ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ

| N/A | Published : Oct 04 2025, 08:43 AM IST

Puneeth Rakshit Archana

ಸಾರಾಂಶ

ರಾಜ್ಯ ಸರ್ಕಾರವು ಪ್ರಕಟಿಸಿರುವ 2021ನೇ ಕ್ಯಾಲೆಂಡರ್‌ ವರ್ಷದ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅವರ ಅನಿಸಿಕೆಗಳು ಇಲ್ಲಿವೆ.

  ಬೆಂಗಳೂರು :  ರಾಜ್ಯ ಸರ್ಕಾರವು ಪ್ರಕಟಿಸಿರುವ 2021ನೇ ಕ್ಯಾಲೆಂಡರ್‌ ವರ್ಷದ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅವರ ಅನಿಸಿಕೆಗಳು ಇಲ್ಲಿವೆ.

ಅನಿರೀಕ್ಷಿತ ಖುಷಿ

- ಅರ್ಚನಾ ಜೋಯಿಸ್‌, (ಅತ್ಯುತ್ತಮ ನಟಿ, ಚಿತ್ರ: ಮ್ಯೂಟ್)

ಇದು ನನ್ನ ಮೊದಲ ರಾಜ್ಯ ಪ್ರಶಸ್ತಿ. ಬಹಳ ಖುಷಿಯಲ್ಲಿದ್ದೇನೆ. ನನಗೆ ಈ ಪ್ರಶಸ್ತಿ ತಂದುಕೊಟ್ಟ ‘ಮ್ಯೂಟ್‌’ ಚಿತ್ರ ಸೈಕಲಾಜಿಕಲ್‌ ಥ್ರಿಲ್ಲರ್‌. ಕೋವಿಡ್ ಸಮಯದಲ್ಲಿ ಬಂದ ಚಿತ್ರ. ಇದು ಥಿಯೇಟರ್‌ಗೆ ಬಾರದೇ ಓಟಿಟಿಯಲ್ಲಿ ರಿಲೀಸ್‌ ಆಗಿತ್ತು. ಇದರಲ್ಲಿ ಡಿವೋರ್ಸ್‌ನಿಂದ ಖಿನ್ನತೆಗೊಳಗಾಗಿ ಹೆಣ್ಣೊಬ್ಬಳು ಅನಿರೀಕ್ಷಿತವಾಗಿ ಸಿಕ್ಕ ನಾಯಿಯ ಸ್ನೇಹದಿಂದ ಹೇಗೆ ಬದಲಾಗುತ್ತ ಹೋಗುತ್ತಾಳೆ ಎಂಬ ಕಥಾಹಂದರವಿದೆ.---

ಕೆಲಸ ಗುರುತಿಸಿದ್ದಕ್ಕೆ ಖುಷಿ ಇದೆ

- ಪ್ರಮೋದ್‌ (ಅತ್ಯುತ್ತಮ ಪೋಷಕ ನಟ, ರತ್ನನ್‌ ಪ್ರಪಂಚ)

‘ರತ್ನನ್‌ ಪ್ರಪಂಚ’ ಸಿನಿಮಾದಲ್ಲಿ ನನಗೆ ಸಿಕ್ಕ ಪಾತ್ರ ಹೀರೋ ಪಾತ್ರದಷ್ಟೇ ಮಹತ್ವ ಪಡೆದಿತ್ತು. ಜನ ಆ ಪಾತ್ರವನ್ನು ಒಪ್ಪಿ ಅಪ್ಪಿಕೊಂಡರು. ಇದೀಗ ಅದೇ ಪಾತ್ರಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂದಿರುವುದು ಬಹಳ ಖುಷಿ ಕೊಟ್ಟಿದೆ. 4 ವರ್ಷಗಳ ನಂತರ ಬರುತ್ತಿರುವ ಕಾರಣ ಸರ್ಪ್ರೈಸಿಂಗ್‌ ಆಗಿತ್ತು. ನನ್ನೊಳಗಿನ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ನಿರ್ಮಾಪಕಿ ಶ್ರುತಿ ನಾಯ್ಡು ಮತ್ತು ನಿರ್ದೇಶಕ ರಮೇಶ್‌ ಇಂದಿರಾ. ಇವತ್ತು ಪ್ರಶಸ್ತಿ ಬಂದ ಸಿಹಿಕ್ಷಣದಲ್ಲಿ ಅವರನ್ನೂ ಪ್ರೀತಿಯಿಂದ ನೆನೆಯುತ್ತೇನೆ.

ಹಳ್ಳಿ ಸೊಗಡಿನ ಚಿತ್ರಕ್ಕೆ ಸಿಕ್ಕ ಗೌರವ

- ರಘು ಕೆ.ಎಂ., ನಿರ್ದೇಶಕ (ಅತ್ಯುತ್ತಮ ಸಿನಿಮಾ ದೊಡ್ಡಹಟ್ಟಿ ಬೋರೇಗೌಡ)

ನಮ್ಮ ಪ್ರಾಮಾಣಿಕವಾದ ಕೆಲವನ್ನು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯವರು ಗುರುತಿಸಿರುವುದಕ್ಕೆ ಸಂತೋಷವಾಗುತ್ತದೆ. ಹಳ್ಳಿ ಸೊಗಡಿನ ಒಂದು ಒಳ್ಳೆಯ ಚಿತ್ರಕ್ಕೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ.

ನಾಲ್ಕು ಪ್ರಶಸ್ತಿ ಬಂದಿದ್ದು ಸಂತೋಷ

- ಕಿರಣ್‌ ರಾಜ್‌ ಕೆ., ನಿರ್ದೇಶಕ (ಅತ್ಯುತ್ತಮ ಸಿನಿಮಾ ದ್ವಿತೀಯ- 777 ಚಾರ್ಲಿ)

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ ಸೇರಿ ನಮ್ಮ ಚಿತ್ರಕ್ಕೆ ನಾಲ್ಕು ರಾಜ್ಯ ಪ್ರಶಸ್ತಿಗಳು ಬಂದಿವೆ. ಖುಷಿಯಾಗುತ್ತದೆ. ಯಾಕೆ ಖುಷಿ ಎಂದರೆ ಈ ಚಿತ್ರಕ್ಕಾಗಿ ನಟ ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ನಿರೀಕ್ಷೆ ಮಾಡಿದ್ದೆ. ಯಾಕೆಂದರೆ ನಾಯಿ ಜೊತೆ ನಟಿಸೋದು ಅಷ್ಟು ಸುಲಭ ಅಲ್ಲ. ಒಂದು ವರ್ಷ ತರಬೇತಿ ಮಾಡಿಕೊಂಡಿದ್ದಾರೆ. ಅವರ ಈ ಶ್ರಮಕ್ಕೆ ರಾಷ್ಟ್ರ ಮಟ್ಟದ ಗೌರವ ಸಿಗಲಿಲ್ಲ ಎನ್ನುವ ಬೇಸರ ಇತ್ತು. ಈಗ ರಾಜ್ಯ ಮಟ್ಟದಲ್ಲಿ ಸಿಕ್ಕಿದ್ದು, ಆ ಬೇಸರ ದೂರ ಆಗಿದೆ.---

ಅಚ್ಚರಿ ಆಯಿತು

- ಹೃದಯ ಶಿವ, ನಿರ್ದೇಶಕ (ಅತ್ಯುತ್ತಮ ಸಿನಿಮಾ ತೃತಿಯ- ಬಿಸಿಲು ಕುದುರೆ)

ಅತ್ಯುತ್ತಮ ಸಿನಿಮಾಗಳಲ್ಲಿ ನನ್ನ ಸಿನಿಮಾ ಆಯ್ಕೆ ಆಗಿದೆ ಅಂತ ಕೇಳಿಯೇ ಆಶ್ಚರ್ಯ ಆಯಿತು. ಯಾವುದೇ ನಿರೀಕ್ಷೆಗಳಿಲ್ಲದೆ ಸಿನಿಮಾ ಮಾಡಿದವನು. ತುಂಬಾ ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಈಗ ಗುರುತಿಸಿದ್ದಾರೆ ಎನ್ನುವ ಸಂತೋಷ ಇದೆ.

Read more Articles on