ಸಾರಾಂಶ
ದುಬೈ: ಟಿ20 ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ ತಮ್ಮ ಅಮೋಘ ಲಯ ಮುಂದುವರಿಸಿದ್ದಾರೆ. ಕೇವಲ ಒಂದು ವರ್ಷದ ಹಿಂದಷ್ಟೇ ಭಾರತ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ ಅಭಿಷೇಕ್, ಸ್ಥಿರ ಪ್ರದರ್ಶನದೊಂದಿಗೆ ಅತಿವೇಗವಾಗಿ 1000 ರನ್‌ನತ್ತ ಸಾಗಿದ್ದಾರೆ.
ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಅಭಿಷೇಕ್ ಪ್ರತಿ ಪಂದ್ಯದಲ್ಲೂ ಭಾರತಕ್ಕೆ ಆಸರೆಯಾಗಿದ್ದಾರೆ. ಆಡಿರುವ ಐದೂ ಇನ್ನಿಂಗ್ಸ್‌ಗಳಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 74 ರನ್ ಗಳಿಸಿದ್ದ ಶರ್ಮಾ, ಬುಧವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 37 ಎಸೆತದಲ್ಲಿ 75 ರನ್ ಚಚ್ಚಿದರು.
25 ಎಸೆತದಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್, ಅಂ.ರಾ. ಟಿ20ಯಲ್ಲಿ 5ನೇ ಬಾರಿಗೆ 25 ಅಥವಾ ಅದಕ್ಕಿಂತ ಕಡಿಮೆ ಎಸೆತದಲ್ಲಿ ಅರ್ಧಶತಕ ಸಿಡಿಸಿದ ಹಿರಿಮೆಗೆ ಪಾತ್ರರಾದರು. ಪವರ್-ಪ್ಲೇನಲ್ಲಿ 12 ಸಿಕ್ಸರ್!
ಅಭಿಷೇಕ್ ಶರ್ಮಾ ಈ ಏಷ್ಯಾಕಪ್‌ನಲ್ಲಿ 17 ಸಿಕ್ಸರ್ ಸಿಡಿಸಿದ್ದಾರೆ. ಇದರಲ್ಲಿ 12 ಸಿಕ್ಸರ್‌ಗಳು ಪವರ್-ಪ್ಲೇನಲ್ಲೇ ದಾಖಲಾಗಿವೆ. ಯುಎಇನ ನಿಧಾನಗತಿ ಪಿಚ್‌ಗಳಲ್ಲಿ ಇದು ಎಷ್ಟು ದೊಡ್ಡ ಸಾಧನೆ ಎಂದರೆ, ಶ್ರೀಲಂಕಾ ತಂಡ ಪವರ್-ಪ್ಲೇನಲ್ಲಿ ಗಳಿಸಿರುವುದು 12 ಸಿಕ್ಸರ್‌ಗಳಷ್ಟೇ. ಪಾಕಿಸ್ತಾನ 7 ಸಿಕ್ಸರ್ ಮಾತ್ರ ದಾಖಲಿಸಿದೆ.
ಶೀಘ್ರ ಏಕದಿನ ತಂಡಕ್ಕೆ ಶರ್ಮಾ?
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಅಭಿಷೇಕ್ ಶರ್ಮಾ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಈವರೆಗೂ ಬರೀ ಟಿ20ಯಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಿರುವ ಪಂಜಾಬ್ ಬ್ಯಾಟರ್‌ನ ಅವಶ್ಯಕತೆ ಏಕದಿನ ತಂಡಕ್ಕೂ ಇದೆ ಎಂದು ಹಲವರು ವಿಶ್ಲೇಷಿಸುತ್ತಿದ್ದಾರೆ. ತಕ್ಷಣಕ್ಕೆ ಇಲ್ಲದಿದ್ದರೂ ರೋಹಿತ್ ಶರ್ಮಾ ನಿವೃತ್ತಿ ಪಡೆದ ಮೇಲೆ ಆ ಸ್ಥಾನ ಅಭಿಷೇಕ್‌ಗೇ ಸಿಗುವುದು ಖಚಿತ ಎಂದೇ ಹೇಳಲಾಗುತ್ತಿದೆ.