ವಿಜೃಂಭಣೆಯಿಂದ ನೆರವೇರಿದ ವಿಶ್ವವಿಖ್ಯಾತ ಪುರಿ ರಥಯಾತ್ರೆ

| N/A | Published : Jul 06 2025, 09:30 AM IST

puri temple

ಸಾರಾಂಶ

ಸೂರ್ಯದೇವನ ತಾಪದಿಂದ 625 ಮಂದಿ ಅಸ್ವಸ್ಥರಾಗಿದ್ದು ಹಾಗೂ 3 ಜೀವ ಕಸಿದ ಕಾಲ್ತುಳಿತದ ಘಟನೆಗಳಿಂದ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯ ಅಂತಿಮ ದಿನ ಏನಾಗುವುದೋ ಎಂಬ ಆತಂಕವನ್ನು ತಂಪು ಶನಿವಾರ ಕರಗಿಸಿತು

  ಪುರಿ  :  ಸೂರ್ಯದೇವನ ತಾಪದಿಂದ 625 ಮಂದಿ ಅಸ್ವಸ್ಥರಾಗಿದ್ದು ಹಾಗೂ 3 ಜೀವ ಕಸಿದ ಕಾಲ್ತುಳಿತದ ಘಟನೆಗಳಿಂದ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯ ಅಂತಿಮ ದಿನ ಏನಾಗುವುದೋ ಎಂಬ ಆತಂಕವನ್ನು ತಂಪು ಶನಿವಾರ ಕರಗಿಸಿತು. ತನ್ಮೂಲಕ ಪುರಿ ಜಗನ್ನಾಥ ದೇವರ ವಿಜೃಂಭಣೆಯ ‘ಬಹುದಾ’ ರಥಯಾತ್ರೆಯು ಲಕ್ಷಾಂತರ ಭಕ್ತಾದಿಗಳ ಭಾವ ಪರವಶದೊಂದಿಗೆ ಸಮಾಪ್ತಿಗೊಂಡಿತು.

ಶನಿವಾರ ಮುಂಜಾನೆ 6ಕ್ಕೆ ಪೂಜಾ ವಿಧಿಗಳನ್ನು ಪೂರೈಸಿ ಅಂತಿಮ ದಿನದ ಜಗನ್ನಾಥ ರಥಯಾತ್ರೆಯ ಅಂತಿಮದಿನ ‘ಬಹುದಾ’ ರಥಯಾತ್ರೆಗೆ ಸಿದ್ಧತೆ ಶುರುವಾಯಿತು. ಮಧ್ಯಾಹ್ನದ ವೇಳೆಗೆ ಒಡಿಶಾದ ಪುರಿಯ ಗಜಪತಿ ಮಹಾರಾಜ ದಿವ್ಯಾಸಿಂಗ್‌ದೇಬ್‌ ಅವರು ‘ಬಹುದಾ’ ರಥಯಾತ್ರೆಗೆ ಚಾಲನೆ ನೀಡಿದರು.

ಜಗನ್ನಾಥ, ದೇವಿ ಸುಭದ್ರಾ, ಬಲಭದ್ರ ಮೂರ್ತಿಗಳು ಇದ್ದ ನಂದಿಘೋಷ, ದರ್ಪದಳನ ಹಾಗೂ ತಳಧ್ವಜ ರಥಗಳು ಗುಂಡೀಚ ದೇವಾಲಯದಿಂದ ಪುರಿ ಜಗನ್ನಾಥಾಲಯಕ್ಕೆ ರಥಬೀದಿಯಲ್ಲಿ ಅದ್ಧೂರಿ ರಥಯಾತ್ರೆ ಮೂಲಕ ಸಾಗಿದವು. ಆಗಾಗ್ಗೆ ಸುರಿಯುತ್ತಿದ್ದ ಹದವಾದ ಮಳೆ ಹಾಗೂ ತಂಪಾದ ವಾತಾವರಣದಲ್ಲಿ ಜಗನ್ನಾಥನ ದರ್ಶನ ಪಡೆದು ಪುನೀತರಾದ ಲಕ್ಷಾಂತರ ಭಕ್ತರು ಭಕ್ತಿ ಭಾವದಿಂದ ಪರವಶರಾದರು.

‘ಜಗನ್ನಾಥ ಸ್ವಾಮಿ ನಯನ ಪಥಧಾಮಿ ಭವತುಮೆ..’ ‘ಜೈ ಜಗನ್ನಾಥ, ಜೈ ಸುಭದ್ರಾ, ಜೈ ಬಲದೇವ..’, ‘ಬೋಲೊ ಜೈ ಜಗನ್ನಾಥ..’ ಎಂದು ಘೋಷಣೆ ಕೂಗುತ್ತಿದ್ದ ಭಕ್ತಾದಿಗಳ ಭಕ್ತಿಯ ಉನ್ಮಾದ ಮೇರೆ ಮೀರಿತ್ತು.

‘ಬಹುದಾ’ ಎಂದರೆ ಸಂಸ್ಕೃತ ಭಾಷೆಯಲ್ಲಿ ವಾಪಸಾಗುವುದು ಎಂದರ್ಥ. ಜಗನ್ನಾಥ ದೇವರ ಜನ್ಮಸ್ಥಳ ಎಂದು ನಂಬುವ ಗುಂಡೀಚ ದೇವಾಲಯದಲ್ಲಿ ಒಂದು ವಾರ ಕಳೆದ ಜಗನ್ನಾಥ, ದೇವಿ ಸುಭದ್ರಾ, ಬಲಭದ್ರರ ರಥಗಳು ಗುಂಡೀಚ ದೇವಸ್ಥಾನದಿಂದ ಜಗನ್ನಾಥ ಮಂದಿರವರೆಗೆ 3.7 ಕಿ.ಮೀ. ದೂರ ಅದ್ಧೂರಿ ‘ಬಹುದಾ’ ರಥಯಾತ್ರೆ ಮೂಲಕ ರಾತ್ರಿ 8 ಗಂಟೆಗೆ ತಲುಪಿದವು.

ಅಭೂತಪೂರ್ವ ರಥಯಾತ್ರೆಗೆ ರಸ್ತೆ ಇಕ್ಕೆಲಗಳೆಲ್ಲಿ ಕಿಕ್ಕಿರಿದ್ದು ಸೇರಿದ್ದ ಲಕ್ಷಾಂತರ ಜನಸ್ತೋಮ ಸಾಕ್ಷಿಯಾದರು. ಹಲವರು ರಥಕ್ಕೆ ಕಟ್ಟಲಾಗಿದ್ದ ಹಗ್ಗ ಹಿಡಿದೆಳೆದು ಸಾರ್ಥಕ ಭಾವ ಅನುಭವಿಸಿದರೆ, ಮತ್ತೆ ಕೆಲವರು ಘೋಷ, ಉದ್ಘೋಷಗಳ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.

ತನ್ಮೂಲಕ ಧಾರ್ಮಿಕ ಯಾತ್ರಾಸ್ಥಳ ಪುರಿಯಲ್ಲಿ 9 ದಿನ‌ ಅಸಂಖ್ಯ ಭಕ್ತರನ್ನು ನಿತ್ಯ ಸೂಜಿಗಲ್ಲಿನಂತೆ ಸೆಳೆದಿದ್ದ ಪುರಿ ಜಗನ್ನಾಥ ದೇವರ ‘''ಬಹುದಾ’ ರಥಯಾತ್ರೆ ಶನಿವಾರ ಅದ್ದೂರಿಯಾಗಿ ಸಂಪನ್ನಗೊಂಡಿತು.

ಇಂದು ರಥಯಾತ್ರೆಗೆ ತೆರೆ:

ಭಾನುವಾರ ಈ ಮೂರೂ ಮೂರ್ತಿಗಳಿಗೆ ‘ಸೋನಾ ವೇಷ’ ಸಾಂಪ್ರದಾಯಿಕ ಚಿನ್ನಾಭರಣ ಅಲಂಕಾರ ಮತ್ತು ಮೂಲಸ್ಥಾನದಲ್ಲಿ ಮೂರ್ತಿಗಳ ಪ್ರತಿಷ್ಠಾನದ ಮೂಲಕ ಈ ವರ್ಷದ ಹೆಸರಾಂತ ರಥಯಾತ್ರೆಗೆ ತೆರೆಬೀಳಲಿದೆ.

ವಿಘ್ನವಿಲ್ಲದೆ ನಡೆದ ರಥಯಾಥ್ರೆ:

ಜೂ.27ರಂದು ಆರಂಭವಾಗಿದ್ದ ರಥೋತ್ಸವದಲ್ಲಿ ವಿಪರೀತ ಸೆಕೆ, ದಟ್ಟಣೆಯಿಂದ 625 ಮಂದಿ ಅಸ್ವಸ್ಥಗೊಂಡಿದ್ದು ಹಾಗೂ ಬಳಿಕ ಎರಡೇ ದಿನದಲ್ಲಿ ಗುಂಡೀಚ ಮಂದಿರದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೂವರು ಸಾವಿಗೀಡಾಗಿದ್ದರಿಂದ ಆತಂಕ ಉಂಟಾಗಿತ್ತು. ಹಿಂದಿನ ಘಟನೆಗಳಿಂದ ಎಚ್ಚೆತ್ತಿದ್ದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಿದ್ದು, ಭದ್ರತೆ ಹೆಚ್ಚಿಸಿತ್ತು. ಜೊತೆಗೆ, ಅಲ್ಲಲ್ಲಿ ಭಕ್ತಸಮೂಹದ ಮೇಲೆ ನೀರು ಸಿಂಪಡಿಸಲು ವ್ಯವಸ್ಥೆ ಮಾಡಿತ್ತು. ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿ ಜನದಟ್ಟಣೆ ತೀವ್ರವಾಗಿತ್ತು. ಆಗಾಗ್ಗೆ ಸುರಿದ ತುಂತುರು ಮಳೆ ಜನರನ್ನು ತಣ್ಣಗಿಡಲು ನೆರವಾಯಿತು. ಒಟ್ಟಾರೆ ಯಾವುದೇ ವಿಘ್ನವಿಲ್ಲದೆ ಬಹುದಾ ರಥಾಯತ್ರೆ ನಡೆಸಲು ಸ್ಥಳೀಯ ಆಡಳಿತ ಯಶಸ್ವಿಯಾಯಿತು.

ಬೆಂಗಳೂರು ಇಸ್ಕಾನ್‌ನಿಂದ ಪುರಿಯಲ್ಲಿ ಸಂಕೀರ್ಣಕ್ಕೆ ಸಿದ್ಧತೆ

ಪುರಿಯಲ್ಲಿ ಜಗನ್ನಾಥ ರಥಯಾತ್ರೆಯು ಭಕ್ತಿ, ಭಾವಪರವಶತೆಗೆ ಸಾಕಷ್ಟು ಖ್ಯಾತಿ ಪಡೆದಿದ್ದರೂ ಅಲ್ಲಿ ಅವ್ಯವಸ್ಥೆಯೂ ಇದೆ. ಇದನ್ನು ಹೋಗಲಾಡಿಸಲು ಪುರಿಯಲ್ಲಿ ಜಗನ್ನಾಥ ರಥಯಾತ್ರೆ ನಡೆಯುವ ಅವಧಿಯಲ್ಲಿ ಕರ್ನಾಟಕ ಮೂಲದ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ವಾಸ್ತವ್ಯ ಸೇರಿ ಅಗತ್ಯ ಶಾಶ್ವತ ಸೌಕರ್ಯ ಕಲ್ಪಿಸಲು ಪುರಿ ಹೊರವಲಯದಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಸಂಕೀರ್ಣ ನಿರ್ಮಿಸಲು ಸಿದ್ಧತೆ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಇಸ್ಕಾನ್‌ನ ಉಪಾಧ್ಯಕ್ಷ ನವೀನ ನೀರದದಾಸ ಅವರು, ಸ್ಥಳೀಯ ಭಕ್ತರ ಟ್ರಸ್ಟ್ ಸಹಯೋಗದಲ್ಲಿ ದೇವಾಲಯ, ಭಕ್ತಾದಿಗಳಿಗೆ ವಾಸ್ತವ್ಯ ಕೊಠಡಿಗಳು, ಅಕ್ಷಯಪಾತ್ರ ಅಡುಗೆಕೋಣೆ, ಹೆಚ್ಚುಜನ ವಾಸ್ತವ್ಯ ಹೂಡುವ ಡಾರ್ಮಿಟರಿ, ಭಜನಾ ಮಂದಿರ, ಗ್ರಂಥಾಲಯ, ಆಯುರ್ವೇದ ಕೇಂದ್ರ ಹಾಗೂ ಮಾಹಿತಿ ಕೇಂದ್ರಗಳನ್ನು ಒಳಗೊಂಡಿರುವ ಸುಸಜ್ಜಿತ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಇಲ್ಲಿ ಸ್ಥಳೀಯ ಪರಂಪರೆ, ಸಂಸ್ಕೃತಿ ಹಾಗೂ ವಾಸ್ತು ಶಿಲ್ಪ ಪರಿಚಯಿಸುವಂತೆ ಕಟ್ಟಡ ನಿರ್ಮಾಣವಾಗಲಿದೆ. ಇದಕ್ಕಾಗಿ ಈಗಾಗಲೇ ವಿನ್ಯಾಸಕಾರರು ವಿನ್ಯಾಸ ಪೂರ್ಣಗೊಳಿಸಿದ್ದಾರೆ. ಅದೇ ಜಾಗದಲ್ಲಿ ಕೃಷ್ಣ ದೇವಾಲಯದ ಜತೆಗೆ ಜಗನ್ನಾಥ, ದೇವಿ ಸಭದ್ರ ಹಾಗೂ ಬಲರಾಮರ ದೇವಾಲಯವೂ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಇಸ್ಕಾನ್ ಬೆಂಗಳೂರು ಮಾಧ್ಯಮ ವಿಭಾಗದ ಉಸ್ತುವಾರಿ ಮೊಹೋತ್ಸಾಹ ಚೈತನ್ಯ ದಾಸ ಮತ್ತು ವಿಮಲ ಕೃಷ್ಣದಾಸ ಅವರು ಹಾಜರಿದ್ದರು.

Read more Articles on