ಸಾರಾಂಶ
ಪಾಲ್ಘರ್: ಮಹಾರಾಷ್ಟ್ರದ ವಿರಾರ್‌ನಲ್ಲಿ ಬುಧವಾರ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಒಂದು ವರ್ಷದ ಮಗು ಸೇರಿದಂತೆ 17 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಇಲ್ಲಿನ ವಿಜಯ್ ನಗರದಲ್ಲಿ 50 ಫ್ಲ್ಯಾಟ್‌ಗಳನ್ನು ಹೊಂದಿರುವ ರಮಾಬಾಯಿ ಅಪಾರ್ಟ್ಮೆಂಟ್‌ನಲ್ಲಿ ದುರಂತ ನಡೆದಿದೆ. ನಾಲ್ಕನೇ ಮಹಡಿಯಲ್ಲಿ ಒಂದು ವರ್ಷದ ಮಗುವಿನ ಹುಟ್ಟುಹಬ್ಬ ನಡೆಯುತ್ತಿತ್ತು. ಆಗ ಇದ್ದಕ್ಕಿದ್ದಂತೆ 12 ಫ್ಲ್ಯಾಟ್‌ಗಳು ಕುಸಿದಿದ್ದು ನಿವಾಸಿಗಳು, ಅತಿಥಿಗಳು ಅವಶೇಷಗಳಡಿ ಸಿಲುಕಿಕೊಂಡರು.
ವಿಚಾರ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ , ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, 20 ಗಂಟೆಗೂ ಹೆಚ್ಚಿನ ಕಾಲದಿಂದ ಕಾರ್ಯಚರಣೆ ನಡೆಯುತ್ತಿದೆ.
ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದ್ದು, ಪೊಲೀಸರು ಬಿಲ್ಡರ್ ನಿತಲ್ ಗೋಪಿನಾತ್ ಸಾನೆ ಬಂಧಿಸಿದ್ದು, ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.