ಉಚಿತ- ಸುಪ್ರೀಂ ಚಾಟಿ ಬೀಸಿದರೂ ನಿಲ್ಲದ ಗ್ಯಾರಂಟಿ ಘೋಷಣೆ- ತಮಿಳ್ನಾಡು ಚುನಾವಣೆ ಹಿನ್ನೆಲೆಯಲ್ಲಿ ಭರವಸೆ ಮಳೆಶೀಘ್ರ ಚುನಾವಣೆ ಎದುರಿಸಲು ಸಜ್ಜಾಗಿರುವ ತಮಿಳ್ನಾಡಲ್ಲಿ ಮುಂದುವರೆದ ರಾಜಕೀಯ ಪಕ್ಷಗಳ ಗ್ಯಾರಂಟಿ ಘೋಷಣೆ

ಅಣ್ಣಾಡಿಎಂಕೆ ಗೆದ್ದರೆ ತಕ್ಷಣವೇ ಪ್ರತಿ ಕುಟುಂಬಕ್ಕೆ ಒಂದು ಬಾರಿಗೆ ತಲಾ 10000 ರು.ನಗದು ವಿತರಣೆಯ ಘೋಷಣೆ

ಇದರ ಜೊತೆ ನಿರುದ್ಯೋಗಿ ಪದವೀಧರರಿಗೆ ಮಾಸಿಕ ₹2000, ಪಿಯು ಪಾಸಾದವರಿಗೆ ತಲಾ ₹1000 ಸ್ಟೈಫಂಡ್‌

₹1000 ಪೊಂಗಲ್ ಪ್ರೋತ್ಸಾಹಧನ, ಕೈಮಗ್ಗ ನೇಕಾರರಿಗೆ 450, ಪವರ್‌ಲೂಮ್ಗೆ 1400 ಯುನಿಟ್‌ ಉಚಿತ ವಿದ್ಯುತ್‌

ಫುಟ್ಬಾತ್‌ ವ್ಯಾಪಾರಿಗಳ ಸಹಕಾರಿ ಸಾಲ ಮನ್ನಾ, ಮೀನುಗಾರಿಕೆ ನಿಷೇಧದ ಅವಧಿಯ ನೆರವು ₹12000ಕ್ಕೇರಿಕೆ

==ಪಿಟಿಐ ಚೆನ್ನೈ


ತಮಿಳುನಾಡು ವಿಧಾನಸಭೆ ಚುನಾವಣೆ ಕೆಲವೇ ದಿನ ಇರುವಾಗ, ಬಿಜೆಪಿ ಮಿತ್ರಪಕ್ಷ ಎಐಎಡಿಎಂಕೆ, ಪ್ರತಿ ಕುಟುಂಬಕ್ಕೆ ಒಂದು ಸಲ 10,000 ರು. ಪರಿಹಾರ ಸೇರಿ ಕೆಲವು ‘ಗ್ಯಾರಂಟಿ ಭರವಸೆ’ಗಳನ್ನು ಘೋಷಿಸಿದೆ. ಪುಕ್ಕಟೆ ಯೋಜನೆಗಳ ಘೋಷಣೆಯಿಂದ ಆರ್ಥಿಕತೆಗೆ ಹೊಡೆತ ಬೀಳುತ್ತದೆ ಎಂದು ಸುಪ್ರೀಂ ಕೋರ್ಟು ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ಚಾಟಿ ಬೀಸಿದ ಬೆನ್ನಲ್ಲೇ ಈ ಘೋಷಣೆಗಳು ಹೊರಬಿದ್ದುವೆ.

ಪಕ್ಷದ ಹಿರಿಯ ನಾಯಕಿ, ಮಾಜಿ ಸಿಎಂ ಜಯಲಲಿತಾ ಅವರ ಜನ್ಮದಿನದಂದು ಪಕ್ಷದ ಅಧ್ಯಕ್ಷ ಎಡಪ್ಪಾಡಿ ಕೆ. ಪಳನಿಸ್ವಾಮಿ ಈ ಘೋಷಣೆ ಮಾಡಿದ್ದಾರೆ.

ಏನು ಭರವಸೆ?:

ಅಧಿಕಾರಕ್ಕೆ ಬಂಧ ತಕ್ಷಣ, ಡಿಎಂಕೆ ಕ್ರಮಗಳಿಂದಾಗಿ ಬೆಲೆ ಏರಿಕೆಯಿಂದ ತತ್ತರಿಸಿರುವ ಪ್ರತಿ ಕುಟುಂಬಕ್ಕೆ ಒಂದು ಸಲ 10,000 ರು. ಪರಿಹಾರ ನೀಡಲಾಗುವುದು. ಉದ್ಯೋಗಕ್ಕಾಗಿ ಕಾಯುತ್ತಿರುವ ಪದವಿ ಪಡೆದವರಿಗೆ ತಿಂಗಳಿಗೆ 2,000 ರು. ನೀಡಲಾಗುವುದು, ಪಿಯುಸಿ-2ವರೆಗೆ ಓದಿ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರುವವರಿಗೆ 1,000 ರು. ಸ್ಟೈಫಂಡ್ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.

ಮೀನುಗಾರಿಕೆ ನಿಷೇಧದ ಸಮಯಲ್ಲಿ ನೀಡಲಾಗುವ ಮೀನುಗಾರರ ಪರಿಹಾರ 8,000 ರು.ಗಳಿಂದ 12,000 ರು.ಗಳಿಗೆ ಹೆಚ್ಚಳ, ಹಬ್ಬದ ಉಡುಗೊರೆಯಾಗಿ ಪಡಿತರ ಚೀಟಿದಾರರಿಗೆ 1,000 ರು. ಪೊಂಗಲ್ ಪ್ರೋತ್ಸಾಹಧನ, ಕೈಮಗ್ಗ ನೇಕಾರರಿಗೆ 450 ಯೂನಿಟ್‌ಗಳವರೆಗೆ ಮತ್ತು ಪವರ್‌ಲೂಮ್ ನೇಕಾರರಿಗೆ 1,400 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌, ಫುಟ್‌ಪಾತ್‌ ವ್ಯಾಪಾರಿಗಳ ಸಹಕಾರಿ ಬ್ಯಾಂಕ್ ಸಾಲ ಮನ್ನಾ- ಇವು ಇತರ ಘೋಷಣೆಗಳು.

ಇತ್ತೀಚೆಗೆ ಪಳನಿಸ್ವಾಮಿ ರಾಜ್ಯದ ಪ್ರತಿ ರೇಷನ್‌ ಕಾರ್ಡ್‌ದಾರ ಮಹಿಳೆಗೆ 2000 ರು. ಮಾಸಿಕ ಸಹಾಯಧನ ಪ್ರಕಟಿಸಿದ್ದರು.