ಸಾರಾಂಶ
ವಾಷಿಂಗ್ಟನ್: ‘ಡಾಲರ್‌ಗೆ ಪರ್ಯಾಯ ಕರೆನ್ಸಿ ಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಿದರೆ ಶೇ.100ರಷ್ಟು ತೆರಿಗೆ ಹಾಕುವ ಎಚ್ಚರಿಕೆಯಿಂದಾಗಿ ಬ್ರಿಕ್ಸ್ ನಡುಗಿ ಹೋಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಗುರುವಾರ ಮಾತನಾಡಿದ ಅವರು, ‘ಬ್ರಿಕ್ಸ್ ದೇಶಗಳು ನಮ್ಮ ಡಾಲರ್ ಅನ್ನು ನಾಶ ಮಾಡಲು ಪ್ರಯತ್ನಿಸಿದ್ದರು. ಹೊಸ ಕರೆನ್ಸಿ ಸೃಷ್ಟಿಸಲು ಬಯಸಿದ್ದರು. ಡಾಲರ್ ಅನ್ನು ನಾಶ ಮಾಡುವ ಕುರಿತು ಮಾತನಾಡಿದರೆ, ಡಾಲರ್ ಜತೆಗೆ ಆಟವಾಡುವ ಕುರಿತು ಪ್ರಸ್ತಾಪ ಮಾಡಿದರೂ ಸಾಕು ನಾನು ಬ್ರಿಕ್ಸ್ ದೇಶಗಳ ಮೇಲೆ ಶೇ.100ರಷ್ಟು ತೆರಿಗೆ ಹಾಕುತ್ತೇನೆ. ನಮಗೆ ಆ ದೇಶಗಳ ಸರಕುಗಳೇ ಬೇಡ ಎಂದು ಎಚ್ಚರಿಸಿದ್ದೇನೆ. ಇದರಿಂದ ಬ್ರಿಕ್ಸ್ ದೇಶಗಳು ನಡುಗಿ ಹೋದವು’ ಎಂದರು.‘ಅವರಿಗೆ ಏನಾಗಿದೆ ಎಂದೇ ನಮಗೆ ಗೊತ್ತಾಗಿಲ್ಲ. ಆ ನಂತರ ಬ್ರಿಕ್ಸ್ ದೇಶಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬ್ರಿಕ್ಸ್ ದೇಶಗಳು ದುರುದ್ದೇಶದಿಂದ ರಚನೆಯಾಗಿವೆ. ಅನೇಕ ದೇಶಗಳಿಗೆ ಅದು ಬೇಕೂ ಇಲ್ಲ. ಆ ದೇಶಗಳು ಈಗ ಬ್ರಿಕ್ಸ್ ಬಗ್ಗೆ ಮಾತನಾಡುತ್ತಲೂ ಇಲ್ಲ. ಅವರೀಗ ಪ್ರತ್ಯೇಕ ಕರೆನ್ಸಿ ಕುರಿತು ಮಾತನಾಡಲೂ ಹೆದರುತ್ತಿದ್ದಾರೆ. ಬ್ರಿಕ್ಸ್ ಈಗ ಮುರಿದು ಬೀಳುತ್ತದೆ’ ಎಂದರು.
ಭಾರತ ವಿದೇಶಿ ಸುಂಕ ಕಡಿತ ಮಾಡಬೇಕು: ನೀತಿ ಆಯೋಗ
ನವದೆಹಲಿ: ಭಾರತವು ತನ್ನ ಒಳಿತಿಗಾಗಿ ವಿದೇಶಿ ವಸ್ತುಗಳ ಮೇಲೆ ಸುಂಕ ಕಡಿತಗೊಳಿಸಬೇಕು ಎಂದು ನೀತಿ ಆಯೋಗದ ಮುಖ್ಯಸ್ಥ ಬಿವಿಆರ್ ಸುಬ್ರಹ್ಮಣಿಯಂ ಹೇಳಿದ್ದಾರೆ. ಅಮೆರಿಕವು ಭಾರತದ ಸುಂಕ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅವರ ಈ ಹೇಳಿಕೆ ಬಂದಿದೆ.ಶುಕ್ರವಾರ ಸಭೆಯೊಂದರಲ್ಲಿ ಅವರು ಮಾತನಾಡಿ, ‘ತೆರಿಗೆಯು ಯಾವ ದೇಶವನ್ನು ಸಹ ರಕ್ಷಿಸುವುದಿಲ್ಲ. ಯಾರು ಏನು ಹೇಳುತ್ತಾರೆ ಎಂಬುದನ್ನು ಬದಿಗೊತ್ತಿ ಭಾರತವು ವಿದೇಶಿ ವಸ್ತುಗಳ ಮೇಲೆ ಮತ್ತು ತನ್ನ ವಸ್ತುಗಳ ಮೇಲೆ ತೆರಿಗೆಯನ್ನು ಇಳಿಸಬೇಕು. ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಬೇಕಿದ್ದರೆ, ವಿದೇಶಗಳೊಂದಿಗೆ ಮುಕ್ತ ನಿಲುವು ಹೊಂದಿರುವುದು ಸಹ ಐದು ಆದ್ಯತೆಗಳಲ್ಲಿ ಒಂದಾಗಿರಬೇಕು’ ಎಂದರು.
‘ಜಾಗತಿಕ ಹೂಡಿಕೆದಾರರು ಭಾರತಕ್ಕೆ ಬರುತ್ತಾರೆ, ನೋಡುತ್ತಾರೆ ಬಳಿಕ ವಿದೇಶಗಳಿಗೆ ಹಾರುತ್ತಾರೆ. ಭಾರತದಲ್ಲಿನ ನೋಂದಣಿ ವ್ಯವಸ್ಥೆಯು ವಿದೇಶಿ ಕಂಪನಿಗಳಿಗೆ ಕ್ಲಿಷ್ಟಕರವಾಗಿದ್ದು, ಇದರಿಂದಾಗಿ ಇಂಡೋನೇಷ್ಯಾ, ಟರ್ಕಿ, ವಿಯೆಟ್ನಾಂಗಳಿಗೆ ಕಂಪನಿಗಳು ಹೋಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು._
ಇದೇ ವೇಳೆ ನೀತಿ ಆಯೋಗವು ರಾಷ್ಟ್ರೀಯ ಉತ್ಪಾದನಾ ಮಿಷನ್‌ನನ್ನು ರೂಪಿಸುತ್ತಿದ್ದು, ಇದು 20 ಸಚಿವಾಲಯಗಳನ್ನು ಒಳಗೊಂಡು ಉತ್ಪಾದನಾ ವಲಯವನ್ನು ಬಲಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಇನ್ನು 3 ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.