ಕಳೆನಾಶಕ ಸಹಿಷ್ಣು ಬಿಟಿ ಹತ್ತಿಗೆ ಅನುಮತಿಗೆ ಚಿಂತನೆ : ಸರ್ಕಾರದ ಸಮಿತಿಯೊಂದು ಅಧ್ಯಯನ

| Published : Oct 05 2024, 01:49 AM IST / Updated: Oct 05 2024, 05:05 AM IST

ಸಾರಾಂಶ

ಭಾರತದಲ್ಲಿ ಬಿಟಿ (ಕುಲಾಂತರಿ) ಹತ್ತಿ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿರುವಾಗಲೇ ಕಳೆನಾಶಕ ‘ಗ್ಲೈಫೋಸೇಟ್’ನ ಅಕ್ರಮ ಬಳಕೆಯನ್ನು ತಡೆಯಲು ಕಳೆನಾಶಕ-ಸಹಿಷ್ಣು ಬಿಟಿ (ಎಚ್‌ಟಿಬಿಟಿ) ಹತ್ತಿಗೆ ಅನುಮತಿ ನೀಡಬೇಕೇ ಎಂಬ ಚರ್ಚೆಗಳು ಆರಂಭವಾಗಿವೆ.

ನವದೆಹಲಿ: ಭಾರತದಲ್ಲಿ ಬಿಟಿ (ಕುಲಾಂತರಿ) ಹತ್ತಿ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿರುವಾಗಲೇ ಕಳೆನಾಶಕ ‘ಗ್ಲೈಫೋಸೇಟ್’ನ ಅಕ್ರಮ ಬಳಕೆಯನ್ನು ತಡೆಯಲು ಕಳೆನಾಶಕ-ಸಹಿಷ್ಣು ಬಿಟಿ (ಎಚ್‌ಟಿಬಿಟಿ) ಹತ್ತಿಗೆ ಅನುಮತಿ ನೀಡಬೇಕೇ ಎಂಬ ಚರ್ಚೆಗಳು ಆರಂಭವಾಗಿವೆ.

ಶುಕ್ರವಾರ ಸಭೆಯೊಂದರಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿರುವ ಕೃಷಿ ಆಯುಕ್ತ ಪಿ.ಕೆ. ಸಿಂಗ್‌, ‘ಒಂದು ಕಡೆ ಬೆಳೆಗಳಲ್ಲಿ ‘ಗ್ಲೈಫೋಸೇಟ್’ ಬಳಕೆಗೆ ಅನುಮತಿ ನೀಡಿ ಎಂದು ಉದ್ಯಮದ ಒತ್ತಡವಿದೆ. ಆದರೆ ಪರಿಸರಕ್ಕೆ ಮಾರಕವಾದ ಇದರ ಬಳಕೆ ತಡೆಯಲು ಕಳೆನಾಶಕ-ಸಹಿಷ್ಣು ಬಿಟಿ (ಎಚ್‌ಟಿಬಿಟಿ) ಹತ್ತಿಗೆ ಅನುಮತಿ ನೀಡಬೇಕೇ ಎಂಬ ಬಗ್ಗೆಯೂ ಸರ್ಕಾರದ ಸಮಿತಿಯೊಂದು ಅಧ್ಯಯನ ನಡೆಸುತ್ತಿದೆ. ಆದರೆ ಈ ಹತ್ತಿ ಬಳಕೆ ಬಗ್ಗೆಯೂ ಸಾಕಷ್ಟು ಆಕ್ಷೇಪಗಳು ಇದ್ದು ಅದಕ್ಕಾಗಿ ಸಾಧಕ-ಬಾಧಕದ ಅಧ್ಯಯನ ಆಗಬೇಕಿದೆ. ಹೀಗಾಗಿ ಈ ಬಗ್ಗೆ ಈವರೆಗೆ ಏನೂ ತೀರ್ಮಾನಿಸಲು ಆಗಿಲ್ಲ’ ಎಂದು ಹೇಳಿದ್ದಾರೆ.‘ಗ್ಲೈಫೋಸೇಟ್’ ಏಕೆ ಮಾರಕ?:

‘ಗ್ಲೈಫೋಸೇಟ್’ ಎಂಬುದು ಕಳೆನಾಶಕವಾಗಿದೆ. ಇದರ ಬಳಕೆಗೆ ಅನುಮತಿ ಇದ್ದರೂ, ಅದನ್ನು ಬಯಲು ಪ್ರದೇಶದಲ್ಲಿನ ಕಳೆ ನಾಶಕ್ಕೆ ಮಾತ್ರ ಬಳಸಬೇಕು ಎಂಬ ನಿಯಮವಿದೆ. ಏಕೆಂದರೆ ಇದು ಜನರ ಆರೋಗ್ಯಕ್ಕೆ ಮಾರಕವಾದ ಕಳೆ ನಾಶಕ. ಹೀಗಾಗಿ ಇದನ್ನು ಬೆಳೆಗಳಲ್ಲಿನ ಕಳೆ ನಾಶಕ್ಕೆ ಬಳಸಲು ಅನುಮತಿ ಇಲ್ಲ. ಆದರೂ ಇದನ್ನು ಹತ್ತಿ ಬೆಳೆಯಲ್ಲಿನ ಕಳೆ ನಾಶಕ್ಕೆ ದೇಶದಲ್ಲಿ ಅಕ್ರಮವಾಗಿ ಬಳಸಲಾಗುತ್ತಿದೆ. ಏಕೆಂದರೆ ಕಳೆ ತೆಗೆಯಲು ಆಳುಗಳು ಸಿಗದ ಕಾರಣ ಅನಿವಾರ್ಯವಾಗಿ ರೈತರು ಇದನ್ನು ಬಳಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಇದರ ಬಳಕೆ ಹೆಚ್ಚಿದೆ. ಕಳೆನಾಶಕ ಸಹಿಷ್ಣು ಹತ್ತಿಗೆ ಬೇಡಿಕೆ:

‘ಗ್ಲೈಫೋಸೇಟ್’ ಬಳಕೆಯನ್ನು ನಿಯಂತ್ರಿಸಬೇಕು ಎಂದರೆ ಕಳೆನಾಶಕ-ಸಹಿಷ್ಣು ಹತ್ತಿಗೆ (ಎಚ್‌ಟಿಬಿಟಿ) ಅನುಮತಿ ನೀಡಬೇಕು ಎಂಬ ಬೇಡಿಕೆ ಉದ್ಯಮದಿಂದ ಬಂದಿದೆ. ಏಕೆಂದರೆ ‘ಗ್ಲೈಫೋಸೇಟ್’ ಸಹಾಯ ಇಲ್ಲದೇ ಕಳೆಯ ನಡುವೆಯೂ ಎಚ್‌ಟಿಬಿಟಿ ಹತ್ತಿ ಸೊಂಪಾಗಿ ಬೆಳೆಯಬಲ್ಲದು. ಆದರೆ, ‘ಎಚ್‌ಟಿಬಿಟಿ ಹತ್ತಿಯೂ ಪರಿಸರಕ್ಕೆ ಹಾಗೂ ಆರೋಗ್ಯಕ್ಕೆ ಮಾರಕ. ಇದರ ಬೀಜ ಮಾರಾಟಕ್ಕೆ ಅನುಮತಿ ನೀಡಿದರೆ ಬೀಜ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಹಾಗೂ ಸಣ್ಣ ಪುಟ್ಟ ಹತ್ತಿ ಬೀಜ ಕಂಪನಿಗಳು ದಿವಾಳಿ ಆಗುತ್ತವೆ’ ಎಂಬ ವಾದಗಳಿವೆ. ‘ಇದು ಕ್ಯಾನ್ಸರ್‌ಗೆ ಕಾರಣ ಆಗುತ್ತದೆ’ ಎಂಬ ಆರೋಪಗಳಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ದೃಢೀಕರಿಸಿಲ್ಲ.

ಆದರೂ ಇದರ ಪರಿಣಾಮಗಳ ಬಗ್ಗೆ ಅಧ್ಯಯನ ಪೂರ್ಣಗೊಳ್ಳದ ಕಾರಣ ಸರ್ಕಾರ ಸರ್ಕಾರ ಇದಕ್ಕೆ ಅನುಮತಿ ನೀಡಿಲ್ಲ. ಆದರೆ ಕಳೆನಾಶಕ ‘ಗ್ಲೈಫೋಸೇಟ್’ ಬಳಕೆ ನಿಲ್ಲಿಸಬೇಕು ಎಂದರೆ ಎಚ್‌ಟಿಬಿಟಿ ಹತ್ತಿಗೆ ಅನುಮತಿ ನೀಡಬೇಕು ಎಂದು ಕಂಪನಿಗಳು ಆಗ್ರಹಿಸುತ್ತಿವೆ. ಭಾರತದಲ್ಲಿ ಜರ್ಮನಿಯ ಬೇಯರ್‌ ಕಂಪನಿ ಇದರ ಮಾರಾಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಆದಾಗ್ಯೂ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಅಕ್ರಮವಾಗಿ ಈ ಬೀಜಗಳನ್ನು ಮಾರಿ ಬಿತ್ತಲಾಗುತ್ತಿದೆ. ಅದಕ್ಕೇ ಇದನ್ನು ‘ಚೋರ್‌ ಬಿಟಿ’ (ಕಳ್ಳ ಬಿಟಿ ಹತ್ತಿ) ಎಂದು ಕರೆಯುತ್ತಾರೆ.