ಸಾರಾಂಶ
ಶ್ರಾವಣ ಮಾಸ ಆರಂಭವಾಗಿರುವ ಹಿನ್ನೆಲೆಯಲ್ಲಿ, ಇಲ್ಲಿನ ಬೆಟ್ಟವೊಂದರ ಮೇಲಿರುವ ಮನಸಾ ದೇವಿ ದೇಗುಲದಲ್ಲಿ ನೂರಾರು ಭಕ್ತರು ನೆರೆದಿದ್ದ ವೇಳೆ ಭಾನುವಾರ ಬೆಳಗ್ಗೆ 9ರ ಸುಮಾರಿಗೆ ಭೀಕರ ಕಾಲ್ತುಳಿತ
ಹರಿದ್ವಾರ : ಶ್ರಾವಣ ಮಾಸ ಆರಂಭವಾಗಿರುವ ಹಿನ್ನೆಲೆಯಲ್ಲಿ, ಇಲ್ಲಿನ ಬೆಟ್ಟವೊಂದರ ಮೇಲಿರುವ ಮನಸಾ ದೇವಿ ದೇಗುಲದಲ್ಲಿ ನೂರಾರು ಭಕ್ತರು ನೆರೆದಿದ್ದ ವೇಳೆ ಭಾನುವಾರ ಬೆಳಗ್ಗೆ 9ರ ಸುಮಾರಿಗೆ ಭೀಕರ ಕಾಲ್ತುಳಿತ ಸಂಭವಿಸಿದ್ದು, 6 ಜನ ಸಾವನ್ನಪ್ಪಿದ್ದಾರೆ. ಅನೇಕರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುದಾಘಾತದ ವದಂತಿ ಹರಡಿದ್ದರಿಂದ ಜನರು ಆತಂಕಗೊಂಡು ಕಾಲ್ತುಳಿತ ಸಂಭವಿಸಿರುವುದಾಗಿ ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ಸಿಂಗ್ ಹೇಳಿದ್ದಾರೆ.
ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರಾಖಂಡ ಮುಖ್ಯಮಂತಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ವದಂತಿಯಿಂದ ಅವಘಡ:
‘ಭಾನುವಾರವಾದ್ದರಿಂದ ಮಕ್ಕಳು ಮಹಿಳೆಯರು ಸೇರಿದಂತೆ ಅನೇಕರು ದೇವಿಯ ದರ್ಶನಕ್ಕೆಂದು 500 ಅಡಿ ಎತ್ತರದಲ್ಲಿರುವ ಶಿವಾಲಿಕ್ ಬೆಟ್ಟದತ್ತ ಹೊರಟಿದ್ದರು. ಆ ವೇಳೆ ವಿದ್ಯುದಾಘಾತವಾಗಿದೆ ಎಂದು ಹರಡಿದ ವದಂತಿಯಿಂದಾಗಿ ಹಠಾತ್ ಕಾಲ್ತುಳಿತವಾಗಿದ್ದು, 35ಕ್ಕೂ ಅಧಿಕ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅದರಲ್ಲಿ 6 ಜನ ಮೃತಪಟ್ಟಿದ್ದಾರೆ’ ಎಂದು ಎಸ್ಪಿ ಪ್ರಮೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಹಲವು ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದು ಕಂಡುಬಂದಿದ್ದು, ಜನ ಅದನ್ನೇ ಆಧಾರವಾಗೊಟ್ಟುಕೊಂಡು ಮೇಲೆ ಹತ್ತಲು ಯತ್ನಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಹಾನಿ ತಡೆದು ಜನರಿಗೆ ನೆರವಾಗಲು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಅಗ್ನಿಶಾಮಕ ದಳವನ್ನು ನೇಮಿಸಲಾಗಿದೆ. ಜತೆಗೆ, ರಾಜ್ಯ ಸರ್ಕಾರವು ಸಹಾಯವಾಣಿ ಸಂಖ್ಯೆಗಳನ್ನೂ ಬಿಡುಗಡೆ ಮಾಡಿದೆ.
ಅತ್ತ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ವದಂತಿ ಹರಡಲು ಕಾರಣರಾದವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಧಾಮಿ ಭರವಸೆ ನೀಡಿದ್ದಾರೆ.