ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದರೆ ಎಂದಿಗೂ ಬಂಗಾಳದಲ್ಲಿ ಬಾಬ್ರಿ ಮಸೀದಿ ನಿರ್ಮಿಸುವುದಕ್ಕೆ ಬಿಡುವುದಿಲ್ಲ ಎಂದು  ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿ ಅಮಿತ್‌ ಶಾ ಗುಡುಗಿದ್ದಾರೆ.

ರಾಣಿಗಂಜ್‌/ ಬಿರ್ಭುಮ್‌: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದರೆ ಎಂದಿಗೂ ಬಂಗಾಳದಲ್ಲಿ ಬಾಬ್ರಿ ಮಸೀದಿ ನಿರ್ಮಿಸುವುದಕ್ಕೆ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುಡುಗಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಕಾಂಗ್ರೆಸ್‌, ಟಿಎಂಸಿ, ಡಿಎಂಕೆ, ಎಸ್ಪಿ, ಬಿಎಸ್‌ಪಿ ಸೇರಿದಂತೆ ಕೆಲ ಪಕ್ಷಗಳು 550 ವರ್ಷ ರಾಮನನ್ನು ಟೆಂಟ್‌ನಲ್ಲಿ ಇಡುವುದಕ್ಕೆ ಪ್ರೋತ್ಸಾಹಿಸಿದರು. ಆದರೆ ಮೋದಿಯವರು ರಾಮ ಮಂದಿರ ನಿರ್ಮಿಸಿದಾಗ ಮಮತಾ ಬ್ಯಾನರ್ಜಿಯಂತವರು ವಿರೋಧಿಸಿದರು. ಈಗ, ಮಮತಾ ಬ್ಯಾನರ್ಜಿಯಂತೆಯೇ ಅದೇ ಮಾದರಿಯಲ್ಲಿ ಹುಮಾಯೂನ್ ಕಬೀರ್ ಬಂಗಾಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಈ ರಾಜ್ಯದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಎಂದಿಗೂ ಬಿಡುವುದಿಲ್ಲ’ ಎಂದು ಹೇಳಿದರು.

ನನ್ನ ವಿರುದ್ಧ 19 ರಾಜ್ಯ, ಕೇಂದ್ರ ಸರ್ಕಾರದ ಜಂಟಿ ಸಮರ: ದೀದಿ 

ಸೂರಿ (ಪಶ್ಚಿಮ ಬಂಗಾಳ): ‘ನನ್ನ ವಿರುದ್ಧ ಹೋರಾಡಲು ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತದ 19 ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಒಟ್ಟಿಗೆ ಬಂದಿವೆ. ಆದರೆ ನಾನು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.

ಬೀರಭೂಮ್‌ ಜಿಲ್ಲೆಯ ಸೂರಿಯಲ್ಲಿ ಚುನಾವಣಾ ರ್‍ಯಾಲಿ

ಬೀರಭೂಮ್‌ ಜಿಲ್ಲೆಯ ಸೂರಿಯಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಒಟ್ಟು 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ನನ್ನ ವಿರುದ್ಧ ಒಗ್ಗಟ್ಟಾಗಿವೆ. ಆದರೆ ನಾನೊಬ್ಬಳೇ ಅವರಿಗೆ ಸಾಕು. ನಾನು ಒಬ್ಬಂಟಿ ಎಂದು ಭಾವಿಸುವುದಿಲ್ಲ. ಹಾಗಾಗಿ ಸಾಮಾನ್ಯ ಜನರಿಗಾಗಿ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ನನಗೆ ಸಾರ್ವಜನಿಕರ ಆಶೀರ್ವಾದವಿದೆ. ಚುನಾವಣೆಯಲ್ಲಿ ಟಿಎಂಸಿ 226ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.