ವಕ್ಫ್‌ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ನಲುಗುತ್ತಿರುವ ಬಂಗಾಳ : ಸರ್ಕಾರದ ವಿರುದ್ಧ ಜನ ಸಾಮಾನ್ಯರ ಅಭಿಯಾನ

| N/A | Published : Apr 18 2025, 12:37 AM IST / Updated: Apr 18 2025, 06:14 AM IST

ವಕ್ಫ್‌ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ನಲುಗುತ್ತಿರುವ ಬಂಗಾಳ : ಸರ್ಕಾರದ ವಿರುದ್ಧ ಜನ ಸಾಮಾನ್ಯರ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ವಕ್ಫ್‌ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ನಲುಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ವಿರುದ್ಧ ಜನಸಾಮಾನ್ಯರು ಅಭಿಯಾನವೊಂದನ್ನು ಆರಂಭಿಸಿದ್ದಾರೆ.

 ಕೋಲ್ಕತಾ: ಪ್ರಸ್ತುತ ವಕ್ಫ್‌ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ನಲುಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ವಿರುದ್ಧ ಜನಸಾಮಾನ್ಯರು ಅಭಿಯಾನವೊಂದನ್ನು ಆರಂಭಿಸಿದ್ದಾರೆ.

‘ಗೂಂಡಾ ಸರ್ಕಾರದ ಲೂಟಿ ತಂತ್ರವನ್ನು ಬಂಗಾಳಿಗಳು ಇನ್ನು ಸಹಿಸುವುದಿಲ್ಲ’ ಎಂಬ ಘೋಷಣೆಯಡಿ ಶುರುವಾಗಿರುವ ಈ ಅಭಿಯಾನವು, ಸರ್ಕಾರಿ ವ್ಯವಸ್ಥೆಯ ವಿರುದ್ಧ ನಿಲ್ಲುವಂತೆ ಮತದಾರರನ್ನು ಪ್ರೋತ್ಸಾಹಿಸುತ್ತಿದ್ದು, ‘ಟಿಎಂಸಿಗೆ ಮತ ಹಾಕದೆ ಬಂಗಾಳವನ್ನು ಈ ಶಾಪದಿಂದ ಮುಕ್ತಗೊಳಿಸಿ’ ಎಂದು ಕರೆ ನೀಡುತ್ತಿದ್ದಾರೆ. ಇದಕ್ಕಾಗಿ www.soibenaaarbangla.com ಎಂಬ ವೆಬ್‌ಸೈಟ್‌ ಅನ್ನೂ ಸೃಷ್ಟಿಸಲಾಗಿದೆ. 

ರಾಜ್ಯದಲ್ಲಿ ಹಿಂದೂಗಳ ಸ್ಥಿತಿ, ಮಹಿಳೆಯರ ವಿರುದ್ಧದ ಅಪರಾಧಗಳು, ಭ್ರಷ್ಟಾಚಾರ, ಹದಗೆಟ್ಟ ಕಾನೂನು, ಕೈಗಾರಿಕಾ ಕುಸಿತದಂತಹ ಸಮಸ್ಯೆಗಳಿಂದಾಗಿ ಬಂಗಾಳದ ಸಾಮಾಜಿಕ ರಚನೆಯು ನಿರಂತರವಾಗಿ ಕ್ಷೀಣಿಸುತ್ತಿದೆ. ಜೊತೆಗೆ, ಆರ್‌ಜಿ ಕರ್‌ ಅತ್ಯಾಚಾರ, ಸಂದೇಶ್‌ ಖಾಲಿ ಹಿಂಸಾಚಾರ, ಮುರ್ಷಿದಾಬಾದ್‌ನಲ್ಲಿ ಹಿಂದೂಗಳ ಮೇಲಿನ ದಾಳಿ, ಸರ್ಕಾರಿ ಶಿಕ್ಷಕರ ಅಕ್ರಮ ನೇಮಕಾತಿಗಳಂತಹ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಇದರಿಂದ ಬೇಸತ್ತ ಜನ ಈ ಅಭಿಯಾನ ಆರಂಭಿಸಿದ್ದಾರೆ.

 ಅಂತೆಯೇ, ರೈತರ ಆತ್ಮಹತ್ಯೆ, ಬಾಲ್ಯವಿವಾಹ, ಕುಸಿಯುತ್ತಿರುವ ಆರೋಗ್ಯಸೇವೆ ಗುಣಮಟ್ಟಗಳ ಕಡೆಗೂ ಇದು ಗಮನ ಹರಿಸಿದೆ. ಈ ಅಭಿಯಾನವು ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರನ್ನು ಗುರಿಯಾಗಿಸಿಕೊಂಡಿಲ್ಲವಾದರೂ, ಆಡಳಿತದ ವಿರುದ್ಧ ಜನರ ಆಕ್ರೋಶವನ್ನು ವ್ಯಕ್ತಪಡಿಸುವ ಮಾಧ್ಯಮವಾಗಿ ರೂಪುಗೊಳ್ಳುತ್ತಿದೆ.

10 ಸಾವಿರ ದುಷ್ಕರ್ಮಿಗಳ ದಾಳಿ: ಬಂಗಾಳ ಸರ್ಕಾರ ವರದಿ- ಮುರ್ಷಿದಾಬಾದ್‌ ವಕ್ಫ್‌ ವಿರೋಧಿ ಹಿಂಸೆಮುರ್ಷಿದಾಬಾದ್‌: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಮತ್ತು ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಕಳೆದ ವಾರ ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಹಿಂಸಾಚಾರದ ಕುರಿತು ಸರ್ಕಾರ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.ಆ ವರದಿಯಲ್ಲಿ, ‘ಹಿಂಸಾಚಾರ ಭುಗಿಲೆದ್ದಾಗ ಮಾರಕಾಸ್ತ್ರಗಳನ್ನು ಹೊಂದಿದ್ದ ಸುಮಾರು 10,000 ಪ್ರತಿಭಟನಾಕಾರರು ಗುಂಪುಗೂಡಿದ್ದರು. 

ಅವರಿಂದ ಪೊಲೀಸರ ರಕ್ಷಣೆಯೂ ಸವಾಲಾಯಿತು. ಈ ಗಲಭೆಯಲ್ಲಿ 3 ಮಂದಿ ಸಾವನ್ನಪ್ಪಿದ್ದರು’ ಎಂದು ಉಲ್ಲೇಖಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.‘ಸರಿಸುಮಾರು 8ರಿಂದ 10 ಸಾವಿರ ಮಂದಿ ಪ್ರತಿಭಟನಾಕಾರರು ಪಿಡಬ್ಲ್ಯುಡಿ ಮೈದಾನದಲ್ಲಿ ನೆರೆಯತೊಡಗಿದ್ದರು. ಆ ಪೈಕಿ 5 ಸಾವಿರ ಜನ ಉಮರ್‌ಪುರದ ಕಡೆ ಸಾಗಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು. ಅವರೆಲ್ಲ ಅಸಭ್ಯ ಭಾಷೆ ಬಳಸತೊಡಗಿದ್ದು, ಪೊಲೀಸರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು. ಅವರ ಪಿಸ್ತೂಲುಗಳನ್ನೂ ಕಸಿದರು’ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.