ವಾಕ್ ಸ್ವಾತಂತ್ರ್ಯ ವಿಚಾರದಲ್ಲಿ ಸ್ವಯಂ ನಿಯಂತ್ರಣ ಅಗತ್ಯ: ಸುಪ್ರೀಂ

| N/A | Published : Jul 15 2025, 01:06 AM IST / Updated: Jul 15 2025, 04:19 AM IST

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇತರ ವೇದಿಕೆಗಳಲ್ಲಿ ಜನರು ಪ್ರತಿಕ್ರಿಯೆ ನೀಡುವಾಗ ಅಥವಾ ಪೋಸ್ಟ್‌ ಹಾಕುವಾಗ ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಅರ್ಥ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಸ್ವನಿಯಂತ್ರಣ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.

 ನವದೆಹಲಿ :  ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇತರ ವೇದಿಕೆಗಳಲ್ಲಿ ಜನರು ಪ್ರತಿಕ್ರಿಯೆ ನೀಡುವಾಗ ಅಥವಾ ಪೋಸ್ಟ್‌ ಹಾಕುವಾಗ ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಅರ್ಥ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಸ್ವನಿಯಂತ್ರಣ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.

ಇದೇ ವೇಳೆ ತಾನು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯದ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿ ಮಾರ್ಗಸೂಚಿ ರೂಪಿಸುವ ಸಾಧ್ಯತೆ ಕುರಿತೂ ಸುಳಿವು ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಭಕ್ತರೊಬ್ಬರ ವಿರುದ್ಧದ ಪೋಸ್ಟ್‌ಗೆ ಸಂಬಂಧಿಸಿ ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ವಜಾಹತ್‌ ಖಾನ್‌ ಎಂಬವರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಮತ್ತು ಕೆ.ವಿ.ವಿಶ್ವನಾಥನ್‌ ಪೀಠ ಈ ಸಲಹೆ ನೀಡಿದೆ.

ನಾಗರಿಕರು ತಮ್ಮ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ಮೌಲ್ಯ ಅರಿತುಕೊಳ್ಳಬೇಕು. ಇದರ ಉಲ್ಲಂಘನೆಯಾದಾಗ ಸರ್ಕಾರ ಮಧ್ಯ ಪ್ರವೇಶ ಮಾಡಬೇಕಾಗಬಹುದು. ಆದರೆ, ಯಾರೂ ಸರ್ಕಾರ ಮಧ್ಯಪ್ರವೇಶ ಬಯಸಲ್ಲ ಎಂದು ನ್ಯಾ.ನಾಗರತ್ನ ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವಿಭಜನಕಾರಿ ಪ್ರವೃತ್ತಿಗೆ ಅಂತ್ಯ ಹಾಡಬೇಕು. ಜನರಲ್ಲಿ ಭಾತೃತ್ವ ಬೆಳೆಯಬೇಕು. ಹಾಗಂತ ನಾವು ಸೆನ್ಸಾರ್‌ಶಿಪ್‌ ಬಗ್ಗೆ ಮಾತನಾಡುತ್ತಿಲ್ಲ ಎಂದು ಸ್ಪಷ್ಪಪಡಿಸಿದ ಕೋರ್ಟ್‌, ಸಂವಿಧಾನದ 19(2)ನೇ ವಿಧಿಯಡಿ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯದ ಮೇಲೆ ನಿಯಂತ್ರಣಕ್ಕೆ ಸಂಬಂಧಿಸಿ ನಿಯಮಾವಳಿ ರೂಪಿಸುವ ಸಾಧ್ಯತೆ ಕುರಿತು ಸುಳಿವು ನೀಡಿತು.

Read more Articles on