‘ಫ್ಲೈದುಬೈ’ ವಿಮಾನ ಚಾಲನೆ ಮಾಡುತ್ತಿದ್ದ ತಮ್ಮ ಮೇಲೆ ಕಾಕ್‌ಪಿಟ್‌ನಲ್ಲಿ ಒಮಾನ್‌ ಮೂಲದ ಸಹಪೈಲಟ್‌ ಹಮಾಮ್‌ ಅಲ್‌-ಹಮಾಮಿ ಮಾಡಿದ ದಾಳಿ ಹಾಗೂ ಆ ವೇಳೆ ತಾವು ಕಾಕ್‌ಪಿಟ್ ಬಾಗಿಲನ್ನು ಸಾಹಸ ನಡೆಸಿ ತೆರೆದ ಬಗೆಯನ್ನು ಭಾರತ ಮೂಲದ ಪೈಲಟ್‌ ಸ್ಮಿತ್‌ ಮಚ್ಛರ್‌ ಬಿಚ್ಚಿಟ್ಟಿದ್ದಾರೆ

ದುಬೈ: ‘ಫ್ಲೈದುಬೈ’ ವಿಮಾನ ಚಾಲನೆ ಮಾಡುತ್ತಿದ್ದ ತಮ್ಮ ಮೇಲೆ ಕಾಕ್‌ಪಿಟ್‌ನಲ್ಲಿ ಒಮಾನ್‌ ಮೂಲದ ಸಹಪೈಲಟ್‌ ಹಮಾಮ್‌ ಅಲ್‌-ಹಮಾಮಿ ಮಾಡಿದ ದಾಳಿ ಹಾಗೂ ಆ ವೇಳೆ ತಾವು ಕಾಕ್‌ಪಿಟ್ ಬಾಗಿಲನ್ನು ಸಾಹಸ ನಡೆಸಿ ತೆರೆದ ಬಗೆಯನ್ನು ಭಾರತ ಮೂಲದ ಪೈಲಟ್‌ ಸ್ಮಿತ್‌ ಮಚ್ಛರ್‌, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗಿನ ವಿಡಿಯೋ ಕರೆ ಸಂಭಾಷಣೆ ವೇಳೆ ಬಿಚ್ಚಿಟ್ಟಿದ್ದಾರೆ.

‘ನನಗೆ ಸತತ ಏಟು ಬೀಳುತ್ತಿದ್ದರೂ ಒಮ್ಮೆ ಕಾಕ್‌ಪಿಟ್‌ ಬಾಗಿಲು ತೆರೆದೆ. ಆದರೆ ಆತ (ಸಹಪೈಲಟ್‌) ಬಾಗಿಲು ಮುಚ್ಚಿದ. ಕೊನೆಗೆ ಶಕ್ತಿ ಒಗ್ಗೂಡಿಸಿ ಹಿಡಿಕೆ ತಿರುಗಿಸಿ ಬಾಗಿಲು ತೆರೆದೆ. ಇದು ವಿಮಾನದಲ್ಲಿದ್ದವರೆಲ್ಲ ಬದುಕಲು ಸಹಾಯ ಮಾಡಿತು’ ಎಂದು ಮಚ್ಛರ್‌ ಹೇಳಿದ್ದಾರೆ.

ದುಬೈ ಆಸ್ಪತ್ರೆಯಲ್ಲಿರುವ ಸ್ಮಿತ್‌ ಶನಿವಾರ ರಾತ್ರಿ ನೆತನ್ಯಾಹು ಜತೆ ಸವಿಸ್ತಾರವಾಗಿ ವಿಮಾನದಲ್ಲಿ ನಡೆದ ಘಟನಾವಳಿ ವಿವರಿಸಿದರು. ಆಗ ಸ್ಮಿತ್‌ ಸಾಹಸಕ್ಕೆ ಮೆಚ್ಚಿದ ನೆತನ್ಯಾಹು, ‘ನೀವು ವಿಶ್ವದ ಹೀರೋ ಆಗಿದ್ದೀರಿ. ಮೇ 11ರ ಇಸ್ರೇಲ್ ಸ್ವಾತಂತ್ರ್ಯ ದಿನಕ್ಕೆ ಬನ್ನಿ’ ಎಂದು ಆಹ್ವಾನಿಸಿದರು.

ನೆತನ್ಯಾಹುಗೆ ಸ್ಮಿತ್‌ ಹೇಳಿದ್ದೇನು?:

‘ವಿಮಾನ ಆಗಸದಲ್ಲಿದ್ದಾಗ ಸಹಪೈಲಟ್‌ ಎಂದಿನಂತೆ ನಮಾಜ್‌ ಮಾಡಲು ಎದ್ದುನಿಂತ. ನಾನು ಆತನಿಗೆ ಡಿಸ್ಟರ್ಬ್‌ ಮಾಡಬಾರದು ಎಂದು ಗೌರವಸೂಚಕವಾಗಿ ಮುಂದೆ ನೋಡುತ್ತಾ ಕುಳಿತೆ. 4-5 ನಿಮಿಷವಾಗುತ್ತಿದ್ದಂತೆ ಹಿಂದಿನಿಂದ ನನ್ನ ತಲೆಗೆ ಬಲವಾದ ಪೆಟ್ಟು ಬಿತ್ತು. ವಿಮಾನಕ್ಕೇನಾದರೂ ಹಾನಿಯಾಗಿರಬಹುದು ಎಂದು ಮೊದಲಿಗೆ ಭಾವಿಸಿದೆ. ಆದರೆ ನಿರಂತರವಾಗಿ ಒಂದರ ಮೇಲೊಂದರಂತೆ ಹೊಡೆತ ಬೀಳತೊಡಗಿದವು. ಆಗ ಇದು ಸಹ-ಪೈಲಟ್‌ನ ಕೃತ್ಯವೆಂದು ಅರಿತೆ ಹಾಗೂ ಆತನನ್ನು ತಡೆಯಲೂ ಯತ್ನಿಸಿದೆ. ಆದರೆ ಅಷ್ಟರಲ್ಲಾಗಲೇ ನನ್ನ ಕಣ್ಣು ಮಂಜಾಗತೊಡಗಿದ್ದವು’ ಎಂದು ಮಚ್ಛರ್‌ ತಮಗಾದ ಆರಂಭಿಕ ಆಘಾತವನ್ನು ಬಿಚ್ಚಿಟ್ಟರು.

‘ಅಷ್ಟರಲ್ಲಾಗಲೇ ವಿಮಾನ ಕೆಳಮುಖವಾಗಿ ಚಲಿಸಲು ಆರಂಭಿಸಿದ್ದು ನನ್ನ ಅನುಭವಕ್ಕೆ ಬಂತು. ಕೂಡಲೇ ಕಾಕ್‌ಪಿಟ್‌ನ ಬಾಗಿಲು ತೆರೆಯಲೆತ್ನಿಸಿದೆ. ಆದರೆ ಆತ ಅದನ್ನು ಮುಚ್ಚಿಬಿಟ್ಟ. ಅದಾಗಲೇ ನಾನು ಕೆಳಗೆ ಬಿದ್ದಿದ್ದೆ. ಹೊರಗಿಂದ ಜನ ಕೂಗುತ್ತಿದ್ದುದು ಕೇಳಿಸುತ್ತಿತ್ತು. ನನ್ನ ಹಾಗೂ ಜನರ ಸುರಕ್ಷತೆಯನ್ನು ಆದ್ಯತೆಯಾಗಿಸಿಕೊಂಡು ಇದ್ದ ಕಸುವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಬಾಗಿಲು ತೆರೆದೆ. ಹೊರಗೆ ಕಾಯುತ್ತಿದ್ದ ಜನ ತಕ್ಷಣ ಒಳಬಂದು ವಿಮಾನವನ್ನು ನಿಯಂತ್ರಿಸಿದರು’ ಎಂದು ವಿವರಿಸಿದರು.

ಕಾಕ್‌ಪಿಟ್‌ನ ಬಾಗಿಲನ್ನು ಹೇಗೆ ತೆರೆದಿರಿ ಎಂದು ನೆತನ್ಯಾಹು ಕೇಳಿದಾಗ, ‘ಒಳಗಿರುವ ಹಿಡಿಯನ್ನು ತಿರುಗಿಸುವ ಮೂಲಕ ಅದನ್ನು ತೆರೆಯಬಹುದು. ಹೊರಗಿನಿಂದಾದರೆ ಕೋಡ್‌ ಹಾಕಬೇಕಾಗುತ್ತದೆ. ಕೆಲ ಸಿಬ್ಬಂದಿ ಕೋಡ್‌ ಒತ್ತಲು ಯತ್ನಿಸುತ್ತಿದ್ದರಾದರೂ ಸಹಪೈಲಟ್‌ ಅದಕ್ಕೆ ಅಡ್ಡಿಮಾಡುತ್ತಿದ್ದ. ಆಗ ಉಳಿದಿದ್ದ ಆಯ್ಕೆಯೆಂದರೆ, ಒಳಗಿನಿಂದ ಹಿಡಿಯನ್ನು ತಿರುಗಿಸುವುದು. ಹೇಗೋ ನಾನದನ್ನು ಮಾಡಿದೆ. ಮುಂದೆ ಏನಾಯಿತು ಎಂಬುದು ನಿಮಗೆ ಗೊತ್ತೇ ಇದೆ’ ಎಂದು ಮಚ್ಛರ್‌ ಹೇಳಿದರು.

ನೀವು ವಿಶ್ವದ ಹೀರೋ- ಮಚ್ಛರ್‌ಗೆ ನೆತನ್ಯಾಹು ಪ್ರಶಂಸೆ:

ಮಚ್ಛರ್‌ ಅವರ ಶೌರ್ಯಗಾಥೆಯನ್ನು ಅವರ ಬಾಯಿಂದಲೇ ಆಲಿಸಿದ ನೆತನ್ಯಾಹು, ‘ನೀವು ಇಸ್ರೇಲ್‌, ಭಾರತ ಹಾಗೂ ಇಡೀ ವಿಶ್ವದ ಹೀರೋ’ ಎಂದರು. ಜತೆಗೆ, ‘ಸ್ವಾತಂತ್ರ್ಯ ದಿನದಂದು ನಾವು ಕೊಡುವ ಅತ್ಯುಚ್ಚ ಗೌರವವಾದ ಜ್ಯೋತಿ ಬೆಳಗುವ ಕಾರ್ಯವು ಈ ಬಾರಿ ನಿಮ್ಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಿಂದ ಆಗಬೇಕು’ ಎಂದು ಅವರನ್ನು 2027ರ ಮೇ 11ರ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ವಿಮಾನ ಪತನದ ಯತ್ನಕ್ಕೆ ಅಲ್‌ಖೈದಾ ಉಗ್ರರು ಖುಷ್‌

ದುಬೈ: 9/11ರ ಭಯೋತ್ಪಾದಕ ದಾಳಿಯ ರೀತಿಯಲ್ಲೇ ನಡೆಸಲು ಉದ್ದೇಶಿಸಿ ಫ್ಲೈದುಬೈ ವಿಮಾನ ಅಪಹರಣವನ್ನು ಅಲ್‌ ಖೈದಾ ಉಗ್ರಸಂಘಟನೆ ಶ್ಲಾಘಿಸಿದೆ ಹಾಗೂ ಇಸ್ಲಾಮೇತರರನ್ನು ಗುರಿಯಾಗಿಸಿಕೊಂಡು ಇನ್ನಷ್ಟು ದಾಳಿಗಳನ್ನು ನಡೆಸಲು ಕರೆ ನೀಡಿದೆ ಎಂದು ‘ದಿ ನ್ಯೂಯಾರ್ಕ್‌ ಪೋಸ್ಟ್‌’ ವರದಿ ಮಾಡಿದೆ. ಅಲ್‌ ಖೈದಾ ಬೆಂಬಲಿಗರು ಆರಂಭಿಸಿರುವ ಅಲ್‌-ಬಯಾನ್‌ ಎಂಬ ಮಾಸಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಟೆಲಿಗ್ರಾಂನಲ್ಲಿ ಹರಿದಾಡುತ್ತಿದೆ. ಅರೇಬಿಕ್‌ ಭಾಷೆಯಲ್ಲಿರುವ ಆ ಲೇಖನವನ್ನು ಉಲ್ಲೇಖಿಸಿ, ಪೋಸ್ಟ್‌ ವರದಿ ಮಾಡಿದೆ.