ಸಾರಾಂಶ
ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ವಿಪಕ್ಷಗಳ ಮಾಡುತ್ತಿರುವ ಆರೋಪಗಳ ವಿರುದ್ಧ ಜಾಗೃತಿ ಮೂಡಿಸಲು ಬಿಜೆಪಿಯು 15 ದಿನಗಳ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗುರುವಾರ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಕಿರಣ್ ರಿಜಿಜು ಅವರು ಬಿಜೆಪಿ ಕಾರ್ಯಕರ್ತರಿಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಂಡಿದ್ದರು.
ಈ ವೇಳೆ ಮಾತನಾಡಿದ ನಡ್ಡಾ, ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ನಿರ್ವಹಣೆಯಲ್ಲಿ ಹಿಂದುಳಿದ ಮುಸ್ಲಿಮರು ಮತ್ತು ಮಹಿಳೆಯರನ್ನು ಕರೆತಂದು ಅಭಿವೃದ್ಧಿ ಮಾಡಲು ತಿದ್ದುಪಡಿ ಮಾಡಿದೆ. ಈ ಕಾಯ್ದೆಯಲ್ಲಿ ವಕ್ಫ್ ಆಸ್ತಿಯನ್ನು ಪ್ರಬಲರಿಂದ ಮುಕ್ತಿಗೊಳಿಸಿ ಮುಸ್ಲಿಮರ ಏಳಿಗೆಗೆ ಬಳಸಲಾಗುವುದು’ ಎಂದರು.
ಋತುಮತಿ ಎಂದು ದಲಿತ ವಿದ್ಯಾರ್ಥಿನಿಗೆ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ್ರು
ಚೆನ್ನೈ: ಋತುಮತಿಯಾಗಿದ್ದ ದಲಿತ ವಿದ್ಯಾರ್ಥಿನಿಯನ್ನು ಶಾಲೆಯ ಕೊಠಡಿಯಿಂದ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಹೀನ ಕೃತ್ಯ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಪರಿಣಾಮ ಶಾಲೆಯ ಮುಖ್ಯ ಶಿಕ್ಷಕಿಯನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಕೊಯಮತ್ತೂರಿನ ಸೆಂಗುಟ್ಟಾಯ್‌ಪಾಳ್ಯಂನ ಸ್ವಾಮಿ ಚಿದ್ಭಾವನಾನಂದ ಮ್ಯಾಟ್ರಿಕ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೃತ್ಯ ನಡೆದಿದೆ. ಇದರ ವಿಡಿಯೋ ಹರಿದಾಡಿದೆ. ಇಲ್ಲಿ ವ್ಯಾಸಂಗ ಮಾಡುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿ ಋತುಮತಿಯಾಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಮುಖ್ಯಶಿಕ್ಷಕಿ ಕೊಠಡಿಯಿಂದ ಹೊರಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದರು ಎಂದು ವಿಡಿಯೋದಲ್ಲಿ ವಿದ್ಯಾರ್ಥಿನಿ ಹೇಳಿದ್ದಾಳೆ. ಆದರೆ ಶಾಲೆ ಈ ಆರೋಪ ತಿರಸ್ಕರಿಸಿದ್ದು, ಆಕೆಯ ತಾಯಿ ಮನವಿಗೆ ಸ್ಪಂದಿಸಿ ಹೊರಗೆ ಕೂರಿಸಲಾಗಿತ್ತು ಎಂದಿದೆ.
ಬಿಹಾರದಲ್ಲಿ ಆಲಿಕಲ್ಲು ಮಳೆ, ಸಿಡಿಲಿಗೆ ಒಂದೇ ದಿನ 25 ಜನರು ಬಲಿ
ಪಟನಾ: ಬಿಹಾರದಲ್ಲಿ ಹಲವು ಜಿಲ್ಲೆಗಳಲ್ಲಿ ಬುಧವಾರ ಸಿಡಿಲು ಸಹಿತ ಆಲಿಕಲ್ಲು ಸಹಿತ ಮಳೆ ಬಿದ್ದಿದ್ದು ಒಂದೇ ದಿನ 25 ಮಂದಿ ಬಲಿಯಾಗಿದ್ದಾರೆ. ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ನಳಂದದಲ್ಲಿ 18, ಸಿವಾನ್ 2, ಕತಿಹಾರ್, ದರ್ಭಾಂಗ್, ಬೇಗುಸರಾಯ್, ಭಾಗಲ್ಪುರ ಮತ್ತು ಜೆಹಾನ್‌ಬಾದ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಸಿಎಂ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ 4 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ಬುಧವಾರವಷ್ಟೇ ಬಿಹಾರದಲ್ಲಿ ಸಿಡಿಲಿಗೆ 13 ಮಂದಿ ಬಲಿಯಾಗಿದ್ದರು.
ಅನಂತ್ ಅಂಬಾನಿ ಜನ್ಮ ದಿನದಂದು ವನತಾರಾ ಹೊಸ ವೆಬ್ ಬಿಡುಗಡೆ
ಜಾಮ್ನಗರ: ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಜನ್ಮದಿನದಂದು ವನ್ಯಜೀವಿ ರಕ್ಷಣೆ, ಪುನರ್ವಸತಿ ಮತ್ತು ಸಂರಕ್ಷಣೆಯಲ್ಲಿ ವಿಶ್ವದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ವನತಾರಾ ತನ್ನ ಹೊಸ ವೆಬ್‌ಸೈಟ್ ಅನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. vantara.in. ವೆಬ್‌ಸೈಟ್‌ನ ಪ್ರಮುಖ ಅಂಶ ಏನೆಂದರೆ, 360-ಡಿಗ್ರಿ ವಿಶ್ಯುವಲ್ ಪ್ರವಾಸ ಒದಗಿಸುತ್ತದೆ. ಇದು ಸಂದರ್ಶಕರನ್ನು ವನತಾರಾದ ಸಂಪೂರ್ಣ ಚಿತ್ರಣ ನೀಡುತ್ತದೆ. ಆದರೆ ಮೃಗಾಲಯದ ರೀತಿಯಲ್ಲಿ ಅಲ್ಲ, ಬದಲಿಗೆ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾಗಿ ಪ್ರಸ್ತುತಪಡಿಸುತ್ತದೆ. ಕಂಪ್ಯೂಟರ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗಳವರೆಗೆ ಎಲ್ಲ ಸಾಧನಗಳಲ್ಲಿಯೂ ಹೊಸ ವೆಬ್‌ಸೈಟ್ ಸುಲಲಿತವಾಗಿ ಕಾರ್ಯನಿರ್ವಹಿಸಲಿದೆ.
ಇಂದು/ ನಾಳೆ ತಮಿಳ್ನಾಡು ಬಿಜೆಪಿ ಅಧ್ಯಕ್ಷರ ಘೋಷಣೆ
ಚೆನ್ನೈ: ತಮಿಳುನಾಡು ಬಿಜೆಪಿ ಘಟಕದ ನೂತನ ಅಧ್ಯಕ್ಷರ ಹೆಸರು ಏ.11 ಅಥವಾ ಏ.12ರಂದು ಘೋಷಣೆಯಾಗಲಿದೆ. ಅಧ್ಯಕ್ಷ ಪಟ್ಟಕ್ಕೆ ಆಸಕ್ತರಿಂದ ಬಿಜೆಪಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಏ.11 ಶುಕ್ರವಾರ ಕಡೆಯ ದಿನ. ಚುನಾವಣಾ ನಿಯಮಗಳ ಅನ್ವಯ ಏ.12ಕ್ಕೆ ಹೆಸರು ಘೋಷಣೆಯಾಗಬೇಕಿದೆ. ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈಗೆ ಆಗಮಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆ ಸಾಧ್ಯತೆ ದಟ್ಟವಾಗಿರುವ ಕಾರಣ ಅಮಿತ್ ಶಾ ಭೇಟಿಯ ವೇಳೆ ಹೊಸ ಅಧ್ಯಕ್ಷರ ಹೆಸರು ಪ್ರಕಟ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಹಾಲಿ ಅಧ್ಯಕ್ಷ ಅಣ್ಣಾಮಲೈ ಈಗಾಗಲೇ ತಾವು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.