ಸಾರಾಂಶ
ಓಟಿಟಿ ಹುಟ್ಟಿ ಜನಪ್ರಿಯವಾದಾಗ, ನಾವೆಲ್ಲ ಇನ್ನುಮೇಲೆ ಸ್ವತಂತ್ರವಾಗಿ ಕಥೆ ಕೇಳಬಹುದು, ನಮಗೆಲ್ಲ ಒಂದೊಳ್ಳೆ ಅವಕಾಶ ಅಂದುಕೊಂಡೆವು. ಆದರೆ ಹಾಗಾಗಲಿಲ್ಲ. ಅದು ಬೇರೆಯೇ ನೆಲೆಯಲ್ಲಿ ವಿಸ್ತರಿಸಿತು
- ಈಗ ಸಿನಿಮಾ ಮಾಡೋರು ಜಾಸ್ತಿ ನೋಡೋರು ಕಡಿಮೆ ಆಗಿದ್ದಾರೆ. ಕಳೆದ ವಾರ ವಿವಿಧ ಭಾಷೆಗಳ 70 ಕ್ಕೂ ಹೆಚ್ಚು ಸಿನಿಮಾಗಳು ಬೆಂಗಳೂರಲ್ಲಿ ಪ್ರದರ್ಶನ ಕಾಣುತ್ತಿದ್ದವು. ಕನ್ನಡದ ಆರೇಳು ಚಿತ್ರಗಳೂ ಇವುಗಳಲ್ಲಿದ್ದವು. ಥೇಟರಿಗೆ ಬರುವ ಸೀಮಿತ ಸಂಖ್ಯೆಯ ಜನ ಇಷ್ಟು ಅಗಾಧ ಸಂಖ್ಯೆಯ ಸಿನಿಮಾಗಳಲ್ಲಿ ಯಾವುದನ್ನು ಅಂತ ಕಣ್ತುಂಬಿಸಿಕೊಳ್ಳುತ್ತಾರೆ..
- ಓಟಿಟಿ ಹುಟ್ಟಿ ಜನಪ್ರಿಯವಾದಾಗ, ನಾವೆಲ್ಲ ಇನ್ನುಮೇಲೆ ಸ್ವತಂತ್ರವಾಗಿ ಕಥೆ ಕೇಳಬಹುದು, ನಮಗೆಲ್ಲ ಒಂದೊಳ್ಳೆ ಅವಕಾಶ ಅಂದುಕೊಂಡೆವು. ಆದರೆ ಹಾಗಾಗಲಿಲ್ಲ. ಅದು ಬೇರೆಯೇ ನೆಲೆಯಲ್ಲಿ ವಿಸ್ತರಿಸಿತು. ಈಗ ಓಟಿಟಿ ಬಂದು 5 ವರ್ಷ ಆಗಿದೆ. ಇದರಿಂದ ಥೇಟರಿಗೆ ಬರುವ ಜನ ಸ್ಪ್ರೆಡ್ ಆಗಿದ್ದಾರೆ. ಹಾಗೆಂದು ಅವರು ಓಟಿಟಿಯಲ್ಲಿ ದುಡ್ಡಕೊಟ್ಟು ಸಿನಿಮಾ ನೋಡೋದೂ ಕಡಿಮೆ, ಫ್ರೀ ಸಿನಿಮಾ ನೋಡೋದೆ ಜಾಸ್ತಿ. ನನ್ನ ಹತ್ರ ಒಂದಿಷ್ಟು ಜನ ಯೂಟ್ಯೂಬ್‌ಗೆ ಯಾವಾಗ ಸಿನಿಮಾ ಬಿಡ್ತೀರಿ ಮೇಡಂ ಅಂತ ಕೇಳ್ತಾರೆ.
- ಹಾಗೆಂದು ಇದೇ ಮನಸ್ಥಿತಿಯೇ ಯಾವಾಗಲೂ ಇರುತ್ತೆ ಅಂತ ಹೇಳೋದಕ್ಕಾಗಲ್ಲ. ಓಟಿಟಿ ಬಂದ ಹೊಸತರಲ್ಲಿ ಜನರಿಗೆ ಅದರ ಬಗ್ಗೆ ರುಚಿ ಹತ್ತೋದು ಸಹಜವೇ. ಆದರೆ ಜನ ಎಷ್ಟು ದಿನ ಅಂತ ಮೊಬೈಲ್‌ನಲ್ಲಿ ಸಿನಿಮಾ ನೋಡ್ಕೊಂಡು ಕೂರ್ತಾರೆ. ಮನುಷ್ಯ ಸಂಘಜೀವಿ. ಆತ ಜನ ಸಮೂಹದ ಜೊತೆ ಕೂರಲೇ ಬೇಕು. ಆ ಕಾಲವೂ ಬರುತ್ತೆ. ಅಲ್ಲಿವರೆಗೆ ಕಾಯಬೇಕಿದೆ.
- ನನಗನಿಸೋದು ಇದೊಂದು ಟ್ರಾನ್ಸ್‌ಮಿಶನ್ ಸಮಯ. ಈಗ ಇಳಿತದಲ್ಲಿದ್ದೇವೆ. ಇದು ಏರುವ ತನಕ ಕಾಯದೇ ವಿಧಿಯಿಲ್ಲ. ಈ ಪ್ರೊಸೆಸ್‌ನಲ್ಲಿ ತಡೆದು ನಿಲ್ಲೋರು ಚಿತ್ರರಂಗದಲ್ಲಿ ಉಳೀತಾರೆ. ಉಳಿದವರು ಕೊಚ್ಚಿಕೊಂಡು ಹೋಗುತ್ತಾರೆ.
- ವಿತರಣೆ ಮತ್ತು ಪ್ರದರ್ಶನ ಸಿನಿಮಾದ ಬಹುಮುಖ್ಯ ಅಂಗ. ಈಗ ಪ್ರದರ್ಶನ ಅನ್ನುವುದು ಬಾಟಲ್ ನೆಕ್ ಆಗಿದೆ. ಹೊಸ ಅಲೆಗೆ ಪ್ರದರ್ಶಕ ಕ್ಷೇತ್ರ ಹೇಗೆ ಸ್ಪಂದಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಮಲ್ಟಿಪ್ಲೆಕ್ಸ್‌ಗಳಂಥಾ ದೈತ್ಯ ಪ್ರದರ್ಶನ ಸಂಸ್ಥೆಗಳ ಬ್ಯುಸಿನೆಸ್ ಐಡಿಯಾ ಪ್ರಾಫಿಟ್ ಕಡೆಗಾ ಸಿನಿಮಾರಂಗವನ್ನು ಉಳಿಸುವ ಕಡೆಗೇ ಅನ್ನುವುದನ್ನು ಗಮನಿಸಬೇಕು. ಸಿನಿಮಾರಂಗವನ್ನು ಉಳಿಸುವ ಕಡೆ ಗಮನ ಕೊಡಬೇಕಾದ್ದು ಈ ಹೊತ್ತಿನ ತುರ್ತು.
- ತೆಲುಗಿನಲ್ಲಿ ಬಂದ ಆಹಾ ಓಟಿಟಿ ಈಗ ತಮಿಳಿಗೂ ವಿಸ್ತರಿಸಿಕೊಂಡಿದೆ. ಈ ಥರದ ಪ್ರಯತ್ನ ನಮ್ಮಲ್ಲಿ ಸಾಧ್ಯ ಆಗಬೇಕಿದೆ. ನಮ್ಮ ನೆಲಕ್ಕೆ ನಮ್ಮದೇ ಓಟಿಟಿ ಬಂದು, ಅದನ್ನು ಗೆಲುವಿನತ್ತ ಮುನ್ನಡೆಸುವ ಹೊಣೆಗಾರಿಕೆಯೂ ಇದೆ. ಆಗ ಚಿತ್ರರಂಗಕ್ಕೆ ಚೈತನ್ಯ ಬರುತ್ತದೆ.
- ಸಾಮುದಾಯಿಕ ನೆಲೆಯಲ್ಲಿ ಚಿತ್ರರಂಗದ ಚಿಂತನೆ ಬೆಳೆಯಬೇಕು. ಎಲ್ಲ ಜೊತೆಯಾಗಿ ಒಂದು ವಿಷನ್ ಇಟ್ಟುಕೊಂಡು ಕೆಲಸ ಮಾಡಬೇಕು. ಇದಕ್ಕೆಲ್ಲ ಒಂದು ಸಮರ್ಥ ನಾಯಕತ್ವ ಬೇಕು. ನಂಗೆ ಪ್ರಾಫಿಟ್ ಆದರೆ ಸಾಕು ಅನ್ನುವುದಕ್ಕಿಂತ ನನ್ನ ಗಳಿಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ ಚಿತ್ರರಂಗದ ಬೆಳವಣಿಗೆ ಮುಖ್ಯವಾಗಬೇಕು ಎಂಬ ದೃಷ್ಟಿಕೋನದ ಅಗತ್ಯ ಇದೆ.