ಕೇರಳದಲ್ಲಿ ಕಾಂತಾರ 1 ಲಾಭದ ಪಾಲಿಗೆ ವಿತರಕರು, ಪ್ರದರ್ಶಕರ ಮಧ್ಯೆ ಗುದ್ದಾಟ!

| N/A | Published : Sep 11 2025, 11:41 AM IST

kantara movie heroine
ಕೇರಳದಲ್ಲಿ ಕಾಂತಾರ 1 ಲಾಭದ ಪಾಲಿಗೆ ವಿತರಕರು, ಪ್ರದರ್ಶಕರ ಮಧ್ಯೆ ಗುದ್ದಾಟ!
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳದಲ್ಲಿ ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 1’ ಚಿತ್ರದ ಲಾಭದ ಪಾಲಿಗೆ ವಿತರಕರು ಮತ್ತು ಪ್ರದರ್ಶಕರ ಮಧ್ಯೆ ಗುದ್ದಾಟ ನಡೆದಿದೆ.

 ಸಿನಿವಾರ್ತೆ

ಕೇರಳದಲ್ಲಿ ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 1’ ಚಿತ್ರದ ಲಾಭದ ಪಾಲಿಗೆ ವಿತರಕರು ಮತ್ತು ಪ್ರದರ್ಶಕರ ಮಧ್ಯೆ ಗುದ್ದಾಟ ನಡೆದಿದೆ. ಕಲೆಕ್ಷನ್ ಲಾಭದ ಪಾಲಿನಲ್ಲಿ ಶೇ.55 ತಮಗೆ ಬರಬೇಕು ಎಂದು ವಿತರಕರು ಕೇಳಿರುವುದೇ ಗಲಾಟೆಗೆ ಕಾರಣವಾಗಿದ್ದು, ಒಮ್ಮತದ ನಿರ್ಧಾರಕ್ಕೆ ಬರುವವರೆಗೆ ಅಲ್ಲಿನ ಪ್ರದರ್ಶಕರು ಈ ಚಿತ್ರವನ್ನು ಬಿಡುಗಡೆ ಮಾಡದೆ ಇರಲು ನಿರ್ಧರಿಸಿದ್ದಾರೆ.

ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿರುವ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ಸಾರಥ್ಯದ ಪೃಥ್ವಿರಾಜ್‌ ಪ್ರೊಡಕ್ಷನ್‌, ‘ಚಿತ್ರ ಬಿಡುಗಡೆಯಾದ ಮೊದಲ ಎರಡು ವಾರಗಳ ಥಿಯೇಟರ್‌ ಕಲೆಕ್ಷನ್‌ನ ಲಾಭದ ಪಾಲಿನಲ್ಲಿ ಶೇ.55ರಷ್ಟು ಪಾಲು ನೀಡಬೇಕು’ ಎಂದು ಷರತ್ತು ಹಾಕಿದೆ ಎನ್ನಲಾಗಿದೆ. ಈ ಷರತ್ತಿಗೆ ಪ್ರದರ್ಶಕರು ಒಪ್ಪುತ್ತಿಲ್ಲ. ಯಾಕೆಂದರೆ ಕೇರಳದಲ್ಲಿ ಪ್ರದರ್ಶಕರು ಬೇರೆ ಚಿತ್ರಗಳಿಗೆ ಶೇ.50ರಷ್ಟು ಲಾಭದ ಪಾಲನ್ನು ನಿಗದಿ ಮಾಡಿದ್ದು, ಪೃಥ್ವಿರಾಜ್‌ ಪ್ರೊಡಕ್ಷನ್‌ನ ಬೇಡಿಕೆ ಅದನ್ನು ಮೀರಿದೆ. ಹಾಗಾಗಿ ಷರತ್ತು ಒಪ್ಪಲು ಸಾಧ್ಯವಿಲ್ಲ’ ಎನ್ನುವುದು ಪ್ರದರ್ಶಕರ ವಾದ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೇರಳ ಚಲನಚಿತ್ರ ಪ್ರದರ್ಶಕರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್‌ ಅವರು, ‘ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗುವ ಮಲಯಾಳಂ ಚಿತ್ರಗಳಿಗೆ ಅಲ್ಲಿನ ವಿತರಕರು ನಮ್ಮ ನಿರ್ಮಾಪಕರಿಗೆ ಶೇ.40ರಷ್ಟು ಮಾತ್ರ ಲಾಭದಲ್ಲಿ ಪಾಲು ಕೊಡುತ್ತಿದ್ದಾರೆ. ಪೃಥ್ವಿರಾಜ್‌ ಪ್ರೊಡಕ್ಷನ್‌ ಕೇಳುವಷ್ಟು ಲಾಭದ ಮೊತ್ತವು ನಮ್ಮ ನಿರ್ಮಾಪಕರಿಗೆ ಬೇರೆ ರಾಜ್ಯಗಳಲ್ಲಿ ಸಿಗದಿದ್ದಾಗ ನೀವು ಯಾಕೆ ಬೇರೆ ಭಾಷೆ ನಿರ್ಮಾಪಕರಿಗೆ ಹೆಚ್ಚಿನ ಲಾಭ ಗಳಿಸಲು ಸಹಾಯ ಮಾಡಲು ಇಷ್ಟೊಂದು ಆಸಕ್ತಿ ತೋರಿಸುತ್ತಿದ್ದೀರಿ’ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಇಬ್ಬರ ನಡುವಿನ ಈ ಲಾಭದ ಹಂಚಿಕೆ ಗಲಾಟೆ ಕಾರಣದಿಂದ ಸದ್ಯಕ್ಕೆ ಕೇರಳ ಚಲನಚಿತ್ರ ಪ್ರದರ್ಶಕರ ಒಕ್ಕೂಟವು ‘ಕಾಂತಾರ 1’ ಚಿತ್ರವನ್ನು ಪ್ರದರ್ಶಿಸದಿರಲು ನಿರ್ಧರಿಸಿದೆ. ಈ ಸಮಸ್ಯೆ ಶೀಘ್ರವೇ ಬಗೆ ಹರಿಯುವ ನಿರೀಕ್ಷೆಯೂ ಇದೆ. ಈ ಕುರಿತು ಪ್ರತ್ರಿಕ್ರಿಯೆ ನೀಡಲು ಹೊಂಬಾಳೆ ಫಿಲಂಸ್‌ ಪ್ರತಿನಿಧಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ಬಾಕ್ಸ್

30ಕ್ಕೂ ಹೆಚ್ಚು ದೇಶಗಳಲ್ಲಿ ಕಾಂತಾರ 1 ರಿಲೀಸ್

ಅ.2ರಂದು ಕಾಂತಾರ 1 ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರವೊಂದು ಈ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

 

Read more Articles on