ಸಾರಾಂಶ
ಸುಕ್ಮಾ : ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ಭರ್ಜರಿಯಾಗಿ ಮುಂದುವರೆದಿದ್ದು, ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಸಿಬ್ಬಂದಿ 17 ನಕ್ಸಲರನ್ನು ಹಾಗೂ ಬಿಜಾಪುರ ಜಿಲ್ಲೆಯಲ್ಲಿ ಒಬ್ಬನನ್ನು ಹತ್ಯೆ ಮಾಡಿದ್ದಾರೆ. ಹತ ನಕ್ಸಲರಲ್ಲಿ 11 ಮಹಿಳೆಯರಿದ್ದು, 25 ಲಕ್ಷ ರು. ಬಹುಮಾನ ಹೊಂ ದಿದ್ದ ಓರ್ವ ನಕ್ಸಲನೂ ಇದ್ದಾನೆ. ಈ ಮೂಲಕ ರಾಜ್ಯದಲ್ಲಿ ಈ ವರ್ಷ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲರ ಸಂಖ್ಯೆ 134ಕ್ಕೇರಿಕೆಯಾಗಿದೆ.
ಕೆರ್ಲಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗುಂಡಿನ ಕಾಳಗ ನಡೆದಿದ್ದು, 17 ಮಾವೋವಾದಿಗಳು ಹತರಾಗಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಒಬ್ಬ ನಕ್ಸಲನನ್ನು ಸಾಯಿಸಲಾಗಿದೆ. ಭದ್ರತಾ ಪಡೆಯ 4 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಳಿಕವೂ ಈ ಪ್ರದೇಶದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ. ಈ ವೇಳೆ ನಕ್ಸಲರಿಂದ ಎಕೆ- 47 ರೈಫಲ್, ಎಸ್‌ಎಲ್ಆರ್, ಐಎನ್‌ಎಸ್‌ಎಎಸ್ ರೈಫೆಲ್, 303 ರೈಫೆಲ್, ಬಿಜಿಎಲ್ ಸೇರಿದಂತೆ ದೊಡ್ಡ ಪ್ರಮಾಣದ ಬಂದೂಕು ಮತ್ತು ಸ್ಫೋಟಕ ವಸ್ತುಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಹಿಂಸೆಯಿಂದ ಬದಲಾವಣೆ ಅಸಾಧ್ಯ : ಶಾ
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿ, ‘ನಕ್ಸಲಿಸಂ ವಿರುದ್ಧ ಮತ್ತೊಂದು ದಾಳಿ ಆಗಿದೆ. ನಮ್ಮ ಭದ್ರತಾ ಸಿಬ್ಬಂದಿ ಸುಕ್ಮಾದಲ್ಲಿ 17 ನಕ್ಸಲರನ್ನು ಹತ್ಯೆ ಮಾಡಿ, ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಶಸ್ತ್ರಾಸ್ತ್ರ ಮತ್ತು ಹಿಂಸಾಚಾರದಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಕೇವಲ ಶಾಂತಿ ಮತ್ತು ಅಭಿವೃದ್ಧಿಯಿಂದ ಬದಲಾವಣೆ ಸಾಧ್ಯ’ ಎಂದಿದ್ದಾರೆ.