ನವದೆಹಲಿ : ದೇಶ-ದೇಶಗಳ ನಡುವಿನ ಪೈಪೋಟಿ ಬಾಹ್ಯಾಕಾಶವನ್ನೂ ತಲುಪಿ, ಉಪಗ್ರಹ ಚಿತ್ರಗಳು ರಾಷ್ಟ್ರೀಯ ಭದ್ರತೆಯಲ್ಲಿ ಅತಿ ಪ್ರಮುಖವಾಗಿರುವ ಹೊತ್ತಿನಲ್ಲಿ, ಬೆಂಗಳೂರು ಮೂಲದ ಸ್ಟಾರ್ಟಪ್ ಗ್ಯಾಲೆಕ್ಸ್‌ಐ, ‘ದೃಷ್ಟಿ’ ಎಂಬ ಸ್ವದೇಶಿ ಕಣ್ಗಾವಲು ಉಪಗ್ರಹವನ್ನು ಅಭಿವೃದ್ಧಿಪಡಿಸಿ ಅದನ್ನು ಅಮೆರಿಕದಿಂದ ಉಡಾವಣೆ ಮಾಡಿದೆ.
ಇದು ವಿಶ್ವದ ಮೊದಲ ‘ಆಪ್ಟೋಸಾರ್’ ಸ್ಯಾಟಲೈಟ್ ಎನಿಸಿಕೊಂಡಿದ್ದು, ಭಾರತದ ಕಣ್ಗಾವಲು ವ್ಯವಸ್ಥೆಯ ಬಲವರ್ಧನೆ ಮತ್ತು ಸ್ವಾವಲಂಬನೆಗೆ ಮಹತ್ವದ ಕೊಡುಗೆ ನೀಡಲಿದೆ. ಅರ್ಥಾತ್ ವಿದೇಶಿ ಕಂಪನಿ ಮ್ಯಾಕ್ಸರ್‌ಗೆ ಸರಿಸಮನಾದಂಥ ಅತ್ಯಂತ ಹೈರೆಸಲ್ಯೂಷನ್ ಚಿತ್ರಗಳನ್ನು ಇದು ರವಾನಿಸಲಿದ್ದು, ರಕ್ಷಣಾ ಕ್ಷೇತ್ರ ಹಾಗೂ ವಿಪತ್ತುಗಳ ಸಂದರ್ಭದಲ್ಲಿ ನೆರವಾಗಲಿದೆ.
190 ಕೆ.ಜಿ. ತೂಗುವ ದೃಷ್ಟಿ ಉಪಗ್ರಹವನ್ನು ಭಾನುವಾರ ಮಧ್ಯಾಹ್ನ 12.29ಕ್ಕೆ (ಭಾರತೀಯ ಕಾಲಮಾನ) ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಉಡಾವಣೆ ಮಾಡಲಾಗಿದೆ. ಇದಕ್ಕಾಗಿ ವಿಶ್ವದ ಅತಿ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್-9’ ರಾಕೆಟ್‌ಅನ್ನು ಬಳಸಲಾಗಿದೆ.
ಏನಿದು ಆಪ್ಟೋಸಾರ್ ತಂತ್ರಜ್ಞಾನ?
ಸದ್ಯ ಭಾರತದ 29 ಭೂವೀಕ್ಷಣಾ ಉಪಗ್ರಹಗಳು ಬಾಹ್ಯಾಕಾಶದಲ್ಲಿ ಕುಳಿತು ಮಾತೃಗ್ರಹದತ್ತ ಕಣ್ಣಿಟ್ಟಿವೆ. ‘ದೃಷ್ಟಿ’ ಕೂಡ ಈ ಸಾಲಿಗೆ ಸೇರಲಿದೆಯಾದರೂ, ತನ್ನಲ್ಲಿರುವ ವಿಶೇಷ ಕ್ಯಾಮೆರಾದಿಂದಾಗಿ ಅವೆಲ್ಲವುಗಳಿಗಿಂತ ಹೆಚ್ಚಿನ ಮಹತ್ವದ್ದಾಗಿದೆ. ‘ಆಪ್ಟೋಸಾರ್ ತಂತ್ರಜ್ಞಾನ’ವೇ ಇದರ ಪ್ರಮುಖ ಶಕ್ತಿ ಹಾಗೂ ಆಕರ್ಷಣೆ.
ಉಷ್ಣವಲಯದಲ್ಲಿರುವ ಭಾರತದ ಬಹುತೇಕ ಪ್ರದೇಶಗಳ ಆಗಸದಲ್ಲಿ ಯಾವಾಗಲೂ ಮೋಡಗಳು ತೇಲುತ್ತಿರುತ್ತವೆ. ಇವುಗಳಿಂದಾಗಿ, ಬಾಹ್ಯಾಕಾಶದಲ್ಲಿರುವ ಉಪಗ್ರಹಗಳಿಗೆ ನಿರಂತರವಾಗಿ ಭೂಪ್ರದೇಶಗಳ ಸ್ಪಷ್ಟ ಚಿತ್ರಣ ಪಡೆಯುವುದು ಸವಾಲು. ಈ ಸಮಸ್ಯೆಗೆ ಪರಿಹಾರವಾಗಿ ದೃಷ್ಟಿಯಲ್ಲಿ ಆಪ್ಟಿಕಲ್ ಕ್ಯಾಮೆರಾ ಮತ್ತು ಸಿಂಥೆಟಿಕ್ ಅಪರ್ಚರ್ ರಾಡಾರ್‌ಅನ್ನು (ಸಾರ್) ಒಟ್ಟಿಗೆ ಒಟ್ಟಿಗೆ ಅಳವಡಿಸಲಾಗಿದೆ. ಆಪ್ಟಿಕಲ್ ಕ್ಯಾಮೆರಾ, ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ. ಆದರೆ ಮೋಡಗಳು ಅಡ್ಡ ಬಂದಾಗ ಅಥವಾ ರಾತ್ರಿಯ ಸಮಯದಲ್ಲಿ ಇದರ ಸಾಮರ್ಥ್ಯ ಕುಂದುತ್ತದೆ. ಅಂತಹ ಸಂದರ್ಭದಲ್ಲಿ ಕೈಹಿಡಿಯುವುದೇ ‘ಸಾರ್’ನ ಕಣ್ಣು, ಮೋಡ, ಹೊಗೆ, ಮಳೆಯನ್ನೂ ಭೇದಿಸಿ, ರಾತ್ರಿಯಲ್ಲೂ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಇದಕ್ಕಾಗಿ ಇದು ರೇಡಿಯೋ ತರಂಗಗಳನ್ನು ಬಳಸುತ್ತದೆ.
ಸದ್ಯ ದೃಷ್ಟಿ ಉಪಗ್ರಹವು ಭೂಮಿಯ 1.5 ಮೀ.ನಷ್ಟು ವ್ಯಾಪ್ತಿಯ ಪ್ರದೇಶವನ್ನು ಅತ್ಯಂತ ಸ್ಪಷ್ಟವಾಗಿ ನೋಡಬಲ್ಲದು. ಭೂಮಿಯ ಸುತ್ತ ನಿರಂತರವಾಗಿ ತಿರುಗುತ್ತಿರುವ ಇದು, 7-10 ದಿನಗಳಿಗೊಮ್ಮೆ ಒಂದು ಪ್ರದೇಶದ ಚಿತ್ರಗಳನ್ನು ಸೆರೆಹಿಡಿಯುತ್ತದೆ.
ಇನ್ನಷ್ಟು ನಿಖತರೆಯತ್ತ..:
ಸದ್ಯ ಇರುವ 1.5 ಮೀಟರ್ ರೆಸೊಲ್ಯೂಷನ್ ಅನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶ ಗ್ಯಾಲೆಕ್ಸ್‌ಐನದ್ದಾಗಿದ್ದು, ಮುಂದೆ 0.5 ಮೀ.ನಿಂದ 0.3 ಮೀ.ಗೆ ಇದನ್ನು ಹೆಚ್ಚಿಸುವ ಉದ್ದೇಶವಿದೆ.
ಎಐ ಸ್ಪರ್ಶ:
ಭೂವೀಕ್ಷಣಾ ಉಪಗ್ರಹಗಳು ನಿರಂತರವಾಗಿ ಚಿತ್ರಗಳನ್ನು ಸೆರೆಹಿಡುತ್ತಿರುತ್ತವೆ ಹಾಗೂ ಅವುಗಳನ್ನು ಭೂಮಿಗೆ ಕಳಿಸುತ್ತಿರುತ್ತವೆ ಹಾಗೂ ಅವನ್ನು ಇಲ್ಲಿ ಪರಿಶೀಲನೆ ಮಾಡಿ ನೋಡಲಾಗುತ್ತದೆ. ಆದರೆ ಈ ಕೆಲಸವನ್ನು ಬಾಹ್ಯಾಕಾಶದಲ್ಲೇ ಮುಗಿಸಿ, ಅಗತ್ಯವಿರುವ ಚಿತ್ರಗಳನ್ನಷ್ಟೇ ಪಡೆಯುವ ಉದ್ದೇಶದಿಂದ ದೃಷ್ಟಿಯಲ್ಲಿ ಎನ್ವಿಡಿಯಾ ಕಂಪನಿಯ ಸಹಾಯದಿಂದ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸಲಾಗಿದೆ.
ಕಂಪನಿ ಹರ್ಷ:
ಮಿಷನ್ ದೃಷ್ಟಿ ಕಾರ್ಯರೂಪಕ್ಕೆ ಬರುತ್ತಿದ್ದಂತೆ ಹರ್ಷ ವ್ಯಕ್ತಪಡಿಸಿರುವ ಗ್ಯಾಲೆಕ್ಸ್‌ಐ ಸ್ಥಾಪಕ ಹಾಗೂ ಸಿಇಒ ಸುಯಾಶ್ ಸಿಂಗ್, ‘ಉಪಗ್ರಹವು ತನ್ನ ಕಕ್ಷೆಗೆ ತಲುಪಿಯಾಗಿದೆ. ಇನ್ನು ನಮ್ಮ ಗುರಿ ಅದರ ಕಾರ್ಯಾರಂಭ ಮಾಡಿಸುವುದು. ಈಗಾಗಲೇ ವಿದೇಶಿ ಕಂಪನಿಗಳು ಆಪ್ಟೋಸಾರ್ ತಂತ್ರಜ್ಞಾನದ ಬಗ್ಗೆ ಕುತೂಹಲ ತೋರಿಸುತ್ತಿವೆ. ಮುಂದಿನ 4 ವರ್ಷಗಳಲ್ಲಿ 8-12 ಸ್ಯಾಟಲೈಟ್‌ಗಳನ್ನು ಗಗನದಾಚೆಗೆ ಕಳಿಸಲಿದ್ದೇವೆ’ ಎಂದಿದ್ದಾರೆ.
ಈಗಾಗಲೇ ಕಂಪನಿಯು 20 ದೇಶಗಳೊಂದಿಗೆ ವಿತರಣಾ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದು, ಅವುಗಳೊಂದಿಗೂ ತನ್ನ ಚಿತ್ರಗಳನ್ನು ಹಂಚಿಕೊಳ್ಳಲಿದೆ.
ಮ್ಯಾಕ್ಸರ್‌ಗೆ ಟಕ್ಕರ್:
ಈವರೆಗೆ ಭಾರತವು ಅಮೆರಿಕದ ವ್ಯಾಂಟರ್ (ಹಿಂದಿನ ಮ್ಯಾಕ್ಸಾರ್) ಕಂಪನಿ ತೆಗೆದ ಉಪಗ್ರಹ ಚಿತ್ರಗಳನ್ನು ಪಡೆಯುತ್ತಿತ್ತು. ಇದು 30 ಸೆಂ.ಮೀ.ನಷ್ಟು ‘ಝೂಂ’ ಮಾಡಬಹುದಾದ ಚಿತ್ರಗಳನ್ನು ಒದಗಿಸುತ್ತದೆ.
ಆದರೆ ಯುದ್ಧದಂತಹ ಸಂದರ್ಭಗಳಲ್ಲಿ ನಮಗೆ ವೈರಿರಾಷ್ಟ್ರದ ಪ್ರಮುಖ ಪ್ರದೇಶಗಳ ಜಾಗಗಳ ಚಿತ್ರ ಬೇಕಿದ್ದಾಗ ಅದನ್ನು ಹಂಚಿಕೊಳ್ಳದಂತೆ ಅಲ್ಲಿನ ಸರ್ಕಾರ ತಡೆಯುವ ಸಾಧ್ಯತೆ ಇರುತ್ತದೆ. ಜತೆಗೆ, ಅದು ಪಾಕ್, ಚೀನಾದಂತಹ ರಾಷ್ಟ್ರಗಳಿಗೂ ಭಾರತದ ಚಿತ್ರಗಳನ್ನು ಮಾರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.
ಹೀಗಿರುವಾಗ, ಭಾರತ ತನಗೆ ಬೇಕಾಗುವ ಯಾವುದೇ ಚಿತ್ರಗಳನ್ನು ಪಡೆಯಲು ಇನ್ನುಮುಂದೆ ಮ್ಯಾಕ್ಸಾರ್‌ಅನ್ನು ಬಿಟ್ಟು ಸ್ವದೇಶಿ ‘ದೃಷ್ಟಿ’ಯನ್ನು ಅವಲಂಬಿಸಬಹುದು. ಜತೆಗೆ ಯಾವುದೇ ನಿರ್ಬಂಧಗಳಿಲ್ಲದೆ ವೈರಿರಾಷ್ಟ್ರಗಳ ಗಡಿಯೊಳಗೆ ಇಣುಕಬಹುದು.
ಸಿಂದೂರದಲ್ಲಿ ಬಳಕೆಯಾಗಿದ್ದ ಇಮೇಜ್
ಭೂವೀಕ್ಷಣಾ ಉಪಗ್ರಹಗಳನ್ನು ಕೃಷಿ, ಮೂಲಸೌಕರ್ಯ ಯೋಜನೆ, ವಿಪತ್ತು ನಿರ್ವಹಣೆಯಂತಹ ಕೆಲಸಗಳ ಜತೆ ಭದ್ರತೆಗಾಗಿಯೂ ಬಳಸಲಾಗುತ್ತದೆ. ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂದೂರದ ವೇಳೆ ಭಾರತವು ತನ್ನ ಕಣ್ಗಾವಲು ಉಪಗ್ರಹಗಳ ಜತೆಗೆ ಮ್ಯಾಕ್ಸರ್‌ನಿಂದಲೂ ಪಾಕ್‌ನ ಉಗ್ರ ನೆಲೆ ಹಾಗೂ ಸೇನಾನೆಲೆಗಳು ಧ್ವಂಸವಾದ ಉಪಗ್ರಹ ಚಿತ್ರಗಳನ್ನು ಪಡೆದಿತ್ತು. ಇದು ಶತ್ರುರಾಷ್ಟ್ರದ ಮೇಲೆ ನಿಖರ ದಾಳಿಯನ್ನು ಸಾಧ್ಯವಾಗಿಸುವಲ್ಲಿ ಸಹಕಾರಿಯಾಗಿತ್ತು. ಆದರೆ ಇನ್ನು ಮ್ಯಾಕ್ಸರ್ ಮೇಲೆ ಅವಲಂಬಿತ ಆಗಿರದೇ ಸ್ವದೇಶಿ ‘ದೃಷ್ಟಿ’ಯಿಂದ ಹೈರೆಸಲ್ಯೂಷನ್ ಚಿತ್ರ ಪಡೆಯಬಹುದು.
ಉಪಗ್ರಹ ವಿಶೇಷತೆ ಏನು
- ಬೆಂಗಳೂರಿನ ಗ್ಯಾಲೆಕ್ಸ್‌ಐ ಸ್ಟಾರ್ಟಪ್ ಅಭಿವೃದ್ಧಿಪಡಿಸಿದ ‘ದೃಷ್ಟಿ’ ಉಪಗ್ರಹ ನಭಕ್ಕೆ
- ಒಂದೇ ಉಪಗ್ರಹದಲ್ಲಿ ಆಪ್ಟಿಕಲ್ ಕ್ಯಾಮೆರಾ, ಸಿಂಥೆಟಿಕ್ ಅಪರ್ಚರ್ ರಾಡಾರ್ ಬಳಕೆ
- ಹೀಗಾಗಿ ಮೋಡಕವಿದ ವಾತಾವರಣ, ರಾತ್ರಿ ಹೊತ್ತಲ್ಲೂ ಚಿತ್ರ ಸೆರೆಹಿಡಿಯುವುದು ಸಾಧ್ಯ
- ಇದು ಅಮೆರಿಕದ ಮ್ಯಾಕ್ಸರ್ ಉಪಗ್ರಹ ಸೆರೆಹಿಡಿಯುವ ಗುಣಮಟ್ಟದ ಚಿತ್ರ ತೆಗೆಯಬಲ್ಲದು
- ಪರಿಣಾಮ ವಿಶೇಷ ಸಂದರ್ಭಗಳಲ್ಲಿ ವಿದೇಶಿ ಉಪಗ್ರಹಗಳ ಅವಲಂಬನೆ ಇನ್ನು ತಪ್ಪುತ್ತದೆ
- 20 ದೇಶದೊಂದಿಗೆ ಮಾಹಿತಿ ಹಂಚಿಕೆಗೆ ಡೀಲ್. ಇನ್ನೂ 12 ಉಪಗ್ರಹ ಉಡ್ಡಯನ ಉದ್ದೇಶ
ನಮ್ಮ ಯುವಕರ ನಾವೀನ್ಯತೆಗೆ ಸಾಕ್ಷಿ
‘ಗ್ಯಾಲಕ್ಸ್ ಐ’ ನ ಮಿಷನ್ ದೃಷ್ಟಿ ನಮ್ಮ ಬಾಹ್ಯಾಕಾಶ ಪ್ರಯಾಣದಲ್ಲಿ ಒಂದು ಪ್ರಮುಖ ಸಾಧನೆಯಾಗಿದೆ. ವಿಶ್ವದ ಮೊದಲ ಆಪ್ಟೋಸಾರ್ ಉಪಗ್ರಹ ಮತ್ತು ಭಾರತದಲ್ಲಿ ಖಾಸಗಿಯಾಗಿ ನಿರ್ಮಿಸಲಾದ ಅತಿದೊಡ್ಡ ಉಪಗ್ರಹದ ಯಶಸ್ವಿ ಉಡಾವಣೆಯು ನಮ್ಮ ಯುವಕರ ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣದ ಉತ್ಸಾಹಕ್ಕೆ ಸಾಕ್ಷಿಯಾಗಿದೆ.
- ನರೇಂದ್ರ ಮೋದಿ, ಪ್ರಧಾನಿ
