ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿಗೆ ವೇದಿಕೆಯಾಗಿದ್ದ ಪಶ್ಚಿಮ ಬಂಗಾಳ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆಬಿದ್ದಿದ್ದು, ಮಂಗಳವಾರ ಮನೆ ಮನೆ ಪ್ರಚಾರರೊಂದಿಗೆ ಪಂಚ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಕೊನೆ ಬೀಳಲಿದೆ. ಬುಧವಾರ 2ನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ.

 ಕೋಲ್ಕತಾ: ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿಗೆ ವೇದಿಕೆಯಾಗಿದ್ದ ಪಶ್ಚಿಮ ಬಂಗಾಳ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆಬಿದ್ದಿದ್ದು, ಮಂಗಳವಾರ ಮನೆ ಮನೆ ಪ್ರಚಾರರೊಂದಿಗೆ ಪಂಚ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಕೊನೆ ಬೀಳಲಿದೆ. ಬುಧವಾರ 2ನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ 152 ಕ್ಷೇತ್ರಗಳಿಗೆ ಮತದಾನ

ಮೊದಲ ಹಂತದಲ್ಲಿ 152 ಕ್ಷೇತ್ರಗಳಿಗೆ ಮತದಾನ ನಡೆದಿದ್ದರೆ, 2ನೇ ಹಂತದಲ್ಲಿ 142 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ದಾಖಲೆಯ ಶೇ.93.19ರಷ್ಟು ಮತದಾನವಾಗಿತ್ತು.ಬಿಜೆಪಿಯ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವರು ಬಿರುಸಿನ ಪ್ರಚಾರ ನಡೆಸಿದ್ದಾರೆ.

ಅಕ್ರಮ ಒಳನುಸುಳುವಿಕೆ, ಭ್ರಷ್ಟಾಚಾರ, ನಿರುದ್ಯೋಗ, ಕಾನೂನು ಸುವ್ಯವಸ್ಥೆ ಅಸ್ತ್ರಗಳನ್ನು ಬಿಜೆಪಿ ಬಳಸಿದರೆ, ಆಡಳಿತಾರೂಢ ಟಿಎಂಸಿ, ಬಿಜೆಪಿ ರಾಜ್ಯವನ್ನು ಒಡೆಯಲು ಪ್ರಯತ್ನಿಸುತ್ತಿದೆ ಮತ್ತು ಜನರನ್ನು ಮೀನು-ಮೊಟ್ಟೆ ತಿನ್ನದಂತೆ ತಡೆಯಲಿದೆ ಎಂದು ವ್ಯಾಪಕ ಪ್ರಚಾರ ನಡೆಸಿದೆ.ದೀದಿ-ಸುವೇಂದು ಹಣಾಹಣಿ: 2ನೇ ಹಂತದ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರ ತೀವ್ರ ಗಮನ ಸೆಳೆದಿದೆ. ಇಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇನ್ನು, ಕೋಲ್ಕತಾ ಪೋರ್ಟ್‌ನಿಂದ ಟಿಎಂಸಿಯ ಫಿರ್ಹಾದ್ ಹಕೀಮ್ ಮತ್ತು ಬಿಜೆಪಿಯ ರಾಕೇಶ್ ಸಿಂಗ್ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಪ್ರಮಾಣ ವಚನ ಸ್ವೀಕಾರದ ಕಾರ್‍ಯಕ್ರಮಕ್ಕೆ ಬರುವೆ: ಮೋದಿ

ರಾಜ್ಯದಲ್ಲೂ ಕಮಲ ಅರಳಲಿದೆ: ವಿಶ್ವಾಸಕೋಲ್ಕತಾ: ಬುಧವಾರ ಕೊನೆ ಹಂತದ ಚುನಾವಣೆಯನ್ನೆದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಪ್ರಚಾರದ ಕೊನೆ ದಿನ ಭರ್ಜರಿ ರ್‍ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಬೈರಕಪುರದಲ್ಲಿ ನಡೆದ ವಿಜಯ ಸಂಕಲ್ಪ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಸದ್ಯ ರಾಜ್ಯದ ಮೂಡ್‌ ನೋಡಿದರೆ, ಫಲಿತಾಂಶ ಘೋಷಣೆ ಬಳಿಕ ರಚನೆಯಾಗಲಿರುವ ಬಿಜೆಪಿ ಸರ್ಕಾರದ ಪದಗ್ರಹಣ ಸಮಾರಂಭಕ್ಕಾಗಿ ನಾನು ಮತ್ತೆ ಇಲ್ಲಿಗೆ ಮರಳುತ್ತೇನೆ ಅನ್ನಿಸುತ್ತಿದೆ. ಒಡಿಶಾ, ಬಿಹಾರದ ಬಳಿಕ ಬಂಗಾಳದಲ್ಲೂ ಕಮಲ ಅರಳಲಿದೆ’ ಎಂದರು.ಇದೇ ವೇಳೆ ಆಡಳಿತಾರೂಢ ಟಿಎಂಸಿ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿ, ‘ಒಂದು ಕಡೆ ರಾಜ್ಯದಲ್ಲಿ ಮಿಲ್‌ಗಳು ಮುಚ್ಚುತ್ತಿದ್ದರೆ, ಇನ್ನೊಂದು ಕಡೆ ಬಾಂಬ್‌ ಕಾರ್ಖಾನೆಗಳು ತಲೆಯೆತ್ತುತ್ತಿವೆ ಹಾಗೂ ಗೂಂಡಾಗಳಿಗೆ ಉದ್ಯೋಗ ಒದಗಿಸುತ್ತಿವೆ. ಈ ಮೂಲಕ ಟಿಎಂಸಿಯ ದುರಾಡಳಿತ ವಿಸ್ತರಿಸುತ್ತಿದೆ’ ಎಂದ ಮೋದಿ, ‘ಬಿಜೆಪಿ ಅಧಿಕಾರಕ್ಕೇರಿದರೆ ನುಸುಳುಕೋರರನ್ನು ಹೊರಗಟ್ಟುತ್ತದೆ ಹಾಗೂ ಯುವಕರಿಗೆ ಉದ್ಯೋಗ ಕೊಡುತ್ತದೆ’ ಎಂಬ ಭರವಸೆ ನೀಡಿದ್ದಾರೆ.

 ಬಂಗಾಳಕ್ಕೆ ಮೋದಿ ಪಂಚ ಗ್ಯಾರೆಂಟಿ

-ಸರ್ಕಾರಿ ಕೆಲಸಗಳಿಗೆ ಪಾರದರ್ಶಕ ನೇಮಕಾತಿ, ಉದ್ಯೋಗ ಮೇಳಗಳಲ್ಲೇ ಯುವಕರಿಗೆ ನೇಮಕಾತಿ ಪತ್ರ ಹಸ್ತಾಂತರ-ಖಾಲಿ ಇರುವ ಎಲ್ಲಾ ಹುದ್ದೆಗಳು ಭರ್ತಿ. ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ಪೂರ್ಣ ಪ್ರಯೋಜನ

-ಸೃಜನಶೀಲ ಆರ್ಥಿಕತೆ ವಿಸ್ತರಣೆ. ರಾಜ್ಯದ ಶಾಲೆ, ಕಾಲೇಜುಗಳಲ್ಲಿ ಕಂಟೆಂಟ್‌ ಕ್ರಿಯೇಷನ್‌ ಪ್ರಯೋಗಾಲಯ ಸ್ಥಾಪನೆ-ಜಿ-ರಾಮ್‌-ಜಿ ಕಾಯ್ದೆಯಡಿ 125 ದಿನಗಳ ಉದ್ಯೋಗ. ಜತೆಗೆ, ಪಿಎಂ ವಿಶ್ವಕರ್ಮ ಮತ್ತು ಸಂಪದ ಯೋಜನೆ ಜಾರಿ

-ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯ ಪೂರ್ಣ ಪ್ರಯೋಜನ. ಬ್ಯಾಂಕುಗಳಿಂದ ನೆರವು.