‘1 ಎಕ್ಸ್‌ಬೆಟ್‌’ ಬೆಟ್ಟಿಂಗ್‌ ಆ್ಯಪ್‌ನ 1 ಕೋಟಿ ರು. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಆ್ಯಪ್‌ ಪರ ಪ್ರಚಾರ ನಡೆಸಿದ್ದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌, ರಾಬಿನ್‌ ಉತ್ತಪ್ಪ ಸೇರಿ ಹಲವು ನಟ, ನಟಿಯರ ಒಟ್ಟು 7.93 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ಮುಟ್ಟುಗೋಲು ಹಾಕಿದೆ.

- ಸೋನು, ಊರ್ವಶಿ, ಮಿಮಿ, ನೇಹಾ ಆಸ್ತಿಯೂ ವಶ

- 7.93 ಕೋಟಿ ರು. ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.

ಪಿಟಿಐ ನವದೆಹಲಿ

‘1 ಎಕ್ಸ್‌ಬೆಟ್‌’ ಬೆಟ್ಟಿಂಗ್‌ ಆ್ಯಪ್‌ನ 1 ಕೋಟಿ ರು. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಆ್ಯಪ್‌ ಪರ ಪ್ರಚಾರ ನಡೆಸಿದ್ದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌, ರಾಬಿನ್‌ ಉತ್ತಪ್ಪ ಸೇರಿ ಹಲವು ನಟ, ನಟಿಯರ ಒಟ್ಟು 7.93 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ಮುಟ್ಟುಗೋಲು ಹಾಕಿದೆ.

ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ, ನಟ ಸೋನು ಸೂದ್‌, ನಟಿ ನೇಹಾ ಶರ್ಮಾ, ನಟಿ ಊರ್ವಶಿ ರೌಟೇಲಾ ಅವರ ತಾಯಿ, ಬೆಂಗಾಳಿ ನಟ ಅಂಕುಷ್‌ ಹಜ್ರಾ ಅವರ ಆಸ್ತಿಯನ್ನೂ ಪಿಎಂಎಲ್‌ಎ ಕಾಯ್ದೆಯಡಿ ಇ.ಡಿ. ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಸೋನು ಸೂದ್‌ ಅ‍ವರ ₹1 ಕೋಟಿ, ಮಿಮಿ ಚಕ್ರವರ್ತಿ ₹59 ಲಕ್ಷ, ಯುವರಾಜ್‌ ಸಿಂಗ್‌ ₹2.5 ಕೋಟಿ, ನೇಹಾ ಶರ್ಮಾ ₹1.26 ಕೋಟಿ, ರಾಬಿನ್ ಉತ್ತಪ್ಪ ₹8.26 ಲಕ್ಷ, ನಟ ಅಂಕುಶ್ ಹಜ್ರಾ ₹47 ಲಕ್ಷ ಮತ್ತು ಊರ್ವಶಿ ರೌಟೇಲಾರ ತಾಯಿಯ 2.02 ಕೋಟಿ ರು. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಇದೀಗ ಯಾರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆಯೋ ಅವರೆಲ್ಲರನ್ನೂ ಜಾರಿ ನಿರ್ದೇಶನಾಲಯವು ಕುರಕಾವೋದಲ್ಲಿ ನೋಂದಾಯಿತ 1ಎಕ್ಸ್‌ಬೆಟ್‌ ಅಕ್ರಮ ಬೆಟ್ಟಿಂಗ್‌ ಆ್ಯಪ್‌ಗೆ ಸಂಬಂಧಿಸಿ ವಿಚಾರಣೆ ನಡೆಸಿತ್ತು.

ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ ಮಾಜಿ ಕ್ರಿಕೆಟರ್‌ಗಳಾದ ಶಿಖರ್‌ ಧವನ್‌ ಮತ್ತು ಸುರೇಶ್‌ ರೈನಾ ಅವರ 11.14 ಕೋಟಿ ರು. ಮೌಲ್ಯದ ಆಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಂಡಿತ್ತು.