯ ಅಣಿಮುತ್ತುಗಳು

- ಬರೀ ಓದಿ ಇಂಜಿನಿಯರ್‌, ಡಾಕ್ಟರ್‌ ಆಗುವುದಷ್ಟೇ ಮುಖ್ಯ ಅಲ್ಲ. ಲರ್ನಿಂಗ್‌ ಡಿಸೇಬಿಲಿಟಿ ಇದ್ದ ನಾನೇ ಬೇರೆ ದಾರಿ ಹುಡುಕಿಕೊಂಡಿದ್ದೇನೆ. ಹೀಗೆ ಮಕ್ಕಳು ಅವರವರ ಆಸಕ್ತಿಯ ಕ್ಷೇತ್ರಕ್ಕೆ ಹೋಗಬಹುದು. ಪೋಷಕರು ದಾರಿ ಮಾಡಿಕೊಡಬೇಕು.

- ಥಾಯ್‌ಲ್ಯಾಂಡಿನಲ್ಲಿ ನಾವು ಇಲ್ಲಿ ಕ್ರಿಕೆಟ್‌ ನೋಡಿದಂತೆ ಫೈಟಿಂಗ್‌ ನೋಡುತ್ತಾರೆ. ಫೈಟರ್‌ಗಳನ್ನು ಗೌರವಿಸುತ್ತಾರೆ. ಪ್ರೀತಿಸುತ್ತಾರೆ. ಅಂಥಾ ಪ್ರೀತಿ ಭಾರತದಲ್ಲಿಯೂ ದೊರೆಯಬೇಕು.

- ಮುವಾಯ್‌ ಥಾಯ್‌ಗೂ ರಾಮಾಯಣದಲ್ಲಿ ಕಂಡು ಬರುವ ಫೈಟಿಂಗ್‌ ತಂತ್ರಕ್ಕೂ ಸಂಬಂಧ ಇದೆ. ಈ ಕಲೆ ಭಾರತದಿಂದಲೇ ಥಾಯ್‌ಲ್ಯಾಂಡ್‌, ಮಯನ್ಮಾರ್‌, ಕಾಂಬೋಡಿಯಾ ದೇಶಗಳಿಗೆ ಬಂದಿರಬಹುದು. ನಮ್ಮ ಸಂಸ್ಕೃತಿಯಲ್ಲಿದ ಈ ಕಲೆಯನ್ನು ಮತ್ತೆ ಭಾರತಕ್ಕೆ ತೆಗೆದುಕೊಂಡು ಹೋಗಬೇಕು ಅನ್ನುವ ಆಸೆ ಇದೆ ನನಗೆ.

ಯಶ್‌ ಸೇರಿದಂತೆ ಹಲವರಿಗೆ ಧನ್ಯವಾದ

ಸೂರ್ಯ ತಾನು ಹಾದು ಬಂದ ದಾರಿಯನ್ನು ಮರೆತಿಲ್ಲ. ಮಾತಿನ ಮಧ್ಯದಲ್ಲಿ, ‘ನಾನು ಇಲ್ಲಿಯವರೆಗೆ ಬರಲು ಕಾರಣ ನನ್ನ ತಂದೆ, ತಾಯಿ, ತಂದೆಯ ಫ್ರೆಂಡ್ಸು ಮತ್ತು ಅನೇಕ ಹಿತೈಷಿಗಳು. ರಾಕಿಂಗ್ ಸ್ಟಾರ್‌ ಯಶ್‌, ಬೆನಕ ಫೌಂಡೇಷನ್‌ನ ನರಹರಿ ಸರ್, ಡಾ. ಸೂರಿ ಸರ್, ರಂಗಾಯಣ ರಘು ಮಾಮ, ಶಂಕರ್ ಸರ್ ಸೇರಿದಂತೆ ಅನೇಕ ಮಂದಿ ತುಂಬಾ ನೆರವು ನೀಡಿದ್ದಾರೆ. ಅವರನ್ನು ನಾನು ನೆನೆಸಿಕೊಳ್ಳಬೇಕು. ಅವರ ನೆರವಿಗೆ ಗೌರವ ಸಿಗುವಂತೆ ಬಾಳಬೇಕು’ ಎಂದರು.

ತಲೆಗೆ 13 ಸ್ಟಿಚ್‌ ಬಿದ್ದಿತ್ತು, ಸಿಕ್ಕಾಪಟ್ಟೆ ಗೌರವ ಸಿಕ್ಕಿತು

ಫೆಬ್ರವರಿ ತಿಂಗಳಲ್ಲಿ ನಡೆದ ಫೈಟಲ್ಲಿ ತಲೆಗೆ 13 ಸ್ಟಿಚ್‌ ಬಿದ್ದಿತ್ತು. ಆ ಗಾಯದ ಜೊತೆ ನಾನು ತಿರುಗುತ್ತಿದ್ದೆ. ನನಗೆ ಇಲ್ಲಿ ಬೈಕ್‌ ಲೈಸೆನ್ಸ್‌ ಇದೆ. ಲೈಸೆನ್ಸ್‌ ಇದ್ದರೂ ಬೇರೆ ದೇಶದವರನ್ನು ಪ್ರತೀ ಸಲ ಪೊಲೀಸರು ನಿಲ್ಲಿಸಿ ಚೆಕ್ ಮಾಡುತ್ತಾರೆ. ಆದರೆ ನನ್ನ ಗಾಯ ನೋಡಿ ಓಹ್ ಇವನು ಫೈಟರ್‌ ಎಂದು ನನ್ನನ್ನು ಚೆಕ್ ಮಾಡಲಿಲ್ಲ. ಆ ದೇಶ ಫೈಟರ್‌ಗೆ ಕೊಡುವ ಗೌರವ ಅದು. ಅಲ್ಲಿ ಫೈಟರ್‌ಗೆ ನಾಕ್‌ ಮೋಯ್‌ ಅನ್ನುತ್ತಾರೆ. ಎಲ್ಲರೂ ನನ್ನನ್ನು ನೋಡಿ ನಾಕ್‌ ಮೋಯ್‌ ಎಂದು ನಗು ಬೀರಿ ಥಂಬ್ಸ್‌ ಅಪ್‌ ಮಾಡಿ ಹೋಗುತ್ತಿದ್ದರು. ಅಂಥಾ ಪ್ರೀತಿ ನೋಡಿ ಮನಸ್ಸು ತುಂಬಿ ಬಂದಿತ್ತು. ಅಲ್ಲಿ ಬಹುತೇಕರು ಫೈಟರ್‌ಗಳು. ಆದರೆ ತುಂಬಾ ವಿನಯವಂತರು. ಫೈಟರ್‌ಗಳಾಗಿದ್ದರೂ ತಲೆ ಬಾಗಿಸಿಕೊಂಡೇ ಇರುತ್ತಾರೆ. ಫೈಟಿಂಗ್‌ ಅವರನ್ನು ವಿನಯವಂತರನ್ನಾಗಿ ಮಾಡಿರುತ್ತದೆ.