ಜೆನ್ ಝೀಗಳು ನಡೆಸಿದ ಪ್ರತಿಭಟನೆಯ ಪ್ರಭಾವ ಇದೀಗ ಜೆನ್ ಆಲ್ಫಾ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯ ವಿರುದ್ಧ ಚಿಕ್ಕ ವಿದ್ಯಾರ್ಥಿಗಳು ಪ್ರತಿಭಟನೆಯ ಹಾದಿ ತುಳಿದಿದ್ದಾರೆ
ನವದೆಹಲಿ: ಇತ್ತೀಚೆಗೆ ಜೆನ್ ಝೀಗಳು ನಡೆಸಿದ ಪ್ರತಿಭಟನೆ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗೆ ನಾಂದಿ ಹಾಡಿದ ಬೆನ್ನಲ್ಲೇ, ಈ ಪ್ರತಿಭಟನೆಯ ಪ್ರಭಾವ ಇದೀಗ ಜೆನ್ ಆಲ್ಫಾ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯ ವಿರುದ್ಧ ಚಿಕ್ಕ ವಿದ್ಯಾರ್ಥಿಗಳು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಶಿಕ್ಷಕರ ಕೊರತೆ, ಕುಡಿಯುವ ನೀರು, ಟಾಯ್ಲೆಟ್‌ಗಳು, ಫ್ಯಾನ್‌ಗಳು ಮತ್ತು ಆಸನಗಳ ಕೊರತೆಯಂತಹ ಸಮಸ್ಯೆಗಳಿಗೆ ಪರಿಹಾರ ಬೇಡಿ, ಸಾವಿರಾರು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ.
1500 ವಿದ್ಯಾರ್ಥಿಗಳ ಧರಣಿ:
ಉತ್ತರ ಪ್ರದೇಶದ ಫತೇಪುರದ ಸರ್ವೋದಯ ಇಂಟರ್ ಕಾಲೇಜ್‌ನಲ್ಲಿ ಸುಮಾರು 1500 ವಿದ್ಯಾರ್ಥಿಗಳು (6-12ನೇ ತರಗತಿ) ಮಂಗಳವಾರ 6 ಗಂಟೆಗಳ ಕಾಲ ಧರಣಿ ನಡೆಸಿದ್ದಾರೆ. ಶಾಲೆಯಲ್ಲಿ ಫ್ಯಾನ್‌ಗಳು ಮತ್ತು ಬೆಂಚುಗಳ ಕೊರತೆ, ಅಸ್ವಚ್ಛ ಟಾಯ್ಲೆಟ್‌ಗಳು, ಕುಡಿಯುವ ನೀರಿನ ಕೊರತೆ ವಿರುದ್ಧ ಪ್ರತಿಭಟಿಸಿದ್ದಾರೆ. ತಕ್ಷಣವೇ ಅಧಿಕಾರಿಗಳು ಫ್ಯಾನ್‌ಗಳನ್ನು ಅಳವಡಿಸಿದ್ದಾರೆ. ಪ್ರತಿ ತರಗತಿಗೆ 4 ಫ್ಯಾನ್‌ಗಳು, ಆರ್‌ಒ ನೀರು, ಹೊಸ ಟಾಯ್ಲೆಟ್‌ಗಳು, ಬೆಂಚುಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದಾಗಿ ಆಡಳಿತ ಒಪ್ಪಿಕೊಂಡಿದೆ.
ಶಿಕ್ಷಕರಿಗಾಗಿ ಪ್ರತಿಭಟನೆ:
ರಾಜಸ್ಥಾನದ ಬಾರ್ಮರ್ ಮತ್ತು ಜಲೋರ್‌ನಲ್ಲಿ ವಿದ್ಯಾರ್ಥಿಗಳು ಶಾಲೆಯ ಗೇಟ್‌ಗಳನ್ನು ಹಾಕಿ ಧರಣಿ ನಡೆಸಿದ್ದಾರೆ. ಶಿಕ್ಷಕರ ಹುದ್ದೆಗಳು ಖಾಲಿಯಾಗಿರುವುದರಿಂದ ಹಲವು ವಿಷಯಗಳಿಗೆ ಶಿಕ್ಷಕರಿಲ್ಲ, ತಕ್ಷಣ ಶಿಕ್ಷಕರನ್ನು ನಿಯೋಜಿಸುವಂತೆ ಬೇಡಿಕೆ ಇಟ್ಟಿದ್ದಾರೆ.
ಬಿಸಿಯೂಟಕ್ಕಾಗಿ ಮುಷ್ಕರ:
ಬಿಹಾರದ ಗಯಾ ಜಿಲ್ಲೆಯ ಸಿಮುವಾರ ಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಿಕಾರಿ ಉಪ ಜಿಲ್ಲಾ ಕಚೇರಿಯ ಮುಂದೆ ಮುಷ್ಕರ ನಡೆಸಿದ್ದಾರೆ. ಶಾಲೆಯಿಂದ 4 ಕಿ.ಮೀ ದೂರದಲ್ಲಿನ ಉಪ ಜಿಲ್ಲಾ ಕಚೇರಿಗೆ ಮೆರವಣಿಗೆ ತೆರಳಿದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಗುಣಮಟ್ಟ ಕಳಪೆಯಾಗಿರುವುದು, ಹ್ಯಾಂಡ್ ಪಂಪು ಹಾಳಾಗಿರುವುದು, ಅಸ್ವಚ್ಛ ಟಾಯ್ಲೆಟ್‌ಗಳು ಮತ್ತು ಕ್ರೀಡಾ ಸಾಮಗ್ರಿಗಳ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. ಉಪ ಜಿಲ್ಲಾಧಿಕಾರಿ 5 ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
