ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರನ್ನು ತನಿಖಾ ಸಂಸ್ಥೆ ಎಫ್‌ಬಿಐನ ಏಜೆಂಟ್‌ಗಳು ಬಂಧಿಸಿರುವ ರೀತಿಯಲ್ಲಿರುವ ಎಐ ವಿಡಿಯೋವನ್ನು ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರನ್ನು ತನಿಖಾ ಸಂಸ್ಥೆ ಎಫ್‌ಬಿಐನ ಏಜೆಂಟ್‌ಗಳು ಬಂಧಿಸಿರುವ ರೀತಿಯಲ್ಲಿರುವ ಎಐ ವಿಡಿಯೋವನ್ನು ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಆರಂಭದಲ್ಲಿ ಒಬಾಮ, ‘ಅಧ್ಯಕ್ಷ ಕಾನೂನಿಗಿಂತ ದೊಡ್ಡವರು’ ಎನ್ನುತ್ತಾರೆ.

 ಆ ಬಳಿಕ ಅಮೆರಿಕದ ಇತರ ರಾಜಕೀಯ ನೇತಾರರು ‘ಕಾನೂನಿಗಿಂತ ಯಾರೂ ದೊಡ್ಡವರಲ್ಲ’ ಎಂದು ಹೇಳುತ್ತಾರೆ. ಬಳಿಕ ಇಬ್ಬರು ಅಧಿಕಾರಿಗಳು ಒಬಾಮ ಈ ಹಿಂದೆ ಅಧ್ಯಕ್ಷರಾಗಿದ್ದಾಗ ಇರುತ್ತಿದ್ದ ಕಚೇರಿಯಲ್ಲೇ ಅವರನ್ನು ಬಂಧಿಸುವುದು ಹಾಗೂ ಇದನ್ನು ಟ್ರಂಪ್ ನಗುತ್ತಾ ನೋಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋವನ್ನು ಹಂಚಿಕೊಂಡ ಟ್ರಂಪ್‌ರದ್ದು ತೀವ್ರ ಬೇಜವಾಬ್ದಾರಿ ನಡೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ನನ್ನನ್ನು ಪಕ್ಷದಿಂದ ಹೊರಗಿಡಲು ಮುರಳಿ ಯಾರು: ತರೂರ್‌ ಕಿಡಿ

ನವದೆಹಲಿ: ‘ಪಕ್ಷಕ್ಕಿಂತ ರಾಷ್ಟ್ರೀಯ ಭದ್ರತೆ ದೊಡ್ಡದು’ ಎಂದಿದ್ದ ಶಶಿ ತರೂರ್‌ ಅವರನ್ನು ಕಾಂಗ್ರೆಸ್‌ ಸದಸ್ಯರೆಂದು ಪರಿಗಣಿಸುವುದಿಲ್ಲ ಎಂದಿದ್ದ ಕೇರಳದ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಕೆ. ಮುರಳೀಧರನ್‌ ಹೇಳಿಕೆಗೆ ತಿರುಗೇಟು ನೀಡಿರುವ ತರೂರ್‌, ‘ಪಕ್ಷದಲ್ಲಿ ಅವರ ಸ್ಥಾನವಾದರೂ ಏನು’ ಎಂದು ಕೇಳಿದ್ದಾರೆ. ‘ತರೂರ್‌ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವ ತನಕ ಅವರನ್ನು ನಮ್ಮವರಲ್ಲಿ ಒಬ್ಬರೆಂದು ಪರಿಗಣಿಸುವುದಿಲ್ಲ. ಜತೆಗೆ, ತಿರುವನಂತಪುರಂನಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಗಳಿಗೂ ಆಹ್ವಾನಿಸುವುದಿಲ್ಲ’ ಎಂದು ಮುರಳೀಧರನ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ತರೂರ್‌, ‘ಹೀಗೆ ಹೇಳುವವರು ಒಂದು ಆಧಾರವನ್ನಿಟ್ಟುಕೊಂಡು ಮಾತಾಡಬೇಕು. ಯಾರವರು? ಪಕ್ಷದಲ್ಲಿ ಅವರ ಸ್ಥಾನವೇನು? ನನಗದು ತಿಳಿಯಬೇಕು’ ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.

ನದಿಯಲ್ಲಿ ವರದಿ ವೇಳೆ ಬಾಲಕಿ ಶವದ ಮೇಲೆ ಕಾಲಿಟ್ಟ ಪತ್ರಕರ್ತ!

ಬ್ರೆಜಿಲಿಯಾ: ನದಿಯಲ್ಲಿ ಬಾಲಕಿ ಮುಳುಗಿರುವ ಬಗ್ಗೆ ನೀರಿಗಿಳಿದು ವರದಿ ಮಾಡುವಾಗ ಆಕಸ್ಮಿಕವಾಗಿ ವರದಿಗಾರ ಹೆಣದ ಮೇಲೆಯೇ ಕಾಲಿಟ್ಟ ಆಘಾತಕಾರಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ರೈಯಿಸ್ಸಾ ಎಂಬ 13 ವರ್ಷದ ಬಾಲಕಿ ನದಿಯಲ್ಲಿ ಈಜಾಡುತ್ತಿರುವಾಗ ಮುಳುಗಿ ಕಾಣೆಯಾಗಿದ್ದಳು. ಈ ಘಟನೆಗೆ ಸಂಬಂಧಿಸಿದಂತೆ ಲೆನಿಲ್ಡೋ ಫ್ರಾಜೋ ಎಂಬ ವರದಿಗಾರ ನದಿಗೆ ಇಳಿದು ನೀರಿನ ಆಳ ಮತ್ತು ಸೆಳೆತದ ಬಗ್ಗೆ ವರದಿ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ನದಿಯಿಂದ ತಟ್ಟನೆ ಮೇಲೆದ್ದು, ‘ನಾನು ಯಾವುದೋ ದೇಹದ ಮೇಲೆ ಕಾಲಿಟ್ಟೆ. ಅದು ಬಾಲಕಿಯ ದೇಹವೇ ಇರಬಹುದು’ ಎಂದು ವರದಿ ಮಾಡಿದ್ದರು. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ರಕ್ಷಣಾ ಸಿಬ್ಬಂದಿ ಮತ್ತೆ ನದಿಗಿಳಿದಿದ್ದಾರೆ. ಆಶ್ಚರ್ಯವೆಂಬಂತೆ ವರದಿಗಾರ ನಿಂತ ಸ್ಥಳದಲ್ಲಿಯೇ ದೇಹ ಪತ್ತೆಯಾಗಿದೆ.

ಮೈಂಡ್‌ ರೀಡರ್‌ ಸುಹಾನಿ ಶಾಗೆ ಜಾದೂಗಾರರ ಆಸ್ಕರ್‌ ಪ್ರಶಸ್ತಿ ಪ್ರಕಟ

ನವದೆಹಲಿ: ಎದುರಿಗಿರುವವರ ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ ಪತ್ತೆ ಮಾಡಿ ಅಚ್ಚರಿ ಮೂಡಿಸುವಲ್ಲಿ ಪರಿಣಿತರಾಗಿರುವ ಮೈಂಡ್‌ ರೀಡರ್‌ ಸುಹಾನಿ ಶಾ ಅವರಿಗೆ ‘ಬೆಸ್ಟ್‌ ಮ್ಯಾಜಿಕ್‌ ಕ್ರಿಯೇಟರ’ ಪ್ರಶಸ್ತಿ ಒಲಿದಿದೆ. ಇದನ್ನು ಪಡೆದ ಮೊದಲ ಭಾರತ ಪ್ರಜೆ ಎಂಬ ಖ್ಯಾತಿಗೆ ಶಾ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಮ್ಯಾಜಿಕ್ ಸೊಸೈಟೀಸ್ ಒಕ್ಕೂಟ(ಎಫ್‌ಐಎಸ್‌ಎಂ) ಆಯೋಜಿಸಿದ್ದ ಸ್ಪರ್ಧೆಯಲ್ಲಿ, ಅಪರಿಚಿತರ ಫೋನ್‌ ಪಾಸ್‌ವರ್ಡ್‌, ಕ್ರಶ್‌ಗಳನ್ನು ನಿಖರವಾಗಿ ಗುರುತಿಸುವ ಮೂಲಕ, ಸುಹಾನಿ ಅವರು ಜಾದೂಗಾರರ ಆಸ್ಕರ್‌ ಎಂದೇ ಕರೆಯಲಾಗುವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಶಾ ಅವರು ರಾಜಸ್ಥಾನದ ಉದಯಪುರ ಮೂಲದವರು.