ಅಪಘಾತ ಗಾಯಾಳುಗಳಿಗೆ ಫ್ರೀ ಚಿಕಿತ್ಸೆ

| Published : May 07 2025, 12:49 AM IST

ಸಾರಾಂಶ

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮೊದಲ ಒಂದು ವಾರದವರೆಗೆ 1.5 ಲಕ್ಷ ರುಪಾಯಿವರೆಗೆ ನಗದುರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಗಳವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

- 1 ವಾರ, ₹1.5 ಲಕ್ಷದವರೆಗೆ ಟ್ರೀಟ್ಮೆಂಟ್‌ ಉಚಿತ । ಕೇಂದ್ರದ ಅಧಿಸೂಚನೆ- ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಂಭವಿಸುವ ಸಾವು ತಡೆಗೆ ನಿನ್ನೆಯಿಂದಲೇ ಜಾರಿ

----

ಯಾರಿಗೆ? ಎಲ್ಲಿ ಸಿಗುತ್ತೆ?- ದೇಶದ ಯಾವುದೇ ಭಾಗದಲ್ಲಿ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗೆ ಅರ್ಹರು- ಸರ್ಕಾರಿ, ಸರ್ಕಾರ ನಿಗದಿಪಡಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಸಿಗಲಿದೆ ಈ ಉಚಿತ ಚಿಕಿತ್ಸೆ- ಇವೆರಡೂ ವರ್ಗದಲ್ಲಿ ಬಾರದ ಅನ್ಯ ಆಸ್ಪತ್ರೆಗೆ ದಾಖಲಾದರೆ ಪ್ರಾಥಮಿಕ ಚಿಕಿತ್ಸೆ ಲಭ್ಯ

--

6 ರಾಜ್ಯಗಳಲ್ಲಿ ಪ್ರಯೋಗ

- ಅಪಘಾತ ವೇಳೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಗಾಯಾಳುಗಳು ಸಾವನ್ನಪ್ಪುವ ಪ್ರಕರಣ ಹೆಚ್ಚಳವಾಗುತ್ತಿವೆ- ನಗದುರಹಿತ ಚಿಕಿತ್ಸೆ ಜಾರಿಗೆ ಸುಪ್ರೀಂಕೋರ್ಟ್‌ ತಾಕೀತು ಮಾಡಿತ್ತು. ಗಡ್ಕರಿ ಕೂಡ ಪ್ರಕಟ ಮಾಡಿದ್ದರು- ಚಂಡೀಗಢದಲ್ಲಿ ಮೊದಲು, ನಂತರ 6 ರಾಜ್ಯಗಳಲ್ಲಿ ಪ್ರಯೋಗ ಯಶಸ್ವಿಯಾಗಿತ್ತು. ಈಗ ದೇಶಕ್ಕೆ ವಿಸ್ತರಣೆ

--ಪಿಟಿಐ ನವದೆಹಲಿ

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮೊದಲ ಒಂದು ವಾರದವರೆಗೆ 1.5 ಲಕ್ಷ ರುಪಾಯಿವರೆಗೆ ನಗದುರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಗಳವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ಅದರಂತೆ ಮೇ 5ರಿಂದಲೇ ಜಾರಿಗೆ ಬರುವಂತೆ ದೇಶಾದ್ಯಂತ ಸರ್ಕಾರಿ ಮತ್ತು ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆ ಆರಂಭವಾಗಿದೆ.

ಪ್ರತಿ ವರ್ಷ ಸಕಾಲಕ್ಕೆ ಚಿಕಿತ್ಸೆ ದೊರಕದೆ ದೇಶಾದ್ಯಂತ ರಸ್ತೆ ಅಪಘಾತ ಪ್ರಕರಣಗಳಲ್ಲಿ ಹೆಚ್ಚುತ್ತಿರುವ ಸಾವಿನ ಪ್ರಮಾಣ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಸುಪ್ರೀಂಕೋರ್ಟು ಈ ಹಿಂದೆ ಕೆಲವು ಬಾರಿ ನಗದುರಹಿತ ಚಿಕಿತ್ಸೆ ವಿಳಂಬಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಶೀಘ್ರದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಹಲವು ಬಾರಿ ಹೇಳಿದ್ದರು. ಇದು ಈಗ ಸಾಕಾರವಾಗಿದೆ.

ಅಧಿಸೂಚನೆಯಲ್ಲೇನಿದೆ?:

ಸರ್ಕಾರವು ಹೊರಡಿಸಿರುವ ‘ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ಯೋಜನೆ-2025’ರ ನೋಟಿಫಿಕೇಷನ್‌ ಪ್ರಕಾರ, ಯಾವುದೇ ವಾಹನ ಅಪಘಾತದಿಂದ ಗಾಯಗೊಂಡವರು ಯೋಜನೆಯ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಅಪಘಾತ ನಡೆದ ದಿನದಿಂದ 7 ದಿನಗಳವರೆಗೆ ಪ್ರತಿ ಗಾಯಾಳುಗಳು 1.5 ಲಕ್ಷ ರು.ವರೆಗೆ ನಗದುರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ರಾಜ್ಯ ಆರೋಗ್ಯ ಏಜೆನ್ಸಿಗಳು, ಆಸ್ಪತ್ರೆಗಳು, ಇತರೆ ಸಂಸ್ಥೆಗಳು ಮತ್ತು ಪೊಲೀಸರ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‌ಎಚ್‌ಎ) ಈ ಯೋಜನೆಯ ಅನುಷ್ಠಾನ ಏಜೆನ್ಸಿಯಾಗಿ ಕೆಲಸ ಮಾಡಲಿದೆ.

ಬೇರೆ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಅಷ್ಟೆ:

1.5 ಲಕ್ಷದವರೆಗಿನ ನಗದುರಹಿತ ಚಿಕಿತ್ಸೆ ಸರ್ಕಾರಿ ಮತ್ತು ಸರ್ಕಾರದಿಂದ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸೆಗಷ್ಟೇ ಅನ್ವಯವಾಗಲಿದೆ. ಒಂದು ವೇಳೆ ಗಾಯಾಳುಗಳನ್ನು ಅನ್ಯ ಆಸ್ಪತ್ರೆಗಳಿಗೆ ದಾಖಲಿಸಿದರೆ ಅಲ್ಲಿ ಯೋಜನೆಯಡಿ ನೀಡಲಾದ ಮಾರ್ಗಸೂಚಿಯಂತೆ ಪ್ರಾಥಮಿಕ (ಸ್ಟೆಬಿಲೈಸೇಷನ್‌) ಚಿಕಿತ್ಸೆಗಷ್ಟೇ ಅವಕಾಶವಿದೆ.

ರಾಜ್ಯ ರಸ್ತೆ ಸುರಕ್ಷಾ ಮಂಡಳಿಯು ಈ ಯೋಜನೆ ಅನುಷ್ಠಾನದ ನೋಡಲ್‌ ಏಜೆನ್ಸಿಯಾಗಿರಲಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜತೆಗೆ ಸಮನ್ವಯ ಸಾಧಿಸಿ ಗಾಯಾಳುಗಳ ಚಿಕಿತ್ಸೆ, ಹಣ ಪಾವತಿ, ಆಸ್ಪತ್ರೆ ನಿಗದಿ ಮತ್ತಿತರ ವಿಚಾರದ ಜವಾಬ್ದಾರಿ ಹೊರಬೇಕಿದೆ.

ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಲು ಸರ್ಕಾರ ರಸ್ತೆ ಕಾರ್ಯದರ್ಶಿ ಅವರ ಅಡಿ 11 ಸದಸ್ಯರನ್ನೊಳಗೊಂಡ ನಿರ್ದೇಶನಾ ಮಂಡಳಿಯನ್ನೂ ರಚಿಸಲಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿಗಳು ಇದರ ಸದಸ್ಯರಾಗಿರಲಿದ್ದಾರೆ.

ಮಾ.14, 2024ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಂಡೀಗಢದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿತ್ತು. ನಂತರ ಅದನ್ನು ಆರು ರಾಜ್ಯಗಳಿಗೆ ವಿಸ್ತರಿಸಲಾಗಿತ್ತು. ಇದರ ಯಶಸ್ಸು ನೋಡಿಕೊಂಡು ಇದೀಗ ದೇಶಾದ್ಯಂತ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ.