ಸಾರಾಂಶ
ಸಿನಿವಾರ್ತೆ- ಹಿರಿಯ ನಟ ಬ್ಯಾಂಕ್ ಜನಾರ್ದನ್ ಸಜ್ಜನಿಕೆಯ ಸರಳ ವ್ಯಕ್ತಿ. ಅವರು ನನಗೆ ಪರಿಚಯವಾದದ್ದು ಕಾಶಿನಾಥ್ ಅವರ ಮೂಲಕ. ನಾನಾಗ ಕಾಶಿನಾಥ್ ಅವರ ‘ತರ್ಲೆ ನನ್ ಮಗ’ ಸಿನಿಮಾಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಅಲ್ಲೇ ನಮ್ಮಿಬ್ಬರ ಮೊದಲ ಭೇಟಿಯಾಯಿತು.
- ನನ್ನ ನಿರ್ದೇಶನದ ‘ಶ್’ ಸಿನಿಮಾದಲ್ಲಿ ಅವರು ಎಂಥಾ ಅದ್ಭುತ ನಟನೆ ಮೆರೆದರು ಅನ್ನುವುದು ನಿಮಗೆಲ್ಲ ಗೊತ್ತು. ಹಾಗೆ ನೋಡಿದರೆ ನಾವೆಲ್ಲ ಇಂಡಸ್ಟ್ರಿಯಲ್ಲಿ ಕಣ್ಣು ಬಿಡುವ ಹೊತ್ತಿಗೆ ಅವರು ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಆದರೆ ಎಂದೂ ಜನಪ್ರಿಯತೆಯ ದುರ್ಬಳಕೆ ಮಾಡಿರಲಿಲ್ಲ. ನಮಗೆ ಡೇಟ್ಸ್ ಕೊಡದೆ ಸಮಸ್ಯೆ ಮಾಡಿದವರಲ್ಲ.
- ಬ್ಯಾಂಕ್ ಜನಾರ್ದನ್ ಅವರನ್ನು ಪರಿಪೂರ್ಣ ವ್ಯಕ್ತಿ ಅಂತೀನಿ. ಅವರು ಎಂದೂ ವಿವಾದವನ್ನು ಮೈಮೇಲೆ ಎಳೆದುಕೊಂಡವರಲ್ಲ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದವರಲ್ಲ. ಸದಾ ಸಜ್ಜನಿಕೆಯಿಂದ ವರ್ತಿಸುತ್ತಿದ್ದರು. ನನ್ನ ಸಿನಿಮಾ ಜೀವನದ ಮೊದಲ ಹೆಜ್ಜೆಯಲ್ಲಿ ಅವರೂ ನನ್ನ ಜೊತೆಗೆ ಇದ್ದರು ಎಂಬುದೇ ಹೆಮ್ಮೆ.
- ಸದಾ ತಾನಾಯ್ತು, ತನ್ನ ಕೆಲಸ ಆಯ್ತು ಎಂಬಂತೆ ಇದ್ದ ವ್ಯಕ್ತಿಯಾದರೂ ಶೂಟಿಂಗ್‌ನಲ್ಲಿ ಅವರಿರುತ್ತಿದ್ದರೆ ವಾತಾವರಣಕ್ಕೆ ಒಂದು ಕಳೆ ಬರುತ್ತಿತ್ತು. ಎಲ್ಲರ ಜೊತೆ ಒಡನಾಡುತ್ತ ಖುಷಿಯಿಂದ ಇರುತ್ತಿದ್ದರು.
- ಇಂಥಾ ಅದ್ಭುತ ಕಲಾವಿದನೊಂದಿಗಿನ ಹಳೆಯ ನೆನಪುಗಳನ್ನು ಮರೆಯಲಿಕ್ಕಾಗಲ್ಲ. ಅವರು ಮತ್ತೆ ಹುಟ್ಟಿ ಬರ್ತಾರೆ ಎಂಬ ವಿಶ್ವಾಸವಿದೆ.