ಸಾರಾಂಶ
ನವದೆಹಲಿ : ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ಕೃಷಿ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲೇ ಪಂಜಾಬ್ ಹಾಗೂ ಹರ್ಯಾಣದ 101 ರೈತರು ಆರಂಭಿಸಿರುವ ದಿಲ್ಲಿ ಚಲೋ ಪಾದಯಾತ್ರೆಯನ್ನು ಶುಕ್ರವಾರ ಹರ್ಯಾಣದ ಶಂಭು ಗಡಿಯಲ್ಲೇ ತಡೆಹಿಡಿಯಲಾಗಿದೆ.
ಈ ವೇಳೆ ರೈತರು ಮಾರ್ಗಮಧ್ಯೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ಮುಂದಾದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆಯಲ್ಲಿ ಬಿಕೆಯು ಕ್ರಾಂತಿಕಾರಿ ಸಂಘಟನೆಯ ಅಧ್ಯಕ್ಷ ಸುರ್ಜೀತ್ ಸಿಂಗ್ ಸೇರಿ ಸುಮಾರು 10 ರೈತರು, ರೈತ ಮುಖಂಡರು ಗಾಯಗೊಂಡಿದ್ದಲ್ಲದೆ, 70ಕ್ಕೂ ಹೆಚ್ಚು ಮಂದಿ ರೈತ ಬೆಂಬಲಿಗರನ್ನು ವಶಕ್ಕೆಪಡೆಯಲಾಗಿದೆ.
ಏತನ್ಮಧ್ಯೆ, ಅಶ್ರುವಾಯು ಪ್ರಯೋಗದಿಂದ ಹಲವು ರೈತರು ಗಾಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರದ ಮಟ್ಟಿಗೆ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ತಿಳಿಸಿದ್ದಾರೆ.ಆಗಿದ್ದೇನು?:
ಕೇಂದ್ರ ಸರ್ಕಾರದ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾದಡಿ ಹಲವು ದಿನಗಳಿಂದ ಹೋರಾಟ ನಡೆಸುತ್ತಾ ಬಂದಿರುವ ರೈತರು ಹರಿಯಾಣದ ಶಂಭುಗಡಿ ಮೂಲಕ ದೆಹಲಿಗೆ ಪಾದಯಾತ್ರೆ ತೆರಳುವುದಾಗಿ ಘೋಷಿಸಿದ್ದರು. 101 ರೈತರಷ್ಟೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ನಿರ್ಧರಿಸಲಾಗಿತ್ತು. ಆದರೆ ಅವರ ಬೆಂಬಲಿಗರೂ ಸೇರಿ ಸಂಖ್ಯೆ 1000 ಸಮೀಪಿಸಿತ್ತು.ಅದರಂತೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರಂಭವಾದ ಪಾದಯಾತ್ರೆ ಕೆಲವೇ ಮೀಟರ್ ದೂರ ಸಾಗುತ್ತಿದ್ದಂತೆ ಶಂಭು ಗಡಿ ಸನಿಹದಲ್ಲೇ ತಡೆಯೊಡ್ಡಲಾಯಿತು.
ಈ ವೇಳೆ ಕೆಲ ರೈತರು ಬ್ಯಾರಿಕೇಡ್‌ಗಳನ್ನು ಕೀಳಲು ಪ್ರಯತ್ನಿಸಿದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಆಗ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರೈತ ಸಂಘಟನೆಗಳು ಈ ಪಾದಯಾತ್ರೆಯನ್ನು ದಿನದ ಮಟ್ಟಿಗೆ ಹಿಂಪಡೆದುಕೊಂಡಿತು.ಇದಕ್ಕೂ ಮುನ್ನ ಪ್ರತಿಭಟನಾನಿರತ ರೈತರಿಗೆ ಗಡಿದಾಟಿ ದೆಹಲಿ ಪ್ರವೇಶಿಸದಂತೆ ಪೊಲೀಸರು ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.
ಪಾದಯಾತ್ರೆ ಆರಂಭಕ್ಕೂ ಮುನ್ನ ಹರ್ಯಾಣದ ಗಡಿ ಜಿಲ್ಲೆ ಅಂಬಾಲಾದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಐದಕ್ಕಿಂತ ಹೆಚ್ಚು ಮಂದಿ ಗುಂಪುಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತಲ್ಲದೆ, ಜಿಲ್ಲೆಯ 11 ಗ್ರಾಮಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಮತ್ತು ಗುಂಪು ಎಸ್‌ಎಂಎಸ್‌ಗಳನ್ನು ನಿರ್ಬಂಧಿಸಲಾಗಿತ್ತು. ರೈತರ ಪಾದಯಾತ್ರೆ ಹಿನ್ನೆಲೆಯಲ್ಲಿ ದೆಹಲಿ ಗಡಿಯಲ್ಲೂ ಬಿಗಿಭದ್ರತೆ ಕಲ್ಪಿಸಲಾಗಿದೆ.ಪ್ರತಿಭಟನಾನಿರತ ರೈತರು ಈ ಹಿಂದೆ ಈ ವರ್ಷದ ಫೆ.13 ತ್ತು ಫೆ.21ರಂದೂ ಇದೇ ರೀತಿ ದೆಹಲಿ ಚಲೋ ಹಮ್ಮಿಕೊಳ್ಳಲು ಮುಂದಾಗಿದ್ದರೂ ಭದ್ರತಾ ಸಿಬ್ಬಂದಿ ಅವರ ಪ್ರಯತ್ನ ವಿಫಲಗೊಳಿಸಿದ್ದರು.
ರೈತರ ಜತೆ ಮಾತುಕತೆ- ಕೇಂದ್ರ ಭರವಸೆ:ಈ ನಡುವೆ ರೈತರ ಜತೆ ಮಾತುಕತೆಗೆ ಸಿದ್ಧ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರು ಹೇಳಿದ್ದಾರೆ.
ಬೆಂಬಲ ಬೆಲೆಗೇ ಖರೀದಿ- ಕೇಂದ್ರ ಕೃಷಿ ಸಚಿವ : ಇನ್ನು ರೈತರ ಪ್ರತಿಭಟನೆಗೂ ಮುನ್ನ ಸಂಸತ್ತಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಮೋದಿ ಸರ್ಕಾರ ರೈತರು ಬೆಳೆದ ಎಲ್ಲಾ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಬದ್ಧವಾಗಿದೆ ಎಂದು ಸದನಕ್ಕೆ ಭರವಸೆ ನೀಡಿದರು.
ಅಶ್ರುವಾಯುವಿಗೆ ರಾಹುಲ್ ಆಕ್ರೋಶ:
ರೈತ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲಿಸಿದೆ. ಆದರೆ ಅಶ್ರುವಾಯು, ಬಲಪ್ರಯೋಗವನ್ನು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.
ರೈತರ ಬೇಡಿಕೆಗಳು ಏನು?
ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ಕೃಷಿ ಸಾಲ ಮನ್ನಾ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರ ಏರಿಕೆಗೆ ಕಡಿವಾಣ, ಹೋರಾಟದಲ್ಲಿ ಪಾಲ್ಗೊಂಡ ರೈತರ ವಿರುದ್ಧದ ಎಫ್‌ಐಆರ್ ರದ್ದು, 2021ರ ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ಮೃತ ರೈತರಿಗೆ ನ್ಯಾಯ, 2012ರ ಭೂಸ್ವಾಧೀನ ಕಾಯ್ದೆ ಮರುಜಾರಿ, 2020-21ರ ಪ್ರತಿಭಟನೆಯಲ್ಲಿ ಸಾವಿಗೀಡಾದ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು.