ನಾಗಚೈತನ್ಯ - ಸಮಂತಾ ಬಗ್ಗೆ ಆರೋಪ: ಸಚಿವೆ ಬಗ್ಗೆ ರಾಗಾಗೆ ನಾಗಾರ್ಜುನ ಪತ್ನಿ ದೂರು

| Published : Oct 05 2024, 01:38 AM IST / Updated: Oct 05 2024, 05:11 AM IST

Actor Nagarjuna

ಸಾರಾಂಶ

ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತೆಲಂಗಾಣದ ಸಚಿವೆ, ಕಾಂಗ್ರೆಸ್‌ನ ಸುರೇಖಾ ವಿರುದ್ಧ ತೆಲುಗಿನ ನಟ ನಾಗಾರ್ಜುನ ಪತ್ನಿ ಅಮಲಾ ಅಕ್ಕಿನೇನಿ , ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ದೂರು ನೀಡಿದ್ದಾರೆ.

ನವದೆಹಲಿ: ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತೆಲಂಗಾಣದ ಸಚಿವೆ, ಕಾಂಗ್ರೆಸ್‌ನ ಸುರೇಖಾ ವಿರುದ್ಧ ತೆಲುಗಿನ ನಟ ನಾಗಾರ್ಜುನ ಪತ್ನಿ ಅಮಲಾ ಅಕ್ಕಿನೇನಿ , ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ದೂರು ನೀಡಿದ್ದಾರೆ. 

ಈ ಕುರಿತು ರಾಹುಲ್‌ ಗಾಂಧಿಗೆ ಪತ್ರ ಬರೆದಿದ್ದು,‘ ನಾಯಕರು ಕೆಳಮಟ್ಟಕ್ಕೆ ಇಳಿದು ಅಪರಾಧಿಗಳಂತೆ ವರ್ತಿಸಿದರೆ ದೇಶ ಏನಾಗುತ್ತದೆ? ರಾಹುಲ್ ಗಾಂಧಿಯವರೇ, ನೀವು ಮಾನವ ಸಭ್ಯತೆಯ ಮೇಲೆ ನಂಬಿಕೆಯಿಟ್ಟಿದ್ದರೆ ದಯವಿಟ್ಟು, ನಿಮ್ಮ ಪಕ್ಷದ ನಾಯಕರನ್ನು ಸಂಯಮದಿಂದ ಇರಲು ಹೇಳಿ. ವಿಷಪೂರಿತ ಹೇಳಿಕೆಯನ್ನು ನೀಡಿದ ಸಚಿವೆಗೆ ತಮ್ಮ ಮಾತನ್ನು ಹಿಂತೆಗೆದುಕೊಳ್ಳಲು ಸೂಚಿಸಿ ಮತ್ತು ನನ್ನ ಕುಟುಂಬದ ಕ್ಷಮೆ ಕೇಳಲು ಹೇಳಿ. ಈ ದೇಶದ ನಾಗರಿಕರನ್ನು ರಕ್ಷಿಸಿ’ ಎಂದಿದ್ದಾರೆ.

ಸಚಿವೆ ಸುರೇಖಾ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ: ನಾಗಾರ್ಜುನ

ಹೈದರಾಬಾದ್‌: ‘ನಟ ನಾಗಚೈತನ್ಯ ಮತ್ತು ನಟಿ ಸಮಂತಾ ವಿಚ್ಚೇದನಕ್ಕೆ ಬಿಎಸ್‌ಆರ್‌ ಮುಖಂಡ ಕೆ.ಟಿ. ರಾಮರಾವ್ ಕಾರಣ’ ಎಂದಿದ್ದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ವಿರುದ್ಧ ಮಾನಹಾನಿ ದಾವೆ ಹೂಡಿದ್ದ ನಟ ಅಕ್ಕಿನೇನಿ ನಾಗಾರ್ಜುನ ಅವರು ಶುಕ್ರವಾರ 100 ಕೋಟಿ ರು. ಮಾನನಷ್ಟ ಮೊಕದ್ದೊಮೆಯನ್ನು ಹೂಡಿದ್ದಾರೆ. ಸುರೇಖಾ ಅವರು ಕ್ಷಮೆಯನ್ನು ತಿರಸ್ಕರಿಸಿ ಮಾತನಾಡಿದ ಅವರು, ಕ್ಷಮೆ ಕೇಳಿದ ಕೂಡಲೇ ಎಲ್ಲಾ ಸರಿ ಹೋಗುತ್ತದೆ ಎಂಬುದು ತಪ್ಪು ತಿಳುವಳಿಕೆ. ಸುರೇಖಾ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ಸಮಂತಾ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ. ಆದರೆ ನನ್ನ ಮತ್ತು ನಮ್ಮ ಕುಟುಂಬದ ಬಳಿ ಕ್ಷಮೆ ಕೇಳಿಲ್ಲಾ ಎಂದು ಹೇಳಿದರು.

ಭದ್ರತಾ ಲೋಪ ಹೆಚ್ಚಳ: ದಿಲ್ಲಿಯ 300 ಜಡ್ಜ್‌ಗಳಿಗೆ ಎಕ್ಸ್‌ ದರ್ಜೆ ಭದ್ರತೆ ಕೋರಿಕೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕೋರ್ಟ್‌ ಕೊಠಡಿಗಳಲ್ಲಿ ಕಂಡುಬಂದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಗಳಲ್ಲಿ ಕೆಲಸ ಮಾಡುವ 300 ನ್ಯಾಯಾಧೀಶರಿಗೆ ಎಕ್ಸ್‌ ದರ್ಜೆ ಭದ್ರತೆ ಕೋರಿ ದೆಹಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕನ್ವಲ್‌ ಜೀತ್‌ ಅರೋರಾ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ‘ಇತ್ತೀಚೆಗೆ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡುವವವರಿಗೂ ಬೆದರಿಕೆಗಳು ಬರುತ್ತಿವೆ. ಕೋರ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 300 ಜಡ್ಜ್‌ಗಳಿಗೆ ಎಕ್ಸ್‌ ದರ್ಜೆಯ ಭದ್ರತೆ ಒದಗಿಸಬೇಕೆಂದು‘ ಮನವಿ ಮಾಡಿದ್ದಾರೆ. ನ್ಯಾಯಾಧೀಶರಿಗೆ ಎಕ್ಸ್‌ ಭದ್ರತೆ ಒದಗಿಸಲು ಕನಿಷ್ಠ 600 ಸಿಬ್ಬಂದಿ ಬೇಕು. ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ತೆದೆಗುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ಆಸ್ತಿಗಳ ರಕ್ಷಣೆಗೆ ಪಾಕ್‌ನಿಂದ 4500 ಕೋಟಿ ಹೆಚ್ಚುವರಿ ರಕ್ಷಣಾ ಬಜೆಟ್‌!

ಇಸ್ಲಾಮಾಬಾದ್‌: ಈಗಾಗಲೇ ಭಾರೀ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇದೀಗ, ತನ್ನ ದೇಶದಲ್ಲಿರುವ ಚೀನಾ ಆಸ್ತಿಗಳ ರಕ್ಷಣೆಗೆ ಸಾವಿರಾರು ಕೋಟಿ ರು. ವ್ಯಯಿಸಬೇಕಾಗಿ ಬಂದಿದೆ. ಚೀನಾದ ವಾಣಿಜ್ಯ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಹೆಚ್ಚುವರಿ 4500 ಕೋಟಿ ರಕ್ಷಣಾ ಬಜೆಟ್‌ಗೆ ಸರ್ಕಾರ ಅನುಮೋದನೆ ನೀಡಿದೆ. ಚೀನಾ ಸಾಲದ ರೂಪದಲ್ಲಿ ಪಾಕಿಸ್ತಾನದಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಇವುಗಳ ಮೇಲೆ ಪದೇ ಪದೇ ಉಗ್ರ ದಾಳಿ ನಡೆಯುತ್ತಿದೆ. ಈ ಬಗ್ಗೆ ಚೀನಾ ಹಲವು ಬಾರಿ ಪಾಕ್‌ಗೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಚೀನಾ ನಿರ್ಮಿತ ಬಂದರು ಸೇರಿದಂತೆ ಹಲವು ವಾಣಿಜ್ಯ ಹಿತಾಸಕ್ತಿ ರಕ್ಷಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆಗೆ ಪಾಕ್‌ ಸರ್ಕಾರ ಮುಂದಾಗಿದೆ.