ಫ್ಲೈದುಬೈ ವಿಮಾನದಲ್ಲಿದ್ದವರ ಜೀವ ಉಳಿಸಿದ್ದಕ್ಕಾಗಿ ‘ಹೀರೋ’ ಎಂಬ ಬಿರುದು ಪಡೆದಿರುವ ಕ್ಯಾಪ್ಟನ್ ಸ್ಮಿತ್ ಮಚ್ಛರ್ ರಕ್ತದ ಮಡುವಿನಲ್ಲಿದ್ದಾಗ, ತಾವು ಅವರ ಜೀವವನ್ನು ಉಳಿಸಿದ್ದು ಹೇಗೆ ಎಂಬುದನ್ನು ಇನ್ನೋರ್ವ ಹೀರೋ ದಂತವೈದ್ಯ ಶುಟಾ ಮುಸಾಯೇವ್ ವಿವರಿಸಿದ್ದಾರೆ.
ಟೆಲ್ ಅವೀವ್: ಸಹಪೈಲಟ್‌ನಿಂದ ಮಾರಣಾಂತಿಕ ದಾಳಿ ನಡೆದ ಹೊರತಾಗಿಯೂ, ತಾವು ಚಲಾಯಿಸುತ್ತಿದ್ದ ಫ್ಲೈದುಬೈ ವಿಮಾನದಲ್ಲಿದ್ದವರ ಜೀವ ಉಳಿಸಿದ್ದಕ್ಕಾಗಿ ‘ಹೀರೋ’ ಎಂಬ ಬಿರುದು ಪಡೆದಿರುವ ಕ್ಯಾಪ್ಟನ್ ಸ್ಮಿತ್ ಮಚ್ಛರ್ ರಕ್ತದ ಮಡುವಿನಲ್ಲಿದ್ದಾಗ, ತಾವು ಅವರ ಜೀವವನ್ನು ಉಳಿಸಿದ್ದು ಹೇಗೆ ಎಂಬುದನ್ನು ಇನ್ನೋರ್ವ ಹೀರೋ ದಂತವೈದ್ಯ ಶುಟಾ ಮುಸಾಯೇವ್ ವಿವರಿಸಿದ್ದಾರೆ.
ಮಚ್ಛರ್ ಅವರ ಆರೈಕೆಯನ್ನು ಯಾವ ರೀತಿ ಮಾಡಲಾಯಿತು
‘ದ ನ್ಯಾಷನಲ್’ ಸುದ್ದಿಸಂಸ್ಥೆ ಜತೆ ಮಾತನಾಡಿದ ಮುಸಾಯೇವ್ ದಾಳಿ ನಡೆದ ಬಳಿಕದ 45 ನಿಮಿಷ ಮಚ್ಛರ್ ಅವರ ಆರೈಕೆಯನ್ನು ಯಾವ ರೀತಿ ಮಾಡಲಾಯಿತು ಎಂದು ತಿಳಿಸಿದ್ದಾರೆ. ‘ವಿಮಾನದಲ್ಲಿದ್ದವ ಕೂಗಾಟ ಕೇಳಿ ಅತ್ತ ಓಡಿದಾಗ, ಪೈಲಟ್ ಕಾಕ್‌ಪಿಟ್‌ನ ನೆಲದ ಮೇಲೆ ಬಿದ್ದಿದ್ದರು ಹಾಗೂ ಅವರ ತಲೆ, ಕುತ್ತಿಗೆ, ಕೈಯಿಂದ ರಕ್ತ ಸೋರುತ್ತಿತ್ತು. ಆ ಸಂದರ್ಭದಲ್ಲಿ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸಿದ ನಾನು, ಟಿ-ಶರ್ಟ್ ಬಟ್ಟೆಯಿಂದ ಗಾಯಗಳನ್ನು ಒತ್ತಿ ಹಿಡಿದು ರಕ್ತ ಒಸರುವುದನ್ನು ನಿಲ್ಲಿಸಿದೆ. ಬಳಿಕ ಸಿಬ್ಬಂದಿಯಿಂದ ಮಂಜುಗಡ್ಡೆ ಕೇಳಿ ಪಡೆದು 45 ನಿಮಿಷಗಳ ಕಾಲ ಅವನ್ನು ಗಾಯಗಳ ಮೇಲಿರಿಸಿ ಒತ್ತಿ ಹಿಡಿದೆ’ ಎಂದು ಮುಸಾಯೇವ್ ಹೇಳಿದರು.
ಸ್ಮಿತ್ ಮೂರ್ಛೆಹೋಗದಂತೆ ನೋಡಿಕೊಂಡ ವಿಧಾನ
ಸ್ಮಿತ್ ಮೂರ್ಛೆಹೋಗದಂತೆ ನೋಡಿಕೊಂಡ ವಿಧಾನವನ್ನು ವಿವರಿಸುತ್ತಾ, ‘ದಯವಿಟ್ಟು ಮಲಗಬೇಡಿ ಎಂದು ಅವರಲ್ಲಿ ಕೇಳಿಕೊಂಡೆ. ಎಚ್ಚರವಾಗಿರಿಸಲೆಂದು ಅವರ ಮಕ್ಕಳ ಬಗ್ಗೆ ವಿಚಾರಿಸತೊಡಗಿದೆ. ಆಗ ಮಾತಾಡತೊಡಗಿದ ಸ್ಮಿತ್ ತಮ್ಮ ವಿವರಗಳನ್ನು ಉಸುರಿ, ‘ನನಗೆ ಸಾಯಲು ಇಷ್ಟವಿಲ್ಲ. ದಯವಿಟ್ಟು ಬದುಕಿಸಿ’ ಎಂದು ಅಂಗಲಾಚತೊಡಗಿದರು. ನಾನು ಧೈರ್ಯ ತುಂಬುತ್ತಿದ್ದೆ’ ಎಂದರು.
ಮುಂದುವರಿದು, ‘ಒಂದು ಹಂತದಲ್ಲಿ ಸ್ಮಿತ್‌ರ ನಾಡಿಮಿಡಿತ ತೀರಾ ಕುಸಿದಾಗ, ಅವರ ಪಾದವನ್ನು ಮೇಲೆತ್ತಿ ಹಿಡಿದೆ. ಅವರ ತುಟಿಗಳು ನೀಲಿಗಟ್ಟುತ್ತಿದ್ದವು. ನೋವು ತಡೆಯಲಾರದೆ ಸ್ಮಿತ್ ನೋವುನಿವಾರಕ ಮಾತ್ರೆಗಳನ್ನು (ಪೇನ್ ಕಿಲ್ಲರ್) ಕೇಳತೊಡಗಿದರಾದರೂ, ಅತಿಯಾಗಿ ರಕ್ತಸ್ರಾವವಾಗುತ್ತಿದ್ದುದ್ದರಿಂದ ನಾನದಕ್ಕೆ ನಿರಾಕರಿಸಿ ನೀರಷ್ಟೇ ಕುಡಿಸಿದೆ. ಸೌದಿ ಅರೇಬಿಯಾದಲ್ಲಿ ವಿಮಾನ ಇಳಿಯುತ್ತಿದ್ದಂತೆ ಅವರನ್ನು ವೈದ್ಯರಿಗೆ ಹಸ್ತಾಂತರಿಸಿದೆ’ ಎಂದ ದಂತವೈದ್ಯ, ‘ಅವರು ನಮ್ಮ ಜೀವ ಉಳಿಸಿದರು ಹಾಗೂ ನಾವು ಅವರ ಜೀವ ಉಳಿಸಿದೆವು. ಇದೇ ಕರ್ಮಫಲ’ ಎಂದರು.
ಈಗಾಗಲೇ ಸೌದಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಮಚ್ಛರ್ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
