ದೆಹಲಿ ಚಲೋ: ರೈತರ ಚಳವಳಿ ಇನ್ನಷ್ಟು ತೀವ್ರ?

| Published : Feb 20 2024, 01:50 AM IST / Updated: Feb 20 2024, 07:52 AM IST

ದೆಹಲಿ ಚಲೋ: ರೈತರ ಚಳವಳಿ ಇನ್ನಷ್ಟು ತೀವ್ರ?
Share this Article
  • FB
  • TW
  • Linkdin
  • Email

ಸಾರಾಂಶ

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ‘ದೆಹಲಿ ಚಲೋ’ ಹೋರಾಟಕ್ಕೆ ಇಳಿದಿರುವ ರೈತರು, ಭಾನುವಾರದ ಸಂಧಾನ ಸಭೆಯಲ್ಲಿ ಕೇಂದ್ರ ಸರ್ಕಾರ ಮುಂದಿಟ್ಟಿದ್ದ ಆಫರ್‌ ಅನ್ನು ತಿರಸ್ಕರಿಸಿದ್ದಾರೆ.

ಪಿಟಿಐ ನವದೆಹಲಿ

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ‘ದೆಹಲಿ ಚಲೋ’ ಹೋರಾಟಕ್ಕೆ ಇಳಿದಿರುವ ರೈತರು, ಭಾನುವಾರದ ಸಂಧಾನ ಸಭೆಯಲ್ಲಿ ಕೇಂದ್ರ ಸರ್ಕಾರ ಮುಂದಿಟ್ಟಿದ್ದ ಆಫರ್‌ ಅನ್ನು ತಿರಸ್ಕರಿಸಿದ್ದಾರೆ. 

ಅಲ್ಲದೆ ಫೆ.21ರಿಂದ ದೆಹಲಿ ಚಲೋ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಹೀಗಾಗಿ ಪಂಜಾಬ್‌, ಹರ್ಯಾಣ ಮತ್ತು ದೆಹಲಿ ಗಡಿ ಪ್ರದೇಶಗಳು ಮತ್ತೊಮ್ಮೆ ರೈತ ಹೋರಾಟದ ರಣಭೂಮಿಯಾಗುವ ಆತಂಕ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರ ನಮ್ಮ ಮುಂದಿಟ್ಟಿರುವ ಪ್ರಸ್ತಾಪ ನಮಗೆ ತೃಪ್ತಿ ತಂದಿಲ್ಲ. ಕೇಂದ್ರ ಸರ್ಕಾರ ಬೇಳೆಕಾಳುಗಳು, ಜೋಳ ಹಾಗೂ ಹತ್ತಿ ಮತ್ತಿತರೆ ಬೆಳೆಗಳಿಗೆ ಮಾತ್ರ ಖರೀದಿ ಗ್ಯಾರಂಟಿ ನೀಡಿದೆ. ಅದರ ಪ್ರಸ್ತಾಪದಲ್ಲಿ ಯಾವುದೇ ಸ್ಪಷ್ಟನೆ ಇಲ್ಲ. 

ನಾವು ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಗೆ ಬರುವ ಎಲ್ಲಾ 23 ಬೆಳೆಗಳಿಗೂ ಇದೇ ಖಾತರಿ ಬಯಸುತ್ತೇವೆ. ಅದು ಈಡೇರುವವರೆಗೂ ಹೋರಾಟ ಮುಂದುವರೆಸಲಿದ್ದೇವೆ ಎಂದು ರೈತ ಮುಖಂಡರಾದ ಸರವಣ್‌ಸಿಂಗ್ ಪಂಧೇರ್‌ ಮತ್ತು ಜಗಜೀತ್‌ ಸಿಂಗ್‌ ಧಲ್ಲೇವಾಲ್‌ ಸೋಮವಾರ ರಾತ್ರಿ ಪ್ರಕಟಿಸಿದ್ದಾರೆ.

ಮತ್ತೊಂದೆಡೆ 2020-21ರಲ್ಲಿ ದೊಡ್ಡ ಮಟ್ಟದ ರೈತ ಹೋರಾಟ ನಡೆಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾ ಕೂಡಾ ಕೇಂದ್ರದ ಆಫರ್‌ ತಿರಸ್ಕರಿಸಿದೆ. ಹೀಗಾಗಿ ರೈತ ಹೋರಾಟ ಮತ್ತಷ್ಟು ತೀವ್ರತೆ ಪಡೆಯುವ ಎಲ್ಲಾ ಸಾಧ್ಯತೆ ಕಂಡುಬಂದಿದೆ.

ಕೇಂದ್ರದ ಆಫರ್‌: ಪ್ರತಿಭಟನಾ ನಿರತ ರೈತರ ಜೊತೆಗೆ ಭಾನುವಾರ ತಡರಾತ್ರಿವರೆಗೂ 4ನೇ ಸುತ್ತಿನ ಸಭೆ ನಡೆಸಿದ್ದ ಕೇಂದ್ರ ಸರ್ಕಾರ, ಬೇಳೆಕಾಳುಗಳು, ಜೋಳ ಹಾಗೂ ಹತ್ತಿ ಬೆಳೆಯುವ ರೈತರಿಂದ ಯಾವುದೇ ಮಿತಿ ಇಲ್ಲದೆ ಮುಂದಿನ ಐದು ವರ್ಷಗಳ ಕಾಲ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವುದಕ್ಕೆ ಗ್ಯಾರಂಟಿ ಕೊಡುವ ಪ್ರಸ್ತಾಪ ಮಾಡಿತ್ತು. 

ಈ ಹಿನ್ನೆಲೆಯಲ್ಲಿ ತಜ್ಞರು ಮತ್ತು ಇತರೆ ರೈತ ಮುಖಂಡರ ಜೊತೆ ಸಭೆ ನಡೆಸಿ ತೀರ್ಮಾನ ತಿಳಿಸುವುದಾಗಿ ರೈತ ನಾಯಕರು ಕೇಂದ್ರ ಸಚಿವರ ನಿಯೋಗಕ್ಕೆ ತಿಳಿಸಿದ್ದರು.

ಆದರೆ ಸರ್ಕಾರದ ಪ್ರಸ್ತಾಪದ ಕುರಿತು ಸೋಮವಾರ ಬೆಳಗ್ಗೆಯೇ ಹಲವು ರೈತ ನಾಯಕರ ವಿರೋಧ ವ್ಯಕ್ತಪಡಿಸಿದ್ದರು. ಏಕೆಂದರೆ, ಪಂಜಾಬ್‌- ಹರ್ಯಾಣದಲ್ಲಿ ಬೇಳೆಕಾಳು, ಜೋಳ ಬೆಳೆಯುವ ರೈತರ ಪ್ರಮಾಣ ಕಡಿಮೆ ಇದೆ.

 ಐದು ವರ್ಷಗಳ ಕಾಲ ಕನಿಷ್ಠ ಬೆಂಬಲ ಬೆಲೆ ಖಾತ್ರಿ ನೀಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ರೈತರ ಅಭಿಮತವಾಗಿತ್ತು.

ಕೇಂದ್ರದಿಂದ ಈ ಆಫರ್ ಏಕೆ?
ದೇಶದಲ್ಲಿ 23 ಬೆಳೆಗಳನ್ನು ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಮಾಡುತ್ತದೆ. ಆದರೆ ಈಗ ಐದಾರು ಬೆಳೆಗಳನ್ನು ಮಾತ್ರ ಐದು ವರ್ಷ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ಸಂಬಂಧ ರೈತರ ಜತೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವವನ್ನು ಇಟ್ಟಿದೆ. 

ಇದರ ಹಿಂದೆ ಬೇರೆಯದೇ ಕಾರಣ ಇದೆ ಎಂದು ಹೇಳಲಾಗುತ್ತಿದೆ. ಪಂಜಾಬ್‌ನಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗುತ್ತದೆ. ಇದಕ್ಕಾಗಿ ಮಿತಿಮೀರಿದ ಪ್ರಮಾಣದಲ್ಲಿ ಅಂತರ್ಜಲ ಬಳಕೆಯಾಗಿ, ಅದರ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಕುಸಿದ ಜಮೀನುಗಳು ಬರಡಾಗಿವೆ.

ಭತ್ತದ ಫಸಲು ಕಟಾವು ಮುಗಿದ ಬಳಿಕ ಕೂಳೆಗೆ ಬೆಂಕಿ ಹಚ್ಚುವುದರಿಂದ ದೆಹಲಿಯಲ್ಲಿ ಪ್ರತಿ ವರ್ಷ ವಾಯುಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಪಂಜಾಬ್‌- ಹರ್ಯಾಣ ರೈತರು ಭತ್ತ, ಗೋಧಿ ಬದಲು ಬೇಳೆಕಾಳುಗಳನ್ನು ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ಹೊರಟಿದೆ.

ಈ ಬೆಳೆ ವೈವಿಧ್ಯತೆಯಿಂದ ದೇಶದಲ್ಲಿ ಬೇಳೆಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಲಿವೆ. ಜೋಳದ ಉತ್ಪಾದನೆಯೂ ಹೆಚ್ಚಾದರೆ ಎಥನಾಲ್‌ ಬಳಕೆಗೆ ಅನುಕೂಲವಾಗುವುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ. ಇದಕ್ಕೆ ರೈತರು ಒಪ್ಪುತ್ತಾರಾ ಎಂಬುದು ಮಂಗಳವಾರ ತಿಳಿಯಲಿದೆ.