ಅಮೆರಿಕದ ವಿರುದ್ಧವೇ ಬಳಕೆಯಾಗುವ ಆತಂಕ

ಫಾಬಲ್‌ 5, ಮಿಥೋಸ್‌ 5 ರಫ್ತಿಗೆ ನಿರ್ಬಂಧ

ವಾಷಿಂಗ್ಟನ್‌: ಅತ್ಯಾಧುನಿಕ ಕ್ಲಾಡ್‌ ಎಐ ಮೂಲಕ ಸುದ್ದಿಯಾಗಿದ್ದ ಅಮೆರಿಕದ ಖ್ಯಾತ ಎಐ ಕಂಪನಿಯಾಗಿರುವ ಆ್ಯಂಥ್ರೋಪಿಕ್‌ನ 2 ಸೇವೆಗಳನ್ನು ಭಾರತೀಯರು ಸೇರಿದಂತೆ ವಿದೇಶಿಗರಿಗೆ ನೀಡದಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಆದೇಶಿಸಿದೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಫಾಬಲ್‌ 5 ಮತ್ತು ಮಿಥೋಸ್‌ 5 ಸೇವೆಗಳನ್ನು ಅಮೆರಿಕನ್ನರನ್ನು ಹೊರತುಪಡಿಸಿ ಬೇರಾರಿಗೂ ಕೊಡುವುದಿಲ್ಲ ಎಂದು ಕಂಪನಿ ಹೇಳಿದೆ.

ಯಾಕೆ ಈ ಕ್ರಮ?:

ಇತ್ತೀಚೆಗಷ್ಟೇ ಕಂಪನಿಯೊಂದು, ಮೀಥೋಸ್‌ನ ಜೈಲ್‌ಬ್ರೇಕ್‌ (ಯಾವ ಕೆಲಸವನ್ನು ಮಾಡಬಾರದೆಂದು ತರಬೇತಿ ನೀಡಲಾಗಿರುತ್ತದೆಯೋ ಅದನ್ನು ಮಾಡಿಸುವುದು) ಮಾಡಬಲ್ಲೆವು ಎಂದು ಹೇಳಿಕೊಂಡಿತ್ತು. ಹೀಗಿರುವಾಗ ಒಂದೊಮ್ಮೆ ಈ ತಂತ್ರಜ್ಞಾನ ಬೇರೆ ದೇಶಗಳ ಕೈಗೆ ಸಿಕ್ಕಿ ಅಮೆರಿಕದ ವಿರುದ್ಧವೇ ಬಳಕೆಯಾದೀತು ಎಂಬುದು ಸರ್ಕಾರದ ಆತಂಕ. ಹೀಗಾಗಿಯೇ ವಿದೇಶಗಳಿಗಷ್ಟೇ ಅಲ್ಲ, ಅಮೆರಿಕದಲ್ಲಿರುವ ವಿದೇಶಿಯರಿಗೂ ಆ್ಯಂಥ್ರೋಪಿಕ್‌ನ 2 ಟೂಲ್‌ಗಳು ಸಿಗದಂತೆ ನಿರ್ಬಂಧಿಸಲಾಗಿದೆ.


ಈ ಮೊದಲು ಸರ್ಕಾರವು ಮೀಥೋಸ್‌ಅನ್ನು ಬಿಡುಗಡೆಯೇ ಮಾಡದಂತೆ ಆ್ಯಂಥ್ರೋಪಿಕ್‌ ಬಳಿ ಮನವಿ ಮಾಡಿತ್ತಾದರೂ ಕಂಪನಿ ಅದನ್ನು ಒಪ್ಪಿರಲಿಲ್ಲ. ಹಾಗಾಗಿ ಈಗ ವಿದೇಶಿಗರ ಬಳಕೆಗೆ ಬ್ರೇಕ್‌ ಹಾಕಲಾಗಿದೆ. ದೇಶಕ್ಕೆ ಎದುರಾಗಬಹುದಾದ ತೊಂದರೆಯನ್ನು ತಡೆಯಲು ಅಮೆರಿಕದ ಭದ್ರತಾ ಸಂಸ್ಥೆಗಳು ಶಕ್ತವಾಗುವ ವರೆಗೆ ಈ ನಿರ್ಬಂಧವು ಮುಂದುವರಿಯಲಿದೆ.

ವರ್ಷಾರಂಭದಲ್ಲಿ ವೆನಿಜುವೆಲಾದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ, ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆಗೆ ಆ್ಯಂಥ್ರೋಪಿಕ್‌ನ ಕ್ಲಾಡ್‌ ಎಐಅನ್ನು ಬಳಸಲಾಗಿತ್ತು. ತಮ್ಮ ಮೇಲೆ ಇದೇ ಅಸ್ತ್ರ ಪ್ರಯೋಗವಾಗಬಹುದು ಎಂಬ ಆತಂಕವೂ ಅಮೆರಿಕಕ್ಕಿದೆ.