ರಾಹುಲ್‌ ಪೌರತ್ವ ಪ್ರಶ್ನಿಸಿದ್ದ ಅರ್ಜಿ ವಜಾ

| N/A | Published : May 06 2025, 12:19 AM IST / Updated: May 06 2025, 05:15 AM IST

Rahul Gandhi

ಸಾರಾಂಶ

  ರಾಹುಲ್‌ ಗಾಂಧಿ ಅವರ  ಪೌರತ್ವ ಪ್ರಶ್ನಿಸಿ  ಎಸ್‌. ವಿಘ್ನೇಶ್‌ ಶಿಶಿರ್‌ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾಗೊಳಿಸಿದೆ.

 ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಭಾರತೀಯ ಪೌರತ್ವ ಪ್ರಶ್ನಿಸಿ ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಸ್‌. ವಿಘ್ನೇಶ್‌ ಶಿಶಿರ್‌ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾಗೊಳಿಸಿದೆ. ‘ರಾಹುಲ್‌ ಅವರು ದ್ವಿಪೌರತ್ವ (ಭಾರತ ಮತ್ತು ಬ್ರಿಟನ್‌) ಹೊಂದಿದ್ದು, ಸಂವಿಧಾನದ 84(ಎ) ವಿಧಿಯಡಿ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅನರ್ಹರಾಗುತ್ತಾರೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. 

ಇದರ ವಿಚಾರಣೆ ನಡೆಸಿದ ಲಖನೌ ಪೀಠದ ನ್ಯಾ। ಎ.ಆರ್‌. ಮಸೂದಿ ಮತ್ತು ರಾಜೀವ್‌ ಸಿಂಗ್‌, ‘ಈ ಪ್ರಕರಣವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ’ ಎಂದು ಹೇಳಿ ಅರ್ಜಿ ವಜಾ ಮಾಡಿತು ಹಾಗೂ ಇತರ ಪರ್ಯಾಯ ಕಾನೂನು ಪರಿಹಾರಗಳನ್ನು ಅನ್ವೇಷಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ಏ.21ರಂದು ಈ ಅರ್ಜಿಯ ವಿಚಾರಣೆ ನಡೆದಾಗ, ‘ರಾಹುಲ್‌ ಬ್ರಿಟನ್‌ ಪ್ರಜೆ ಎನ್ನಲಾಗುತ್ತಿರುವ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಬ್ರಿಟನ್‌ ಸರ್ಕಾರಕ್ಕೆ ಪತ್ರ ಬರೆದಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಇದರ ಉತ್ತರ ಸಲ್ಲಿಸಲು ಕೋರ್ಟ್‌ ಸರ್ಕಾರಕ್ಕೆ ಮೇ 5ರ ಗಡುವನ್ನು ನೀಡಿತ್ತು.

ಈ ಹಿಂದೆ ರಾಜ್ಯಸಭಾ ಮಾಜಿ ಸದಸ್ಯ ಸುಬ್ರಮಣಿಯನ್‌ ಸ್ವಾಮಿ, ರಾಹುಲ್‌ ದ್ವಿಪೌರತ್ವ ಹೊಂದಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿದ್ದರು. ಆಗ ಅವರಿಗೆ ಸಚಿವಾಲಯ ನೋಟಿಸ್‌ ನೀಡಿತ್ತು.

ಮೋದಿ-ರಾಹುಲ್‌ ಸಭೆ: ಸಿಬಿಐ ಮುಖ್ಯಸ್ಥರ ನೇಮಕದ ಚರ್ಚೆ

ನವದೆಹಲಿ: ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಂದಿನ ಮುಖ್ಯಸ್ಥರ ಆಯ್ಕೆ ಬಗ್ಗೆ ಚರ್ಚಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಸಂಜೀವ್‌ ಖನ್ನಾ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ.ಪ್ರಸ್ತುತ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರ ಅಧಿಕಾರಾವಧಿ ಮೇ 25 ರಂದು ಕೊನೆಗೊಳ್ಳಲಿದೆ. ಹೀಗಾಗಿ ಈ ಸಭೆ ನಡೆದಿದೆ.

ಸಿಬಿಐ ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆ ವಿಪಕ್ಷ ನಾಯಕ ಇರುತ್ತಾರೆ. ಸಿಬಿಐ ನಿರ್ದೇಶಕ ಹುದ್ದೆ 2 ವರ್ಷದ್ದಾಗಿದ್ದು, ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.1986ರ ಬ್ಯಾಚ್‌ನ ಕರ್ನಾಟಕ ಕೇಡರ್‌ ಐಪಿಎಸ್ ಅಧಿಕಾರಿ ಸೂದ್, 2023ರ ಮೇನಲ್ಲಿ ಸಿಬಿಐ ನಿರ್ದೇಶಕರಾಗಿದ್ದರು.