ಜಮ್ಮು ಮತ್ತು ಕಾಶ್ಮೀರ ಚುನಾವಣೆ: ಅತಂತ್ರ ಸ್ಥಿತಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಪಾತ್ರ?

| Published : Oct 08 2024, 01:02 AM IST / Updated: Oct 08 2024, 04:51 AM IST

ಸಾರಾಂಶ

ಜಮ್ಮು ಮತ್ತು ಕಾಶ್ಮೀರ ಚುನಾವಣಾ ಫಲಿತಾಂಶವು ಅತಂತ್ರ ವಿಧಾನಸಭೆಯನ್ನು ಸೂಚಿಸುತ್ತಿದ್ದು, ಲೆಫ್ಟಿನೆಂಟ್ ಗವರ್ನರ್ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ವಿಧಾನಸಭೆಯಲ್ಲಿ ಬಹುಮತ ಪಡೆಯಲು ಯಾವ ಪಕ್ಷಕ್ಕೂ ಸಾಧ್ಯವಾಗದಿದ್ದರೆ, ನೇಮಕಗೊಂಡ ಸದಸ್ಯರು ನಿರ್ಣಾಯಕ ಪಾತ್ರ ವಹಿಸಬಹುದು.

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಚುನಾವಣಾ ಫಲಿತಾಂಶವು ಅತಂತ್ರ ವಿಧಾನಸಭೆ ರಚನೆಗೆ ಕಾರಣವಾಗಬಹುದು ಎಂಬ ವರದಿಗಳ ಬೆನ್ನಲ್ಲೇ, ಇಂಥದ್ದೊಂದು ಸನ್ನಿವೇಶ ನಿರ್ಮಾಣವಾದರೆ ರಾಜ್ಯದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ (ಉಪ ರಾಜ್ಯಪಾಲ) ಪ್ರಮುಖ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಮಂಗಳವಾರದ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

ಕೆಲ ತಿಂಗಳ ಹಿಂದೆ ಕೇಂದ್ರ ಸರ್ಕಾರ ಕೆಲವೊಂದು ಕಾಯ್ದೆಗಳಿಗೆ ತಿದ್ದುಪಡಿ ಮೂಲಕ, ರಾಜ್ಯ ವಿಧಾನಸಭೆಗೆ 5 ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಉಪರಾಜ್ಯಪಾಲರಿಗೆ ನೀಡಿದೆ. ಈ ನೇಮಕ ವಿಧಾನಸಭೆಯ ಮೊದಲ ಕಲಾಪಕ್ಕೆ ಮೊದಲೇ ಮಾಡಬಹುದಾಗಿದೆ. ಅವರು ಇತರೆ ಸದಸ್ಯರಂತೆ ಮತದಾನ ಸೇರಿ ಎಲ್ಲಾ ಹಕ್ಕು ಹೊಂದಿದ್ದಾರೆ.

ಹೀಗಾಗಿ 90 ಸದಸ್ಯಬಲದ ವಿಧಾನಸಭೆಯಲ್ಲಿ ಒಂದು ವೇಳೆ ಎನ್‌ಸಿ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬರದೇ, ಬಿಜೆಪಿ 35ರ ಆಸುಪಾಸು ಬಂದು, ಇತರೆ ಪಕ್ಷೇತರ ಬಲ ಸಿಗುವಂತ ಪರಿಸ್ಥಿತಿ ನಿರ್ಮಾಣವಾದರೆ ಆಗ ಉಪರಾಜ್ಯಪಾಲರಿಂದ ನೇಮಕವಾದ 5 ಸದಸ್ಯರು ಸರ್ಕಾರ ರಚನೆಯಲ್ಲಿ ಪ್ರಮುಖರಾಗುತ್ತದೆ.

ಸರ್ಕಾರ ರಚನೆಗೆ ಕಾಂಗ್ರೆಸ್‌, ಎನ್‌ಸಿ ಜೊತೆ ಪಿಡಿಪಿ ಮೈತ್ರಿ?

ಶ್ರೀನಗರ: 10 ವರ್ಷದ ನಂತರ ವಿಧಾನಸಭೆ ಚುನಾವಣೆ ಎದುರಿಸಿರುವ ಕಾಶ್ಮೀರದಲ್ಲಿ ಮಂಗಳವಾರ ಫಲಿತಾಂಶ ಹೊರಬೀಳಲಿದ್ದು. ಫಲಿತಾಂಶ ಅತಂತ್ರವಾಗಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ನಡುವೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌, ಎನ್‌ಸಿ, ಪಿಡಿಪಿ ಒಂದಾಗಬಹುದು ಎಂಬ ಸುಳಿವನ್ನು ಎನ್‌ಸಿ ಅಧ್ಯಕ್ಷ ಫಾರೂಖ್‌ ರೂಖ್ ಅಬ್ದುಲ್ಲಾ ಪರೋಕ್ಷವಾಗಿ ನೀಡಿದ್ದಾರೆ.

ಚುನಾವಣಾ ಸಮೀಕ್ಷೆಗಳು ಕಾಶ್ಮೀರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದಿವೆ. ಹೀಗಾಗಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ನ್ಯಾಷನಲ್‌ ಕಾನ್ಫರೆನ್ಸ್ ಜೊತೆಗೆ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಕೂಡ ಕೈ ಜೋಡಿಸಬಹುದು ಎನ್ನುವ ವದಂತಿಗಳು ಹರಿದಾಡುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿದ ಎನ್‌ಸಿ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ, ಯಾಕೆ ಆಗಬಾರದು?’ ಎಂದಿದ್ದಾರೆ. ಈ ಮೂಲಕ ಫಲಿತಾಂಶ ಅತಂತ್ರವಾದರೆ, ಮೈತ್ರಿ ಮಾಡಿಕೊಳ್ಳಲು ಮುಕ್ತರಾಗಿದ್ದೇವೆ ಎನ್ನುವ ಸುಳಿವು ಬಿಟ್ಟು ಕೊಟ್ಟಿದ್ದಾರೆ.ಇನ್ನೊಂದೆಡೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಮತ್ತು ಎನ್‌ಸಿ ಜೊತೆ ಮೈತ್ರಿಗೆ ಸಿದ್ಧ ಎಂದು ಪಿಡಿಪಿ ನಾಯಕರು ಕೂಡಾ ಹೇಳಿದ್ದಾರೆ.