ಕಾಂಗ್ರೆಸ್‌ನಲ್ಲಿ 500 ಕೋಟಿ ರು.ಯ ಸೂಟ್‌ಕೇಸ್‌ ಕೊಟ್ಟವರನ್ನು ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗುತ್ತದೆ.  ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ನಮ್ಮ ಬಳಿ ₹500 ಕೋಟಿ ಹಣ ಇಲ್ಲ ಎಂದು ಸಿಧು ಅವರ ಪತ್ನಿ ನವಜೋತ್‌ ಕೌರ್‌ ಹೇಳಿದ್ದಾರೆ.

 ಚಂಡೀಗಢ : ಕಾಂಗ್ರೆಸ್‌ನಲ್ಲಿ 500 ಕೋಟಿ ರು.ಯ ಸೂಟ್‌ಕೇಸ್‌ ಕೊಟ್ಟವರನ್ನು ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗುತ್ತದೆ. ನಾವು ಸದಾ ಪಂಜಾಬ್‌ ಬಗ್ಗೆ ಮಾತನಾಡುತ್ತೇವೆ. ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ನಮ್ಮ ಬಳಿ ₹500 ಕೋಟಿ ಹಣ ಇಲ್ಲ. ಹೀಗಾಗಿ, ನವಜೋತ್‌ ಸಿಂಗ್‌ ಸಿಧು ಅವರನ್ನು ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಮಾತ್ರವೇ ಅವರು ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ ಎಂದು ಸಿಧು ಅವರ ಪತ್ನಿ ನವಜೋತ್‌ ಕೌರ್‌ ಹೇಳಿದ್ದಾರೆ.

ಹೇಳಿಕೆ ಭಾರೀ ರಾಜಕೀಯ ಸಂಚಲನಕ್ಕೆ ಕಾರಣ

2027ರ ಚುನಾವಣೆ ಸಂಬಂಧ ಅವರ ಈ ಹೇಳಿಕೆ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್‌ ನಾಯಕತ್ವದ ಮೇಲಿನ ಗಂಭೀರ ಆರೋಪವಾಗಿದೆ. ಈ ಬಗ್ಗೆ ಪಕ್ಷ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಆಗ್ರಹ ಮಾಡಿದೆ.

ಮಾರ್ಗರೆಟ್ ಆಳ್ವಾ ಕೂಡಾ ಇಂತದ್ದೇ ಆರೋಪ ಮಾಡಿದ್ದರು

ಈ ಹಿಂದೆ ಕರ್ನಾಟಕದ ಕಾಂಗ್ರೆಸ್‌ ನಾಯಕಿ ಮಾರ್ಗರೆಟ್ ಆಳ್ವಾ ಕೂಡಾ ಇಂತದ್ದೇ ಆರೋಪ ಮಾಡಿದ್ದರು. 2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಅನ್ನು ಅತಿ ಹೆಚ್ಚು ಬಿಡ್‌ ಮಾಡಿದವರಿಗೆ ಹಣಕ್ಕೆ ಮಾರಿಕೊಳ್ಳಲಾಗಿತ್ತು. ಇದು ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ಎಷ್ಟು ಆಳವಾಗಿ ಮುಳುಗಿದೆ ಎಂಬುದಕ್ಕೆ ಸಾಕ್ಷಿ ಎಂದು ಬಿಜೆಪಿ ವಕ್ತಾರ ಸುಧಾನ್ಷು ತ್ರಿವೇದಿ ಕಿಡಿಕಾರಿದ್ದಾರೆ.

2004ರಿಂದ ರಾಜಕಾರಣದಲ್ಲಿರುವ ಸಿಧು, ಮೊದಲಿಗೆ ಬಿಜೆಪಿ, ಕಾಂಗ್ರೆಸ್‌ ನಂತರ ತಮ್ಮ ಸ್ವಂತ ಪಕ್ಷವೊಂದನ್ನು ಸ್ಥಾಪಿಸಿ, ನಂತರ ಕಾಂಗ್ರೆಸ್‌ಗೆ ಹಿಂದಿರುಗಿದ್ದರು.