ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ಖ್ಯಾತ ಉದ್ಯಮಿ, ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ ಪಿ. ಹಿಂದೂಜಾ (85) ವಯೋಸಹಜ ಅನಾರೋಗ್ಯದಿಂದ ಲಂಡನ್‌ನ ಆಸ್ಪತ್ರೆಯಲ್ಲಿ ನಿಧನರಾದರು.

ಲಂಡನ್‌: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ಖ್ಯಾತ ಉದ್ಯಮಿ, ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ ಪಿ. ಹಿಂದೂಜಾ (85) ವಯೋಸಹಜ ಅನಾರೋಗ್ಯದಿಂದ ಲಂಡನ್‌ನ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕಳೆದ ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಉದ್ಯಮ ವಲಯದಲ್ಲಿ ‘ಜಿಪಿ’ ಎಂದೇ ಖ್ಯಾತರಾಗಿದ್ದ ಅವರು ತಮ್ಮ ಹಿರಿಯ ಸಹೋದರ ಶ್ರೀಚಂದ್‌ ಹಿಂದೂಜಾ ಅವರ ನಿಧನದ ಬಳಿಕ 2023ರ ಮೇನಲ್ಲಿ ಹಿಂದೂಜಾ ಗ್ರುಪ್‌ನ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದರು. ಹಲವು ವರ್ಷಗಳಿಂದ ಬ್ರಿಟನ್‌ನಲ್ಲೇ ನೆಲೆಸಿದ್ದ ಅವರು, ವಾಹನ, ತೈಲ, ರಾಸಾಯನಿಕಗಳು, ಬ್ಯಾಂಕಿಂಗ್, ಹಣಕಾಸು ಸೇರಿದಂತೆ ಹಲವಾರ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದರು.

ಹಿಂದೂಜಾ ನಿಧನಕ್ಕೆ ಗಣ್ಯರು ಹಾಗೂ ಉದ್ಯಮ ದಿಗ್ಗಜರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟಿಗ ಅಜರುದ್ದೀನ್‌ಗೆ ತೆಲಂಗಾಣ ಅಲ್ಪಸಂಖ್ಯಾತ ಇಲಾಖೆ ಹೊಣೆ

 ಹೈದರಾಬಾದ್‌ : ಇತ್ತೀಚೆಗಷ್ಟೇ ತೆಲಂಗಾಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ ಅವರಿಗೆ ಖಾತೆ ಹಂಚಿಕೆಯಾಗಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಸಾರ್ವಜನಿಕ ಉದ್ಯಮ ಖಾತೆಗಳ ಹೊಣೆಗಾರಿಕೆಯನ್ನು ನೀಡಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರಾಮಕೃಷ್ಣ ರಾವ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಕಾಂಗ್ರೆಸ್‌ ಪರಿಷತ್‌ ಸದಸ್ಯರಾಗಿ ನೇಮಕಗೊಂಡಿದ್ದ ಅಜರುದ್ದೀನ್‌ ಅವರಿಗೆ ಸಚಿವ ಸ್ಥಾನ ಒಲಿದು ಬಂದಿತ್ತು. ಇದುವರೆಗೆ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು ಸಾರ್ವಜನಿಕ ಉದ್ಯಮ, ಸಚಿವ ಅಡ್ಲೂರಿ ಲಕ್ಷ್ಮಣ್‌ ಕುಮಾರ್‌ ಅವರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯನ್ನು ನಿರ್ವಹಿಸುತ್ತಿದ್ದರು. ಆದರೆ ಈಗ ಎರಡೂ ಖಾತೆ ಅಜರುದ್ದೀನ್‌ ಹೆಗಲಿಗೇರಿವೆ.

ಕಿಲ್ಲರ್‌ ಸಿರಪ್‌ ನೀಡಿದ್ದ ವೈದ್ಯನ ಪತ್ನಿಯೂ ಬಂಧನ 

ಛಿಂದ್ವಾಡ (ಮ.ಪ್ರ.) : ಮಾರಕ ಕೋಲ್ಡ್ರಿಫ್‌ ಕೆಮ್ಮಿನೌಷಧಿ ಸೇವಿಸಿ ಮಧ್ಯಪ್ರದೇಶದ 24 ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಡಾ. ಪ್ರವೀಣ್‌ ಸೋನಿ ಅವರ ಪತ್ನಿಯನ್ನು ಕೂಡ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸೋಮವಾರ ರಾತ್ರಿ ಬಂಧಿಸಿದ್ದಾರೆ.ಡಾ। ಸೋನಿ ಅವರ ಪತ್ನಿ ಜ್ಯೋತಿ ಸೋನಿ ಔಷಧಾಲಯ ನಡೆಸುತ್ತಿದ್ದು, ಡಾ। ಸೋನಿ ಸೂಚನೆ ಮೇರೆಗೆ ಅಲ್ಲಿಂದಲೇ ಮಕ್ಕಳು ಮಾರಕ ಕೋಲ್ಡ್ರಿಫ್‌ ಔಷಧ ಖರೀದಿಸಿದ್ದರು. ಹಾಗಾಗಿ ಆಕೆಯನ್ನೂ ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಕಲಬೆರಕೆಯಾಗಿದ್ದ ಕೋಲ್ಡ್ರಿಫ್‌ ಔಷಧ ಸೇವಿಸಿ, ಕಿಡ್ನಿ ವೈಫಲ್ಯವುಂಟಾಗಿ ಕಳೆದ ತಿಂಗಳು ಮಧ್ಯಪ್ರದೇಶದ 24 ಕಂದಮ್ಮಗಳು ಸಾವನ್ನಪ್ಪಿದ್ದವು. ಖಾಸಗಿ ಕ್ಲಿನಿಕ್‌ ನಡೆಸುತ್ತಿದ್ದ ಡಾ. ಪ್ರವೀಣ್‌ ಸೋನಿ ಮಕ್ಕಳಿಗೆ ಈ ಔಷಧ ಪಡೆಯುವಂತೆ ಸೂಚಿಸಿದ್ದರು.

ಅಕಾಸ ಏರ್‌ನ ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯಾಣಿಕ ಯತ್ನ, ಸೆರೆ 

ಪಿಟಿಐ ವಾರಾಣಸಿವಾರಾಣಸಿಯಿಂದ ಮುಂಬೈಗೆ ತೆರಳಬೇಕಿದ್ದ ಅಕಾಸ ಏರ್‌ ವಿಮಾನದ ತುರ್ತುನಿರ್ಗಮನ ದ್ವಾರವನ್ನು ಪ್ರಯಾಣಿಕನೊಬ್ಬ ತೆರೆಯಲೆತ್ನಿಸಿದ ಆತಂಕಕಾರಿ ಘಟನೆ ಸೋಮವಾರ ಸಂಜೆ ನಡೆದಿದೆ. ವ್ಯಕ್ತಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗಿದೆ.

ಕ್ಯೂಪಿ 1497 ಸಂಖ್ಯೆಯ ವಿಮಾನ ಸೋಮವಾರ ಸಂಜೆ 6:45ಕ್ಕೆ ವಾರಾಣಸಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗಬೇಕಿತ್ತು. ರನ್‌ ವೇ ಮೇಲೆ ಮುಂದುವರಿಯುತ್ತಿದ್ದಂತೆ, ಜೌನ್‌ಪುರದ ಸುಜಿತ್‌ ಸಿಂಗ್ ಎಂಬ ಪ್ರಯಾಣಿಕ ತುರ್ತುನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ್ದಾನೆ. ಕ್ಯಾಬಿನ್‌ ಕ್ರೂಗೆ ಎಚ್ಚರಿಕೆ ಕರೆ ಬಂದ ಕಾರಣ, ಪೈಲಟ್‌ ಏರ್ ಟ್ರಾಫಿಕ್ ಕಂಟ್ರೋಲ್‌ಗೆ (ಎಟಿಸಿ) ಮಾಹಿತಿ ನೀಡಿ, ವಿಮಾನವನ್ನು ವಾಪಸ್‌ ತಂದು ನಿಲ್ಲಿಸಿದ್ದಾರೆ. ಭದ್ರತಾ ಸಿಬ್ಬಂದಿ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ, ಸಿಂಗ್‌ನನ್ನು ವಶಕ್ಕೆ ಪಡೆದಿದ್ದಾರೆ.

ಕುತೂಹಲದಿಂದ ಬಾಗಿಲು ತೆರೆಯಲು ಯತ್ನಿಸಿದೆ ಎಂದು ಸಿಂಗ್ ವಿಚಾರಣೆ ವೇಳೆ ತಿಳಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಭದ್ರತಾ ತಪಾಸಣೆ ಬಳಿಕ ಸಂಜೆ 7:45ಕ್ಕೆ ವಿಮಾನ ಮುಂಬೈಗೆ ಹಾರಾಟ ನಡೆಸಿತು.