ರಾಹುಲ್‌ ವಿರುದ್ಧ ಮೋದಿ ‘ಬೆಂಕಿ’ ದಾಳಿ

| Published : Apr 03 2024, 01:41 AM IST / Updated: Apr 03 2024, 05:29 AM IST

ಸಾರಾಂಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶವೇ ಹೊತ್ತಿ ಉರಿಯುತ್ತದೆ ಎಂದು ವಿರೋಧ ಪಕ್ಷದ ರಾಜಮನೆತನದ ‘ರಾಜಕುಮಾರ’ ಘೋಷಿಸಿದ್ದಾರೆ.

ರುದ್ರಾಪುರ (ಉತ್ತರಾಖಂಡ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶವೇ ಹೊತ್ತಿ ಉರಿಯುತ್ತದೆ ಎಂದು ವಿರೋಧ ಪಕ್ಷದ ರಾಜಮನೆತನದ ‘ರಾಜಕುಮಾರ’ ಘೋಷಿಸಿದ್ದಾರೆ. 60 ವರ್ಷಗಳ ಕಾಲ ದೇಶವನ್ನು ಆಳಿದ ಅವರು, ನಮ್ಮ 10 ವರ್ಷದ ಆಳ್ವಿಕೆ ಸಹಿಸದೇ ದೇಶಕ್ಕೆ ಬೆಂಕಿ ಹಚ್ಚುವ ಬಗ್ಗೆ ಮಾತನಾಡುತ್ತಿದ್ದಾರೆ. ಇಂಥವರನ್ನು ಮನೆಗೆ ಕಳಿಸಬೇಕು’ ಎಂದು ಕರೆ ನೀಡಿದ್ದಾರೆ.

ಉತ್ತರಾಖಂಡದ ರುದ್ರಾಪುರದಲ್ಲಿ ನಡೆದ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ಮಾತನಾಡಿದರು.ಇತ್ತೀಚೆಗೆ ದಿಲ್ಲಿ ರಾಮಲೀಲಾ ಮೈದಾನದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡು ಈ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಸಂಚು ನಡೆಸಿದೆ. ಒಂದು ವೇಳೆ ಅದು ಗೆದ್ದರೆ ದೇಶಕ್ಕೆ ಬೆಂಕಿ ಬೀಳುತ್ತದೆ’ ಎಂದಿದ್ದರು. ಇದಕ್ಕೆ ಉತ್ತರಿಸಿದ ಮೋದಿ ‘ಈ ರೀತಿಯ ಭಾಷೆ ಪ್ರಜಾಪ್ರಭುತ್ವದ ಭಾಷೆಯೇ? ಇದನ್ನು ಬಳಸುವ ಜನರನ್ನು ಹುಡುಕು ಹುಡುಕಿ ಸ್ವಚ್ಛ ಮಾಡಿ. ಇಂಥವರನ್ನು ಅಖಾಡದಲ್ಲಿ ಇರಲು ಬಿಡಬೇಡಿ. ಏಕೆಂದರೆ ಇವರಿಗೆ ಪ್ರಜಾಸತ್ತೆ ಮೇಲೆ ನಂಬಿಕೆ ಇಲ್ಲ’ ಎಂದು ಕರೆ ನೀಡಿದರು.

ಭ್ರಷ್ಟರ ವಿರುದ್ಧ ನಿರಂತರ ಪ್ರಹಾರ:

‘ಇದೇ ವೇಳೆ ಭ್ರಷ್ಟಾಚಾರದಿಂದ ಕೇಸು ಹಾಕಿಸಿಕೊಂಡವರು, ಜೈಲು ಸೇರಿದವರು ಇಂದು ನನ್ನನ್ನು ಬೈಯುತ್ತಿದ್ದಾರೆ. ಅವರು ಬೈಲಿ ಬಿಡಿ ನನಗೇನೂ ಚಿಂತೆಯಿಲ್ಲ’ ಎಂದು ಮೋದಿ ವ್ಯಂಗ್ಯವಾಡಿದರು.‘ಇಂದು ಚುನಾವಣೆಯಲ್ಲಿ 2 ಪಂಗಡಗಳಾಗಿವೆ. ಒಂದು ಗುಂಪಿನಲ್ಲಿ ಭ್ರಷ್ಟರು, ರಾಜವಂಶಸ್ಥರು ಗುಂಪುಗೂಡಿದ್ದಾರೆ, ಈ ಭ್ರಷ್ಟರು ಮೋದಿಯವರನ್ನು ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ, ಆದರೆ ‘ಭ್ರಷ್ಟಾಚಾರ ತೊಲಗಿಸಿ’ ಎಂದು ನಾವು ಹೇಳುತ್ತಿದ್ದೇವೆ. ಆದರೆ ‘ಭ್ರಷ್ಟರನ್ನು ಉಳಿಸಿ ಎಂದು ವಿಪಕ್ಷ ಹೇಳುತ್ತಿವೆ’ ಎಂದು ಚಾಟಿ ಬೀಸಿದರು.