ಸಾರಾಂಶ
- ಮತಾಂತರಕ್ಕೆ ಸಿಎಂ ಕುಮ್ಮಕ್ಕು: ಬಿವೈವಿ
- ಆಮಿಷ ಒಡ್ಡಿ ಮತಾಂತರ: ಬೊಮ್ಮಾಯಿ- ಅಸಮಾನತೆಗೆ ಕಾಂಗ್ರೆಸ್ ಕಾರಣ: ಅಶ್ವತ್ಥ
----ಏನಿದು ವಿವಾದ?
- ಹಿಂದು ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಜನ ಏಕೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದರು ಎಂದಿದ್ದ ಸಿಎಂ- ಈ ಹೇಳಿಕೆಗೆ ಬಿಜೆಪಿ ನಾಯಕರಾದ ವಿಜಯೇಂದ್ರ, ಬೊಮ್ಮಾಯಿ, ಸಿ.ಟಿ. ರವಿ, ಅಶ್ವತ್ಥನಾರಾಯಣ ಆಕ್ರೋಶ
- ಸಿಎಂ ಏಕೆ ಇಸ್ಲಾಂನಲ್ಲಿನ ವೈರುಧ್ಯ, ದೇಶಕ್ಕಿಂತ ಧರ್ಮವೇ ಮೊದಲು ಎಂಬ ಧೋರಣೆ ಪ್ರಶ್ನಿಸ್ತಿಲ್ಲ: ಬಿವೈವಿ- ಮತಾಂತರ ಎರಡೂ ಕಡೆಯಿಂದ ಆದರೂ ಕ್ರೈಸ್ತ ಮತಾಂತರಕ್ಕೆ ಮಾತ್ರ ಸಿಎಂ ಮನ್ನಣೆ: ಬೊಮ್ಮಾಯಿ
- ಅಸಮಾನತೆ ಈಗಲೂ ಇದೆ ಎಂದರೆ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕಾರಣವಲ್ವೆ?: ಡಾ। ಅಶ್ವತ್ಥ- ಅಸಮಾನತೆ ಬರಿ ಹಿಂದು ಸಮಾಜದಲ್ಲಿ ಮಾತ್ರ ಇದೆಯೇ? ಉಳಿದ ಕಡೆಗಳಿಗೆ ಇಲ್ಲವೇ?: ಸಿ.ಟಿ. ರವಿ
---ಕನ್ನಡಪ್ರಭ ವಾರ್ತೆ ಬೆಂಗಳೂರು
‘ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಯಾಕೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದರು?’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ಮುಖ್ಯಮಂತ್ರಿಗಳು ಆಡಿರುವ ಈ ಮಾತು ಮತಾಂತರಕ್ಕೆ ಪರೋಕ್ಷ ಪ್ರಚೋದನೆ ನೀಡಿದಂತಿದೆ. ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಛಿದ್ರಗೊಳಿಸುವ ಅಜೆಂಡಾವನ್ನು ಕಾಂಗ್ರೆಸ್ ಇಟ್ಟುಕೊಂಡಂತೆ ಕಾಣುತ್ತಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಸಿ.ಟಿ.ರವಿ ಭಾನುವಾರ ಪ್ರತ್ಯೇಕವಾಗಿ ಮಾತನಾಡಿ ತಿರುಗೇಟು ನೀಡಿದ್ದಾರೆ.ವಿಜಯೇಂದ್ರ ಆಕ್ರೋಶ:ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ‘ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ಅಪಪ್ರಚಾರ ನಡೆಸುವಂತೆ ಕುಮ್ಮಕ್ಕು ನೀಡುತ್ತಿದ್ದ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹಿಂದೂ ಧರ್ಮಿಯರನ್ನು ಮತಾಂತರಗೊಳ್ಳುವಂತೆ ಪ್ರಚೋದಿಸುತ್ತಿದೆ. ಮುಖ್ಯಮಂತ್ರಿಗಳು ಹೇಳಿರುವ ಹೇಳಿಕೆ ಇದಕ್ಕೆ ಪುಷ್ಟಿ ನೀಡುತ್ತಿದೆ’ ಎಂದು ಕಿಡಿಕಾರಿದ್ದಾರೆ.
‘ಸಿದ್ದರಾಮಯ್ಯನವರ ರಾಜಕೀಯ ಸಿದ್ದಾಂತ ಹಿಂದೂ ಧರ್ಮ ಹಾಗೂ ಹಿಂದೂ ಪದ್ಧತಿಗಳನ್ನು ಅವಹೇಳನ ಮಾಡುವುದು ಇತರ ಧರ್ಮೀಯರನ್ನು ಓಲೈಸುವುದು ಮಾತ್ರ. ಅವರು ಸಮಾಜವಾದಿಯೂ ಅಲ್ಲ, ಭಾರತೀಯ ಸಂಸ್ಕೃತಿಯ ಪ್ರತಿಪಾದಕರೂ ಅಲ್ಲ. ಸನಾತನ ಹಿಂದೂ ಧರ್ಮ ಹಾಗೂ ಭಾರತೀಯ ಸಂಸ್ಕೃತಿಯನ್ನು ವಿರೋಧಿಸುವುದು ಅವರ ಮನಸ್ಥಿತಿ. ಇದು ರಾಜ್ಯದ ಆಡಳಿತದ ಮೇಲೆ ಪ್ರತಿಬಿಂಬಿತವಾಗಿದೆ. ಅದರ ಪ್ರತೀಕವಾಗಿಯೇ ಸರಣಿ ರೂಪದಲ್ಲಿ ಹಿಂದೂ ವಿರೋಧಿ ಧೋರಣೆಗಳು ಸರ್ಕಾರದಿಂದ ಅನಾವರಣಗೊಳ್ಳುತ್ತಿದೆ ಎಂದು ಹೇಳಿದ್ದಾರೆ.‘ಹಿಂದುಳಿದ ವರ್ಗಗಳ ಆಯೋಗದ ಮುಖೇನ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಮಾಹಿತಿ ಸಂಗ್ರಹಿಸುವುದರ ಬದಲು ಮತಾಂತರದ ಹೆಸರನ್ನು ಮುಂದು ಮಾಡಿ ಮಾತನಾಡುತ್ತಿರುವ ಮುಖ್ಯಮಂತ್ರಿಗಳ ನಡೆ ಶಂಕಾಸ್ಪದವಾಗಿದೆ. ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಛಿದ್ರಗೊಳಿಸುವ ಅಜೆಂಡಾವನ್ನು ಕಾಂಗ್ರೆಸ್ ಇಟ್ಟುಕೊಂಡಂತೆ ಕಾಣುತ್ತಿದೆ. ಹಿಂದೂ ಧರ್ಮದ ಅಸಮಾನತೆಯ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಇಸ್ಲಾಂ ಧರ್ಮದಲ್ಲಿನ ವೈರುಧ್ಯಗಳು, ಮಹಿಳೆಯರ ಮೇಲಿನ ಶೋಷಣೆ, ದೇಶಕ್ಕಿಂತ ಧರ್ಮವೇ ಮೊದಲು ಎನ್ನುವ ಅವರ ಸಿದ್ಧಾಂತವನ್ನು ಏಕೆ ಪ್ರಶ್ನಿಸುವುದಿಲ್ಲ’ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ವಿಜಯೇಂದ್ರ ಹರಿಹಾಯ್ದಿದ್ದಾರೆ.
ಆಮಿಷ ಒಡ್ಡಿ ಮತಾಂತರ:ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಂವಿಧಾನದಲ್ಲಿ ಕೇವಲ 6 ಧರ್ಮಗಳು ಇವೆ. ಅಷ್ಟೇ ಧರ್ಮಗಳ ಹೆಸರು ಬರೆಯಬೇಕು. ರಾಜ್ಯದಲ್ಲಿ ಮತಾಂತರಗೊಂಡ ಕ್ರೈಸ್ತರು ಎನ್ನುವ ಹೊಸ ಕಾಲಂ ಮಾಡಿದ್ದಾರೆ. ಇದೊಂದು ಧರ್ಮದ ರೀತಿ ಕಾಲಂ ಮಾಡಿದ್ದಾರೆ. ಇದು ಕಾನೂನು ಬಾಹಿರ, ಸಂವಿಧಾನ ಬಾಹಿರ ಹಾಗೂ ರಾಜಕೀಯ ಪ್ರೇರಿತವಾಗಿದೆ’ ಎಂದು ಹೇಳಿದರು.
‘ಎರಡೂ ಕಡೆಯೂ ಮತಾಂತರ ಆಗಿರುತ್ತದೆ. ಆದರೆ, ಮುಖ್ಯಮಂತ್ರಿಗಳು ಕ್ರೈಸ್ತ ಧರ್ಮದ ಮತಾಂತರಕ್ಕೆ ಮಾತ್ರ ಮನ್ನಣೆ ಕೊಟ್ಟಿರುವುದು ಯಾಕೆ? ಇದು ಸಮಾನತೆ ಪ್ರಶ್ನೆ ಅಲ್ಲ. ಆಸೆ ಆಮಿಷ ಒಡ್ಡಿ ಮತಾಂತರ ಮಾಡಲಾಗಿದೆ. ಅವರ ಬಡತನದ ದುರುಪಯೋಗ ಹಾಗೂ ಶಿಕ್ಷಣ ಇಲ್ಲದಿರೋದನ್ನು ದುರುಪಯೋಗಪಡಿಸಿಕೊಂಡು ಮತಾಂತರ ಮಾಡಲಾಗಿದೆ. ಹಲವರು ಕ್ರೈಸ್ತಧರ್ಮದಿಂದ ವಾಪಸ್ ಬಂದಿದ್ದಾರೆ. ಈ ಮತಾಂತರದ ಬಗ್ಗೆಯೇ ಹಲವು ಅನುಮಾನಗಳಿವೆ’ ಎಂದು ತಿಳಿಸಿದರು.ಅಸಮಾನತೆಗೆ ಕೈ ಕಾರಣ- ಅಶ್ವತ್ಥ:
ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಮತಾಂತರ ಆಗಲು ಜನರಿಗೆ ಸ್ವಾತಂತ್ರ್ಯ ಇದೆ ಎನ್ನುವುದನ್ನು ಒಪ್ಪೋಣ. ಕುರುಬ, ಗೌಡ, ಲಿಂಗಾಯತ ಕ್ರಿಶ್ಚಿಯನ್ ಅಂತ ನಮೂದಿಸಲು ಯಾವ ಕಾನೂನಿನಲ್ಲಿ ಅವಕಾಶ ಇದೆ? ಸಮಾನತೆ ಇನ್ನೂ ಬಂದಿಲ್ಲ ಎನ್ನುವುದಾದರೆ ಹಿಂದೆ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷನ್ನು ಪ್ರಶ್ನೆ ಮಾಡಬೇಕಲ್ಲವೇ?’ ಇದಕ್ಕೆ ಸಿದ್ದರಾಮಯ್ಯ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.ಬೇರೆ ಧರ್ಮದಲ್ಲಿ ಅಸಮಾನತೆ ಇಲ್ಲವೆ?- ರವಿ:ಮಾಜಿ ಸಚಿವ ಸಿ.ಟಿ.ರವಿ, ಅಸಮಾನತೆ ಬರಿ ಹಿಂದೂ ಸಮಾಜದಲ್ಲಿ ಮಾತ್ರ ಇದೆಯೇ? ಉಳಿದ ಕಡೆಗಳಿಗೆ ಇಲ್ಲವೇ? ಅಸಮಾನತೆಗೆ ಹಲವು ಮುಖಗಳಿವೆ. ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಅಸಮಾನತೆ, ಅಧಿಕಾರದ ಅಸಮಾನತೆ, ಮತೀಯ ಅಸಮಾನತೆ. ಅಷ್ಟೆ ಯಾಕೆ ನಿಮ್ಮ ಕಾಂಗ್ರೆಸ್ ಪಕ್ಷದೊಳಗೆಯೇ ಅಸಮಾನತೆ ಇಲ್ಲವೇ ಸಿದ್ದರಾಮಯ್ಯನವರೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
‘ಹಿಂದೂ ಸಮಾಜದೊಳಗಿರುವ ಅಷ್ಟೂ ಜಾತಿಗಳಿಗೆ ಹಿಂದೆ ಕ್ರೈಸ್ತ ಎನ್ನುವ ಹೆಸರು ಸೇರಿಸಿ ಅಲ್ಲಿ ಮತ್ತೆ ಯಾಕೆ ಹಿಂದೂ ಸಮಾಜಕ್ಕೆ ಸಮಾನಾಂತರವಾದ ಜಾತಿ ವ್ಯವಸ್ಥೆ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದೀರಿ?’ ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದ ಬಹಿರಂಗ ಪತ್ರದ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.