ಮೊದಲು ನಿಮ್ಮ ದೇಶದ ಅಲ್ಪ ಸಂಖ್ಯಾತರ ಹಿತ ರಕ್ಷಿಸಿ : ಬಾಂಗ್ಲಾದೇಶಕ್ಕೆ ಭಾರತ ಚಾಟಿ

| N/A | Published : Apr 19 2025, 12:48 AM IST / Updated: Apr 19 2025, 06:05 AM IST

ಸಾರಾಂಶ

ವಕ್ಫ್‌ ತಿದ್ದುಪಡಿ ವಿಧೇಯವನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಮತ್ತಿತರ ಕಡೆ ಇತ್ತೀಚೆಗೆ ನಡೆದ ಹಿಂಸಾಚಾರ ಕುರಿತು ಬಾಂಗ್ಲಾದೇಶ ನೀಡಿದ ಹೇಳಿಕೆಗೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ.  

ನವದೆಹಲಿ: ವಕ್ಫ್‌ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಮತ್ತಿತರ ಕಡೆ ಇತ್ತೀಚೆಗೆ ನಡೆದ ಹಿಂಸಾಚಾರ ಕುರಿತು ಬಾಂಗ್ಲಾದೇಶ ನೀಡಿದ ಹೇಳಿಕೆಗೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ನಮ್ಮ ವಿಚಾರದಲ್ಲಿ ಮಾತನಾಡುವ ಮೊದಲು ಬಾಂಗ್ಲಾದೇಶ ತನ್ನ ನೆಲದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಕುರಿತು ಗಮನಹರಿಸಲಿ ಎಂದು ತಿರುಗೇಟು ನೀಡಿದೆ.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್‌ ಅವರ ಮಾಧ್ಯಮ ಕಾರ್ಯದರ್ಶಿ ಶಫೀಕುಲ್‌ ಆಲಂ ಅವರು, ಮುರ್ಷಿದಾಬಾದ್‌ ಗಲಭೆಯಲ್ಲಿ ತನ್ನ ಪಾತ್ರ ಇಲ್ಲ. ಭಾರತ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕನ್ನು ರಕ್ಷಿಸಬೇಕು ಎಂದು ಹೇಳಿಕೆ ನೀಡಿದ್ದರು.

ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯವು, ನಾವು ಪಶ್ಚಿಮ ಬಂಗಾಳದ ಘಟನೆ ಕುರಿತು ಬಾಂಗ್ಲಾ ಹೇಳಿಕೆಯನ್ನು ಖಂಡಿಸುತ್ತೇವೆ. ಇದು ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಕುರಿತು ಭಾರತದ ಕಳವಳಕ್ಕೆ ತಿರುಗೇಟು ನೀಡುವ ಅವಿವೇಕದ ಪ್ರಯತ್ನವಾಗಿದೆ. ಅಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಎಸಗಿದವರು ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.

ಜತೆಗೆ, ಅನಗತ್ಯ ಹೇಳಿಕೆ ನೀಡುವ ಬದಲು ಬಾಂಗ್ಲಾದೇಶ ಮೊದಲು ತನ್ನ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಲಿ ಎಂದು ಕಿಡಿಕಾರಿದೆ.

ಬಹಿರಂಗ ಕ್ಷಮೆ, ₹36000 ಕೋಟಿ ಹಣ; ಪಾಕ್‌ಗೆ ಬಾಂಗ್ಲಾ ಬೇಡಿಕೆ!

ಢಾಕಾ: 1971ರ ದೇಶ ವಿಭಜನೆ ವೇಳೆ ನಡೆಸಿದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಮತ್ತು ತನಗೆ ದೊರೆಯಬೇಕಾದ 36 ಸಾವಿರ ಕೋಟಿ ರು. ಮೊತ್ತವನ್ನು ಪಾವತಿಸಬೇಕು ಎಂದು ಬಾಂಗ್ಲಾದೇಶ ಒತ್ತಾಯಿಸಿದೆ.

ಗುರುವಾರ ನಡೆದ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಹಂತದ ಮಾತುಕತೆ ಸಂದರ್ಭದಲ್ಲಿ, ಐತಿಹಾಸಿಕವಾಗಿ ಬಗೆಹರಿಯದ ಸಮಸ್ಯೆಗಳನ್ನು ಬಾಂಗ್ಲಾ ಪ್ರಸ್ತಾಪಿಸಿದೆ.1971ರಲ್ಲಿ ಪಾಕಿಸ್ತಾನ ವಿಭಜನೆಯಾಗಿ ಬಾಂಗ್ಲಾದೇಶ ತಲೆಯೆತ್ತಿದ ಬಳಿಕ ತನಗೆ ದೊರೆಯಬೇಕಾಗಿದ್ದ ಒಟ್ಟಾರೆ ಆಸ್ತಿಯ 36 ಸಾವಿರ ಕೋಟಿ ರು. ಮೌಲ್ಯವನ್ನು ಪಾಕಿಸ್ತಾನ ಶೀಘ್ರ ಪಾವತಿಸಬೇಕು ಎಂದು ಬಾಂಗ್ಲಾ ಆಗ್ರಹಿಸಿದೆ. ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಜತೆಗಿನ ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಂಗ್ಲಾ ವಿದೇಶಾಂಗ ಕಾರ್ಯದರ್ಶಿ ಜಶೀಂ ಉದ್ದಿನ್, ‘ಪಾಕಿಸ್ತಾನದೊಂದಿಗೆ ಐತಿಹಾಸಿಕವಾಗಿ ಬಗೆಹರಿಯದ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ್ದೇವೆ’ ಎಂದರು.

ಉಭಯ ದೇಶಗಳ ನಡುವೆ 15 ವರ್ಷಗಳ ನಂತರ ನಡೆದ ಮೊದಲ ಸಭೆ ಇದಾಗಿತ್ತು.