ಕಲರ್ಸ್‌ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 12 ನಿರೂಪಣೆಯನ್ನು ನಟ ಕಿಚ್ಚ ಸುದೀಪ್‌ ಅವರು ಮಾಡಲಿದ್ದಾರೆ

ಬೆಂಗಳೂರು : ಕಲರ್ಸ್‌ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 12 ನಿರೂಪಣೆಯನ್ನು ನಟ ಕಿಚ್ಚ ಸುದೀಪ್‌ ಅವರು ಮಾಡಲಿದ್ದಾರೆ. ಕಳೆದ ವರ್ಷ ಅವರು ಬಿಗ್‌ ಬಾಸ್‌ ನಿರೂಪಣೆಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ್ದರು. 

ಆದರೆ ವಾಹಿನಿ ಮತ್ತು ಜನರ ಒತ್ತಾಯದ ಮೇರೆಗೆ ಮತ್ತೆ ನಿರೂಪಣೆಗೆ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಒಟ್ಟು 4 ಸೀಸನ್‌ಗೆ ನಿರೂಪಣೆಯ ಒಪ್ಪಂದ ಆಗಿದ್ದು, ಸೀಸನ್‌ 15ರವರೆಗೆ ಕಿಚ್ಚ ಸುದೀಪ್‌ ನಿರೂಪಣೆ ಮಾಡಲಿದ್ದಾರೆ.

ಈ ಕುರಿತು ಮಾತನಾಡಿರುವ ಸುದೀಪ್, ‘ವಾಹಿನಿಯವರಿಗೆ ಕನ್ನಡ, ಕನ್ನಡ ಸ್ಪರ್ಧಿಗಳ ಮೇಲಿನ ಪ್ರೀತಿ ಕಡಿಮೆಯಾಗಿತ್ತು. ಪ್ರೀತಿ ತೋರಿಸಿ ಎಂದು ಹೇಳಿದ್ದೇನೆ. ಒಳ್ಳೆಯ ಮನೆ ಕೊಡಿ, ಒಳ್ಳೆಯ ವೇದಿಕೆ ಕೊಡಿ ಎಂದೂ ತಿಳಿಸಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ. ಕಳೆದ ವರ್ಷ ನಿರೂಪಣೆ ಬೇಡ ಅನ್ನಿಸಿತ್ತು. ಪ್ರಾಮಾಣಿಕವಾಗಿ ಬೇಡ ಎಂದಿದ್ದೆ. ಆ ಸಂದರ್ಭದಲ್ಲಿ ದುಡ್ಡು ಮತ್ತಿತ್ಯಾದಿ ಯಾವ ವಿಚಾರವೂ ತಲೆಗೆ ಬಂದಿರಲಿಲ್ಲ. 

ವಾಹಿನಿಯವರು ಬಹಳ ಸಲ ಬಂದು ಕೇಳಿದರು. ವಾಹಿನಿಯವರು ಕರೆದ ರೀತಿ, ಜನ ತೋರಿಸುತ್ತಿರುವ ಪ್ರೀತಿಗೆ ಮರುಳಾಗಿ ಮತ್ತೆ ನಿರೂಪಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ. ಜೊತೆಗೆ ವರ್ಷದಲ್ಲಿ ಎರಡು ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ಕೂಡ ಮಾಡುತ್ತೇನೆ’ ಎಂದರು.