ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್‌, ಪ್ರಣೀತಾ, ರಾಣಾಗೆ ಸಂಕಷ್ಟ

| N/A | Published : Jul 11 2025, 01:47 AM IST / Updated: Jul 11 2025, 04:47 AM IST

ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್‌, ಪ್ರಣೀತಾ, ರಾಣಾಗೆ ಸಂಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಬೆಟ್ಟಿಂಗ್‌ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ವಿಜಯ್ ದೇವರಕೊಂಡ, ನಟ ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್, ತೆಲುಗು ನಟರಾದ ರಾಣಾ ದಗ್ಗುಬಾಟಿ ಸೇರಿದಂತೆ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.  

ನವದೆಹಲಿ: ಅಕ್ರಮ ಬೆಟ್ಟಿಂಗ್‌ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ  ವಿಜಯ್ ದೇವರಕೊಂಡ, ನಟ ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್, ತೆಲುಗು ನಟರಾದ ರಾಣಾ ದಗ್ಗುಬಾಟಿ ಸೇರಿದಂತೆ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಇವರೆಲ್ಲರನ್ನೂ ಶೀಘ್ರವೇ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜಂಗ್ಲೀ ರಮ್ಮಿ, ಎ23, ಜೀತ್‌ವಿನ್‌, ಪರಿಮ್ಯಾಚ್‌, ಲೋಟಸ್‌365ರಂತಹ ಜೂಜಿನ ಆ್ಯಪ್‌ಗಳಿಂದ ಹಣ ಪಡೆದು, ಅವುಗಳ ಪರ ನಟ, ನಟಿಯರು, ಜಾಲತಾಣ ಪ್ರಭಾವಿಗಳು ಪ್ರಚಾರ ಮಾಡುತ್ತಿದ್ದರು. ಆದರೆ ಈ ಆ್ಯಪ್‌ಗಳು ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟದ ಮೂಲಕ ಕೋಟ್ಯಂತರ ರು. ಮೌಲ್ಯದ ಅಕ್ರಮ ಹಣ ಗಳಿಸಿವೆ ಎಂದು ಆರೋಪವಿದೆ. ಈ ಹಿನ್ನೆಲೆಯಲ್ಲಿ 29 ಜನರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಪ್ರಕರಣದಲ್ಲಿ ಇವರ ಪಾತ್ರ ತನಿಖೆಗೆ ಮುಂದಾಗಿದೆ.

ಯಾರ್‍ಯಾರ ವಿರುದ್ಧ ಕೇಸು?:

ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ ಸುಭಾಷ್, ನಿಧಿ ಅಗರ್ವಾಲ್ ಸೇರಿ 29 ಚಿತ್ರತಾರೆಯರು ಹಾಗೂ ಹಲವರು ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ

ಇ.ಡಿ. ಕೇಸು ಏಕೆ?:

ಬೆಟ್ಟಿಂಗ್‌ ಆ್ಯಪ್‌ಗಳ ವಿರುದ್ಧ 5 ರಾಜ್ಯಗಳಲ್ಲಿ ದಾಖಲಾಗಿದ್ದ ಹಲವು ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯವು ಇದೀಗ 29 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಇದೀಗ ಎಫ್‌ಐಆರ್‌ ದಾಖಲು ಬಳಸಿಕ ಇಂಥ ಬೆಟ್ಟಿಂಗ್ ಆ್ಯಪ್‌ಗಳಿಂದ ಮೋಸಕ್ಕೊಳಗಾದವರಿಂದ ಇನ್ನಷ್ಟು ದೂರುಗಳು ದಾಖಲಾಗುವ ನಿರೀಕ್ಷೆಯಿದೆ. ಹೀಗಾಗಿ ಆರೋಪಿಗಳನ್ನು ಶೀಘ್ರವೇ ವಿಚಾರಣೆಗೆ ಕರೆದು, ಹೇಳಿಕೆ ಸಂಗ್ರಹಿಸುವ ಸಾಧ್ಯತೆಯಿದೆ.

ಏನೇನು ವಿಚಾರಣೆ?:

ಬೆಟ್ಟಿಂಗ್ ಆ್ಯಪ್‌ಗಳು ಅಕ್ರಮವಾಗಿ ಗಳಿಸಿದ ಹಣ ಹಾಗೂ ಅದರಲ್ಲಿ ಸೆಲೆಬ್ರಿಟಿಗಳ ನಿಖರವಾದ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ. ಅವರ ಹೇಳಿಕೆಗಳನ್ನು ದಾಖಲಿಸಿದ ನಂತರ ಅಪರಾಧವನ್ನು ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Read more Articles on