ಸಾರಾಂಶ
ಅಮರಾವತಿ: ರಾಜ್ಯದಲ್ಲಿ ಜನಸಂಖ್ಯೆ ಪ್ರಮಾಣ ಕುಸಿತದ ಬಗ್ಗೆ ಹಲವು ಬಗ್ಗೆ ಹಲವು ಸಲ ಗಂಭಿರ ಕಳವಳ ವ್ಯಕ್ತಪಡಿಸಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಾಜ್ಯದಲ್ಲಿ ಜನಸಂಖ್ಯಾ ಕುಸಿತ ತಡೆಯಲು ಅಗತ್ಯವಾದ ನೀತಿಯನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ನಾಯ್ಡು, ಜನಸಂಖ್ಯೆಯನ್ನು ನಾವು ರಾಜ್ಯದ ಅತಿದೊಡ್ಡ ಆರ್ಥಿಕ ಸಂಪನ್ಮೂಲವಾಗಿ ಪರಿಗಣಿಸಬೇಕೇ ಹೊರತೂ ಹೊರೆಯಾಗಿ ಅಲ್ಲ. ಜನಸಂಖ್ಯೆ, ದೇಶದ ಅತಿದೊಡ್ಡ ಆರ್ಥಿಕ ಶಕ್ತಿ. ಹೀಗಾಗಿಯೇ ಜನಸಂಖ್ಯೆ ಹೆಚ್ಚಳಕ್ಕೆ ಅಗತ್ಯ ನೀತಿಯನ್ನು ಶೀಘ್ರವೇ ಪ್ರಕಟಿಸಲಾಗುವುದು.
ಏರುತ್ತಿರುವ ಜೀವನ ವೆಚ್ಚ ದಂಪತಿ ಮಕ್ಕಳನ್ನು ಹೊಂದರಿರುವಂತೆ ಮಾಡುತ್ತಿದೆ. ಮತ್ತೊಂದೆಡೆ ಭವಿಷ್ಯದಲ್ಲಿ ಸಂಸತ್ತಿನಲ್ಲಿ ಸ್ಥಾನ ಬಲ ಹೆಚ್ಚಿದಾಗ ರಾಜ್ಯದ ಜನಸಂಖ್ಯೆ ಕಡಿಮೆ ಇದ್ದರೆ ನಮ್ಮ ಪ್ರಾತಿನಿಧ್ಯ ಕಡಿಮೆಯಾಗುತ್ತದೆ. ಜೊತೆಗೆ ಜನನ ಪ್ರಮಾಣ ಕುಸಿತವು ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಹೆಚ್ಚಿನ ಮಕ್ಕಳನ್ನು ಹೊಂದುವ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಕುರಿತು ಈ ಹಿಂದೆ ನಾಯ್ಡು ಸುಳಿವು ನೀಡಿದ್ದರು. ಜೊತೆಗೆ 2ಕ್ಕಿಂತ ಹೆಚ್ಚಿನ ಮಕ್ಕಳಿದ್ದವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಇದ್ದ ಅನರ್ಹತೆ ತೆಗೆದುಹಾಕಿದ್ದರು.