ಹಿಂದುಗಳ ಸಂಖ್ಯೆ ಕುಸಿತಕ್ಕೆ ಕಾಂಗ್ರೆಸ್‌ ಕಾರಣ: ಬಿಜೆಪಿ

| Published : May 10 2024, 01:34 AM IST / Updated: May 10 2024, 07:09 AM IST

ಸಾರಾಂಶ

ಎಸ್‌ಸಿ, ಎಸ್ಟಿ, ಒಬಿಸಿಗಳ ಮೀಸಲು ಕಸಿದು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್‌ ಸಂಚು ರೂಪಿಸಿದೆ ಎಂಬ ಬಿಜೆಪಿ ಆರೋಪಗಳ ನಡುವೆಯೇ, ಕಳೆದ 60 ವರ್ಷದಲ್ಲಿ ಭಾರತದಲ್ಲಿ ಹಿಂದೂಗಳ ಸಂಖ್ಯೆ ಕುಸಿತವಾಗಿದ್ದರೆ, ಮುಸ್ಲಿಮರ ಸಂಖ್ಯೆಯಲ್ಲಿ ಹೆಚ್ಚಳ ದಾಖಲಾಗಿದೆ ಎಂದು ವರದಿಯೊಂದು ಹೇಳಿದೆ. 

 ನವದೆಹಲಿ :  ಎಸ್‌ಸಿ, ಎಸ್ಟಿ, ಒಬಿಸಿಗಳ ಮೀಸಲು ಕಸಿದು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್‌ ಸಂಚು ರೂಪಿಸಿದೆ ಎಂಬ ಬಿಜೆಪಿ ಆರೋಪಗಳ ನಡುವೆಯೇ, ಕಳೆದ 60 ವರ್ಷದಲ್ಲಿ ಭಾರತದಲ್ಲಿ ಹಿಂದೂಗಳ ಸಂಖ್ಯೆ ಕುಸಿತವಾಗಿದ್ದರೆ, ಮುಸ್ಲಿಮರ ಸಂಖ್ಯೆಯಲ್ಲಿ ಹೆಚ್ಚಳ ದಾಖಲಾಗಿದೆ ಎಂದು ವರದಿಯೊಂದು ಹೇಳಿದೆ. ಈ ವರದಿ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ದೇಶದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಗೆ ಕಾಂಗ್ರೆಸ್‌ ಕಾರಣ ಎಂದು ಬಿಜೆಪಿ ಆರೋಪಿಸಿದ್ದರೆ, ಇಂಥ ವರದಿಗಳ ಮೂಲಕ ಸಮಾಜ ವಿಭಜನೆಗೆ ಬಿಜೆಪಿ ಯತ್ನಿಸುತ್ತಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.ಈ ನಡುವೆ ವಿವಿಧ ಹಿಂದೂ ಧಾರ್ಮಿಕ ನಾಯಕರು ಕೂಡಾ ಹಿಂದೂಗಳ ಸಂಖ್ಯೆ ಇಳಿಕೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜನಸಂಖ್ಯಾ ಅಸಮತೋಲನ ಭಾರತದ ಪಾಲಿಗೆ ಒಳ್ಳೆಯದಲ್ಲ ಎಂದು ಹಲವು ಹಿಂದೂ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಹಿಂದೂಗಳ ಸಂಖ್ಯೆ ಇಳಿಕೆ:ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ‘ಧಾರ್ಮಿಕ ಅಲ್ಪಸಂಖ್ಯಾತರ ಪಾಲು: ಅಂತರದೇಶೀಯ ವಿಶ್ಲೇಷಣೆ’ ಎಂಬ ವರದಿ ಸಿದ್ಧಪಡಿಸಿದೆ. ಅದರಲ್ಲಿ ಭಾರತದಲ್ಲಿ 1950 ಹಾಗೂ 2015ರ ನಡುವಿನ 65 ವರ್ಷಗಳ ಅವಧಿಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಸಂಖ್ಯೆ ಶೇ.7.82ರಷ್ಟು ಕುಸಿತವಾಗಿದ್ದರೆ, ಮುಸ್ಲಿಮರ ಸಂಖ್ಯೆ ಶೇ.43.15ರಷ್ಟು ಏರಿಕೆಯಾಗಿದೆ ಎಂಬ ಅಚ್ಚರಿಯ ಅಂಶ ಬಹಿರಂಗಪಡಿಸಿದೆಭಾರತದಲ್ಲಿ 65 ವರ್ಷಗಳ ಅವಧಿಯಲ್ಲಿ ಬಹುಸಂಖ್ಯಾತ ಹಿಂದೂಗಳ ಸಂಖ್ಯೆ ಶೇ.7.82ರಷ್ಟು ಕುಸಿದಿದೆ (1950ರಲ್ಲಿ ಶೇ.84.68 ಇದ್ದುದು 2015ರಲ್ಲಿ ಶೇ.78.06). ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು 1950ರಲ್ಲಿ ಶೇ.9.84ರಷ್ಟು ಇದ್ದುದು 2015ರಲ್ಲಿ ಶೇ.14.09ರಷ್ಟಾಗಿದೆ. ಏರಿಕೆಯ ಪ್ರಮಾಣ ಶೇ.43.15ರಷ್ಟಿದೆ ಎಂದು ಶಮಿಕಾ ರವಿ ಅವರ ತಂಡ ಸಿದ್ಧಪಡಿಸಿದ ವರದಿ ಹೇಳಿದೆ.

ಬೇರೆ ಬೇರೆ ಧರ್ಮಗಳ ಪಾಲು:ಕ್ರಿಶ್ಚಿಯನ್ನರ ಜನಸಂಖ್ಯೆಯ ಪಾಲು ಶೇ.2.24ರಿಂದ ಶೇ.2.36ಕ್ಕೆ ಏರಿಕೆಯಾಗಿದೆ. ಅಂದರೆ 65 ವರ್ಷಗಳ ಅವಧಿಯಲ್ಲಿ ಏರಿಕೆಯ ಪ್ರಮಾಣ ಶೇ.5.38ರಷ್ಟಿದೆ. ಸಿಖ್‌ ಜನಸಂಖ್ಯೆ ಶೇ.1.24 ಇದ್ದುದು ಶೇ.1.85ಕ್ಕೆ ಏರಿಕೆಯಾಗಿದೆ. ಏರಿಕೆಯ ಪ್ರಮಾಣ ಶೇ.6.58ರಷ್ಟಿದೆ. ಪಾರ್ಸಿ ಜನಸಂಖ್ಯೆ ಶೇ.85ರಷ್ಟು ಕುಸಿತ ಕಂಡಿದೆ. ಅದು ಶೇ.0.03ರಿಂದ ಶೇ.0.004ಕ್ಕೆ ಕುಸಿತವಾಗಿದೆ. ಜೈನರ ಸಂಖ್ಯೆ ಶೇ.0.45 ಇದ್ದುದು ಶೇ.0.36ಕ್ಕೆ ಕುಸಿತವಾಗಿದೆ ಎಂದು ವರದಿ ತಿಳಿಸಿದೆ.

ಕಾಂಗ್ರೆಸ್‌ ಕಾರಣ:  ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸುಧಾನ್ಷು ತ್ರಿವೇದಿ, ‘ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಮುಸ್ಲಿಮರ ಸಂಖ್ಯೆ ನೋಡಿದರೆ, ಇದು ಮುಂದಿನ ದಿನಗಳಲ್ಲಿ ಮೀಸಲು ವ್ಯವಸ್ಥೆಯ ಮೇಲೆ ಬೀರುವ ಪರಿಣಾಮಗಳ ಮೇಲೆ ಆತಂಕ ಸೃಷ್ಟಿಸುತ್ತಿದೆ. ಇದು ಎಸ್‌ಸಿ, ಎಸ್ಟಿ, ಒಬಿಸಿ ಮೀಸಲನ್ನು ಇನ್ನಷ್ಟು ಕಸಿಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

ಮತ್ತೊಂದೆಡೆ ಈ ಬೆಳವಣಿಗೆ ಇಷ್ಟು ವರ್ಷ ದೇಶವನ್ನಾಳಿದ ಕಾಂಗ್ರೆಸ್‌ನ ಕೊಡುಗೆ ಎಂದು ಬಿಜೆಪಿ ನಾಯಕ ಅಮಿತ್‌ ಮಾಳವೀಯ ಕಿಡಿಕಾರಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪ್ರತಿಕ್ರಿಯೆ ನೀಡಿ, ನಿರ್ದಿಷ್ಟ ಸಮುದಾಯವೊಂದು ಭಾರತದ ಜನಸಂಖ್ಯಾ ರಚನೆಯನ್ನೇ ಬದಲಿಸಿಸುವ ರೀತಿ ತನ್ನ ಜನಸಂಖ್ಯೆ ಹೆಚ್ಚಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಬೆಳವಣಿಗೆಯಲ್ಲಿ ಅಕ್ರಮ ವಲಸಿಗರ ಪಾಲೆಷ್ಟು? ಮತಾಂತರದ ಪಾಲೆಷ್ಟು? ಇದರ ಪರಿಣಾಮಗಳು ಏನೇನು ಎಂದು ಪ್ರಶ್ನಿಸಿದ್ದಾರೆ. 

ಇನ್ನು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌, ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ ನೀತಿಯಿಂದಾಗಿ ದೇಶದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಯಾಗಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಇದು ಮುಂದಿನ ದಿನಗಳಲ್ಲಿ ದೇಶವನ್ನು ಇಸ್ಲಾಮಿಕ್‌ ದೇಶ ಮಾಡುವ ಹುನ್ನಾರದ ಭಾಗ ಎಂದು ಟೀಕಿಸಿದ್ದಾರೆ.

ಮುಸ್ಲಿಂ ದೇಶಗಳಲ್ಲಿ ಮುಸ್ಲಿಂ ಸಂಖ್ಯೆಯೇ ವೃದ್ಧಿ: ಜಗತ್ತಿನ ಎಲ್ಲಾ ದೇಶಗಳಲ್ಲೂ ಸರಾಸರಿಯಾಗಿ ಬಹುಸಂಖ್ಯಾತರ ಜನಸಂಖ್ಯೆ ಕುಸಿದು, ಅಲ್ಪಸಂಖ್ಯಾತರ ಜನಸಂಖ್ಯೆ ಏರುತ್ತಿದೆ. ಭಾರತದಲ್ಲೂ ಅದೇ ಟ್ರೆಂಡ್‌ ಇದೆ. ಆದರೆ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್‌ ಮತ್ತು ಅಫ್ಘಾನಿಸ್ತಾನದಲ್ಲಿ ಮಾತ್ರ ಬಹುಸಂಖ್ಯಾತರ ಜನಸಂಖ್ಯೆಯೇ ಏರಿಕೆಯಾಗಿ, ಅಲ್ಪಸಂಖ್ಯಾತರ ಜನಸಂಖ್ಯೆ ಕುಸಿದಿದೆ. 

ಹೀಗಾಗಿ ನೆರೆ ದೇಶಗಳಲ್ಲಿ ಆಪತ್ತು ಎದುರಾದಾಗ ಅಲ್ಪಸಂಖ್ಯಾತರು ಭಾರತಕ್ಕೆ ಪಲಾಯನ ಮಾಡಿರುವುದರಲ್ಲಿ ಅಚ್ಚರಿಯಿಲ್ಲ ಎಂದು ವರದಿ ತಿಳಿಸಿದೆ.ಎಲ್ಲಾ ಮುಸ್ಲಿಂ ದೇಶಗಳಲ್ಲಿ ಬಹುಸಂಖ್ಯಾತ ಮುಸ್ಲಿಮರ ಜನಸಂಖ್ಯೆ ವೃದ್ಧಿಯಾಗಿದೆ. ಮಾಲ್ಡೀವ್ಸ್‌ನಲ್ಲಿ ಮಾತ್ರ ಮುಸ್ಲಿಮರ ಜನಸಂಖ್ಯೆ ಶೇ.1.47ರಷ್ಟು ಇಳಿಕೆಯಾಗಿದೆ. ಬಾಂಗ್ಲಾದೇಶದಲ್ಲಿ ಮುಸ್ಲಿಮರ ಸಂಖ್ಯೆ ಶೇ.18ರಷ್ಟು, ಪಾಕಿಸ್ತಾನದಲ್ಲಿ ಮುಸ್ಲಿಮರ ಸಂಖ್ಯೆ ಶೇ.3.75ರಷ್ಟು ಏರಿಕೆಯಾಗಿದೆ. ಮುಸ್ಲಿಮೇತರರು ಬಹುಸಂಖ್ಯಾತರಾಗಿರುವ ಮ್ಯಾನ್ಮಾರ್‌, ಭಾರತ, ನೇಪಾಳದಲ್ಲಿ ಬಹುಸಂಖ್ಯಾತರ ಜನಸಂಖ್ಯೆ ಕುಸಿದಿದೆ ಎಂದು ವರದಿ ಹೇಳಿದೆ.

ವೈವಿಧ್ಯತೆಗೆ ಉತ್ತಮ ವಾತಾವರಣ :‘ ಜನಸಂಖ್ಯೆಯ ಏರಿಳಿತದ ಪ್ರಮಾಣವು ಭಾರತದಲ್ಲಿ ವೈವಿಧ್ಯತೆಯನ್ನು ಪೋಷಿಸಲು ಉತ್ತಮ ವಾತಾವರಣವಿದೆ ಎಂಬುದನ್ನು ತೋರಿಸುತ್ತದೆ. ಬಹುಸಂಖ್ಯಾತರ ಜನಸಂಖ್ಯೆಯಲ್ಲಿ ಕುಸಿತ ಹಾಗೂ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಏರಿಕೆಯು ಸಮಾಜದಲ್ಲಿ ವೈವಿಧ್ಯತೆಯನ್ನು ಉತ್ತೇಜಿಸಲು ಸರ್ಕಾರ ಜಾರಿಗೊಳಿಸಿದ ನೀತಿಗಳು ಹಾಗೂ ರಾಜಕೀಯ ನಿರ್ಧಾರಗಳು ಉತ್ತಮ ಫಲಿತಾಂಶ ನೀಡಿರುವುದನ್ನು ತೋರಿಸುತ್ತದೆ’ ಎಂದು ವರದಿ ಅಭಿಪ್ರಾಯಪಟ್ಟಿದೆ.

1950ನೇ ಇಸ್ವಿ ಮಾನದಂಡ ಏಕೆ : ಧರ್ಮವಾರು ಜನಸಂಖ್ಯೆಯ ಏರಿಳಿತವನ್ನು ಅಧ್ಯಯನ ಮಾಡಲು 1950ನ್ನು ಮಾನದಂಡವಾಗಿ ಇರಿಸಿಕೊಂಡಿರುವುದಕ್ಕೆ ಕಾರಣವಿದೆ. ಈ ಸಮಯದಲ್ಲಿ ವಿಶ್ವಸಂಸ್ಥೆಯು ರಚನೆಯಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಗಳು ಜಾರಿಗೆ ಬಂದವು. ಪರಿಣಾಮ, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಉಪಕ್ರಮಗಳು ಆರಂಭವಾದವು. ಹೀಗಾಗಿ ಈ ವರ್ಷದಿಂದ 167 ದೇಶಗಳಲ್ಲಿ ಅಲ್ಪಸಂಖ್ಯಾತರ ಕುರಿತಾದ ಅಧ್ಯಯನಗಳು ಜಾರಿಯಲ್ಲಿವೆ ಎಂದು ವರದಿ ತಿಳಿಸಿದೆ.