ಭಾರತೀಯ ಚಿತ್ರರಂಗದ ದೈತ್ಯ ಪ್ರತಿಭೆ, ತಮ್ಮ ಗಂಭೀರ ಅಭಿನಯ ಹಾಗೂ ವಿಶಿಷ್ಟ ಸಂಭಾಷಣಾ ಶೈಲಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದ ಹಿರಿಯ ನಟ ನಾನಾ ಪಾಟೇಕರ್‌ ಗುರುವಾರ ಮುಂಜಾನೆ ಗೋವಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

-ಪುಣೆ ಫಾರ್ಮ್‌ಹೌಸ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

-ಗುರುವಾರ ಗೋವಾದಲ್ಲಿ ಹೃದಯಾಘಾತದಿಂದ ಕೊನೆಯುಸಿರು

-ಹಿಂದಿ, ಮರಾಠಿ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಕಲಾವಿದ

-ಗಂಭೀರ ಅಭಿನಯ, ವಿಶಿಷ್ಟ ಸಂಭಾಷಣಾ ಶೈಲಿಯಿಂದ ಹೆಸರುವಾಸಿ

-ನಟನ ಅಗಲಿಕೆಗೆ ಲಕ್ಷಾಂತರ ಅಭಿಮಾನಿಗಳು, ಗಣ್ಯರ ಕಂಬನಿಪಿಟಿಐ ಪಣಜಿ

ಭಾರತೀಯ ಚಿತ್ರರಂಗದ ದೈತ್ಯ ಪ್ರತಿಭೆ, ತಮ್ಮ ಗಂಭೀರ ಅಭಿನಯ ಹಾಗೂ ವಿಶಿಷ್ಟ ಸಂಭಾಷಣಾ ಶೈಲಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದ ಹಿರಿಯ ನಟ ನಾನಾ ಪಾಟೇಕರ್‌ ಗುರುವಾರ ಮುಂಜಾನೆ ಗೋವಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಚಿತ್ರರಂಗ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಅವರ ಅಗಲಿಕೆಗೆ ಇಡೀ ದೇಶದ ಕಂಬನಿ ಮಿಡಿದಿದೆ. ನಾನಾ ಅವರಿಗೆ 76 ವರ್ಷ ವಯಸ್ಸಾಗಿತ್ತು. ಗೋವಾದ ದೊನಾ ಪೌಲಾ ಬಳಿಯಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದ ಅವರಿಗೆ ಮುಂಜಾನೆ ಸುಮಾರು 3:30ರ ಸುಮಾರಿಗೆ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಬೆಳಿಗ್ಗೆ 5:10ಕ್ಕೆ ಕೊನೆಯುಸಿರೆಳೆದರು. ಗೋವಾದ ಬಾಂಬೋಲಿಮ್‌ನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಸಂಜೆ ಅವರ ಪಾರ್ಥಿವ ಶರೀರವನ್ನು ಪುಣೆಗೆ ಕರೆತರಲಾಯಿತು. ಪುಣೆಯಲ್ಲಿ ಅಂತಿಮ ಸಂಸ್ಕಾರ: ಗುರುವಾರ ಸಂಜೆ 5 ಗಂಟೆ ಸುಮಾರಿಗೆ ನಾನಾ ಅವರ ಮೃತದೇಹವನ್ನು ಮಹಾರಾಷ್ಟ್ರದ ಪುಣೆಯ ಹೊರವಲಯದಲ್ಲಿರುವ ದೋಂಜೆಯ ಅವರ ಫಾರ್ಮ್‌ಹೌಸ್‌ಗೆ ತರಲಾಯಿತು. ನಂತರ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಈ ವೇಳೆ ಸಾವಿರಾರು ಅಭಿಮಾನಿಗಳು, ಗಣ್ಯರು, ಚಿತ್ರರಂಗದ ಕಲಾವಿದರು ಆಗಮಿಸಿ ನಟನ ಅಂತಿಮ ದರ್ಶನ ಪಡೆದುಕೊಂಡರು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಮ್‌ಹೌಸ್‌ ಆವರಣದಲ್ಲಿಯೇ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಹಿಂದಿ, ಮರಾಠಿ ಚಿತ್ರಗಳಲ್ಲಿ ಛಾಪು:ನಾನಾ ಅವರು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುರುದ್-ಜಂಜಿರಾದ ಮರಾಠಿ ಕುಟುಂಬದಲ್ಲಿ ವಿಶ್ವನಾಥ್ ಪಾಟೇಕರ್ ಆಗಿ ಜನಿಸಿದರು. ನಂತರ ಚಿತ್ರರಂಗ ಪ್ರವೇಶಿಸಿದ ಅವರು ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ‘ಪರಿಂದಾ’, ‘ಕ್ರಾಂತಿವೀರ್’, ‘ತಿರಂಗಾ’, ‘ಪ್ರಹಾರ್’ ಹಾಗೂ ‘ಖಾಮೋಶಿ’ ಮುಂತಾದ ಚಿತ್ರಗಳ ಮೂಲಕ ಅಮೋಘ ನಟನೆಯನ್ನು ಪ್ರದರ್ಶಿಸಿದ ಅವರಿಗೆ 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ದೇಶದ 4ನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಶ್ರೀ’ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಒಲಿದುಬಂದವು. ನಾನಾ ನಟನೆಯ ಜೊತೆಗೆ ಜಲಸಂರಕ್ಷಣೆ ಮತ್ತು ರೈತರ ಕಲ್ಯಾಣಕ್ಕಾಗಿ ‘ನಾಮ್ ಫೌಂಡೇಶನ್’ ಸ್ಥಾಪಿಸಿ ಸಾಮಾಜಿಕ ರಂಗದಲ್ಲೂ ಸಕ್ರಿಯರಾಗಿದ್ದರು.

====

** 3 ದಿನ ಮುನ್ನವೇ ಸಾವಿನ

ಮುನ್ಸೂಚನೆ ನೀಡಿದ್ದ ನಾನಾ!

-ನಾಳೆ ಇರುತ್ತೇನೆಯೋ ಇಲ್ಲವೋ ಎಂದು ಮಾರ್ಮಿಕ ನುಡಿ-ಅದಾಗಿ ಮೂರೇ ದಿನಕ್ಕೆ ಇಹಲೋಕ ಯಾತ್ರೆಗೆ ವಿದಾಯ

ಪಿಟಿಐ ಪಣಜಿತಮ್ಮ ಸಾವಿಗೂ ಕೇವಲ 3 ದಿನ ಮುನ್ನ ನಾನಾ ಪಾಟೇಕರ್‌ ಕಾರ್ಯಕ್ರಮವೊಂದರಲ್ಲಿ, ‘ಒಂದಲ್ಲ ಒಂದು ದಿನ ನಾವೆಲ್ಲರೂ ಹೋಗಲೇಬೇಕು. ನಾಳೆ ನಾನು ಇಲ್ಲೇ ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ’ ಎಂದಿದ್ದರು ಎಂದು ತಿಳಿದುಬಂದಿದೆ. ಇದು ಸಾವು ಅವರಿಗೆ ಅಂದೇ ಮುನ್ಸೂಚನೆ ನೀಡಿತ್ತೇ ಎಂಬ ಪ್ರಶ್ನೆಯನ್ನು ಮೂಡಿಸಿದೆ.

ಆ.4ರಂದು ಪಣಜಿ ಬಳಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪಾಟೇಕರ್, ತಮ್ಮ ಆಪ್ತ ಸ್ನೇಹಿತ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಅವರನ್ನು ಸ್ಮರಿಸಿಕೊಂಡಿದ್ದರು.ಆ ವೇಳೆ, ‘ನಾವೆಲ್ಲರೂ ಎಂದಾದರೂ ಒಂದು ದಿನ ಈ ಲೋಕದಿಂದ ನಿರ್ಗಮಿಸಲೇಬೇಕು. ನಾಳೆ ನಾನು ಇಲ್ಲಿರುತ್ತೇನೆಯೋ ಇಲ್ಲವೋ ನನಗೆ ತಿಳಿದಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಆ ಸಮಯ ಬಂದೇ ಬರುತ್ತದೆ. ಆದರೆ ಆ ಸಮಯ ಬರುವ ಮೊದಲು, ನಾನು ಮಾಡಲು ಬಯಸಿದ್ದನ್ನು ಮಾಡಲು ಸಾಧ್ಯವಾಯಿತೇ? ನಾನು ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆಯೇ? ಎಂದು ನಾವೆಲ್ಲರೂ ಆಲೋಚಿಸಬೇಕು’ ಎಂದಿದ್ದರು.

=========

ಸಾವಿಗೂ ಮುನ್ನ ಗೆಳೆಯಗೆಸಂದೇಶ ಕಳಿಸಿದ್ದ ನಾನಾ

- ರಾತ್ರಿ 2.30ಕ್ಕೇ ಆರೋಗ್ಯ ಸರಿಯಿಲ್ಲ ಎಂಬ ಸಂದೇಶ- ಸ್ನೇಹಿತ ಮನೆಗೆ 4ಕ್ಕೆ ಧಾವಿಸಿದಾಗ ನಾನಾ ಸ್ಥಿತಿ ಗಂಭೀರ

- ಆಸ್ಪತ್ರೆಗೆ ಕರೆದೊಯ್ದು ಹೃದಯ ಮಸಾಜ್‌, ಅಷ್ಟರಲ್ಲಿ ಸಾವುಪಣಜಿ: ‘ಸಾವಿಗೆ ಕೆಲವೇ ಗಂಟೆಗಳ ಮೊದಲು, ಅಂದರೆ ಗುರುವಾರ ನಸುಕಿನ ಜಾವ 2.30ರ ಸುಮಾರಿಗೆ ನಾನಾ ಪಾಟೇಕರ್ ತಮ್ಮ ಸ್ನೇಹಿತನಿಗೆ ಸಂದೇಶ ಕಳಿಸಿ, ತಮ್ಮ ಆರೋಗ್ಯ ಸರಿಯಿಲ್ಲ ಎಂದು ತಿಳಿಸಿದ್ದರು. ಆದರೆ ವೈದ್ಯರು ನಾನಾ ಮನೆಗೆ ಗುವಷ್ಟರಲ್ಲಿ ನಾನಾ ಸ್ಥಿತಿ ವಿಷಮಿಸಿತ್ತು‘ ಎಂದು ವೈದ್ಯರೊಬ್ಬರು ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ ನಾನಾ ಅವರ ಕೊನೆಯ ಕ್ಷಣಗಳನ್ನುವಿವರಿಸಿದ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಶೇಖರ್ ಸಾಲ್ಕರ್, ‘ನಾನಾ ತಮಗೆ ಹುಷಾರಿಲ್ಲ ಎಂದು ಸ್ನೇಹಿತರಿಗೆ ನಸುಕಿನ 2.20ಕ್ಕೆ ಸಂದೇಶ ಕಳಿಸಿದ್ದರು. ಆದರೆ ಗೆಳೆಯ ನಿದ್ರೆಯಲ್ಲಿದ್ದುದರಿಂದ ಮೆಸೇಜ್‌ ನೋಡಿರಲಿಲ್ಲ. ನಂತರ ನಾನಾ ಸ್ವತಃ ಕರೆ ಮಾಡಿ ವಿಷಯ ತಿಳಿಸಿದರು. ಬಳಿಕ 4 ಗಂಟೆಗೆ ಸ್ನೇಹಿತ ನಾನಾ ಅವರ ಅಪಾರ್ಟ್‌ಮೆಂಟ್‌ಗೆ ಧಾವಿಸಿದರು. ಆಗ ನಾನಾ ತೀವ್ರವಾಗಿ ಬೆವರುತ್ತಿದ್ದು, ಇನ್ನೇನು ಪ್ರಜ್ಞಾಹೀನ ಸ್ಥಿತಿಗೆ ತಲುಪಲಿದ್ದರು. ಆ ವೇಳೆ ಅವರ ಸಹಾಯಕ ಜತೆಗಿದ್ದ. ನಂತರ ಅವರನ್ನುಸನಿಹದ ಡೋನಾಪೌಲಾದಲ್ಲಿರುವ ಮಣಿಪಾಲ್‌ ಆಸ್ಪತ್ರೆಗೆ ಕರೆತರಲಾಯಿತು’ ಎಂದು ಹೇಳಿದರು.‘ಆಸ್ಪತ್ರೆಯಲ್ಲಿ ನಾನಾ ಪ್ರತಿಕ್ರಿಯೆ ನೀಡಲಿಲ್ಲ. ಅವರ ಆರೋಗ್ಯ ಅಷ್ಟು ಹದಗೆಟ್ಟಿತ್ತು. ಪ್ರತಿಕ್ರಿಯಿಸದ ಕಾರಣ ವೈದ್ಯರು ಹೃದಯ ಮಸಾಜ್ ಅನ್ನು ಪ್ರಾರಂಭಿಸಿದರು. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದರೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು’ ಎಂದು ಸಾಲ್ಕರ್‌ ಹೇಳಿದರು.