ಸಾರಾಂಶ
ಮುಂಬೈ: ನಿಷೇಧಿತ ಉಗ್ರ ಸಂಘಟನೆ ಸಿಮಿಯ ಕಾರ್ಯಕರ್ತ, ಪುಣೆ ಐಸಿಸ್ ಮಾಡ್ಯೂಲ್ ಪ್ರಕರಣದ ಆರೋಪಿ ಸಾಕೀಬ್ ನಾಚನ್ (67) ಶನಿವಾರ ದೆಹಲಿಯ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಡ್ಘಾ ನಿವಾಸಿಯಾಗಿದ್ದ ನಾಚನ್ ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ)ದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ. 2002-03ರಲ್ಲಿ ಮುಂಬೈನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸಿಮಿ ಕೈವಾಡವಿದ್ದು, ಇದೇ ಪ್ರಕರಣದಲ್ಲಿ ಸಾಕಿಬ್ ಸೇರಿದಂತೆ ಹಲವರನ್ನು ದೋಷಿಗಳೆಂದು 2016ರಲ್ಲಿ ಘೋಷಿಸಿದ್ದ ನ್ಯಾಯಾಲಯ ಅವರಿಗೆ ಶಿಕ್ಷೆಯನ್ನೂ ವಿಧಿಸಿತ್ತು.
ಈ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ಅನುಭವಿಸಿ ಆತ ಜೈಲಿನಿಂದ ಬಿಡುಗಡೆಯಾಗಿದ್ದ.ಬಳಿಕ 2023ರಲ್ಲಿ ರಾಷ್ಟ್ರೀಯ ತನಿಖಾ ದಳವು ಐಸಿಸ್ ಕಾರ್ಯಕರ್ತರ ಮೇಲೆ ದೇಶವ್ಯಾಪಿ ದಾಳಿ ನಡೆಸಿತ್ತು. ಈ ವೇಳೆ ಸಾಕೀಬ್‌ನ ಹುಟ್ಟೂರು ಪಡ್ಭಾದ ಮೇಲೂ ದಾಳಿ ನಡೆಸಿ ಈ ಪ್ರಕರಣದಲ್ಲೂ ಆತನನ್ನು ಬಂಧಿಸಿತ್ತು. ತನಿಖೆ ವೇಳೆ ಈತ ಭಾರತದಲ್ಲಿನ ಐಸಿಸ್ ಸಂಘಟನೆಯ ಮುಖ್ಯಸ್ಥನಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು. ಅಲ್ಲದೆ ಈ ಸಂಘಟನೆಗೆ ಕಾರ್ಯಕರ್ತರನ್ನು ನೇಮಕ ಮಾಡುವ, ಅವರಿಗೆ ಸ್ಫೋಟಕ ಬಳಸಲು ತರಬೇತಿ ನೀಡುವ ಕೆಲಸವನ್ನು ಮಾಡಿದ್ದು ಕಂಡುಬಂದಿತ್ತು. ಅಲ್ಲದೆ ತನ್ನ ಹುಟ್ಟೂರನ್ನು ಭಾರತದಿಂದ ಸ್ವತಂತ್ರ್ಯಗೊಂಡ ಪ್ರದೇಶ ಎಂದೂ ಘೋಷಿಸಿಕೊಂಡಿದ್ದ. ಈ ಪ್ರಕರಣದಲ್ಲಿ ಬಂಧನದ ಬಳಿಕ ಈತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿಡಲಾಗಿತ್ತು.
ಜೂ.24ರಂದು ಆರೋಗ್ಯ ಹದಗೆಟ್ಟಿದ್ದರಿಂದ ಸಾಕೀಬ್‌ನನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
)
;Resize=(128,128))
;Resize=(128,128))
;Resize=(128,128))
;Resize=(128,128))