ಫ್ಲೈದುಬೈ ವಿಮಾನ ಅಪಹರಣವನ್ನು ತಪ್ಪಿಸಿ, ಸ್ವತಃ ದಾಳಿಗೆ ತುತ್ತಾದರೂ ನೂರಾರು ಜನರ ಪ್ರಾಣರಕ್ಷಣೆ ಮಾಡಿದ ಕ್ಯಾಪ್ಟನ್‌ ಸ್ಮಿತ್‌ ಮಚ್ಛರ್‌ ಜತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೋ ಕಾಲ್‌ ಮೂಲಕ ಸಂಭಾಷಣೆ ನಡೆಸಿದ್ದಾರೆ.

- ಸಂಕಟ ಬಂದಾಗ ಚಾಲೀಸಾ ಪಠಿಸುವೆ, ದಾಳಿ ವೇಳೆಯೂ ಹಾಗೆಯೇ ಮಾಡಿದೆ । ದೇವರೇ ನನ್ನ ರಕ್ಷಿಸಿದ- ಜೀವ ಹೋಗುವಂತಿದ್ದರೂ 180 ಪ್ರಯಾಣಿಕರ ಪ್ರಾಣ ರಕ್ಷಿಸಲು ಪುಟಿದೆದ್ದು ಬಾಗಿಲು ತೆರೆದೆ: ಕ್ಯಾಪ್ಟನ್‌ ಸ್ಮಿತ್‌ಟಾಪ್‌- ರೋಚಕ- ಫ್ಲೈದುಬೈ ವಿಮಾನದ ಸಾಹಸಿ ಪೈಲಟ್‌ ಜತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾಲ್‌ ಸಂಭಾಷಣೆ

ಕಾಕ್‌ಪಿಟ್‌ ನೆಲದ

ಮೇಲೆ ಕುಸಿದುಬಿದ್ದೆ

ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ನಾನು ಕಾಕ್‌ಪಿಟ್‌ನ ನೆಲದ ಮೇಲೆ ಕುಸಿದುಬಿದ್ದೆ. ನನ್ನಲ್ಲಿ ಉಳಿದಿದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತನಾದೆ. ನನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದೆ. ಆದರೆ ಬೇರೆಯವರು ಪ್ರಾಣ ಕಳೆದುಕೊಳ್ಳಲು ಅವಕಾಶ ನೀಡಬಾರದು ಎಂದು ಅದೇ ಸಮಯದಲ್ಲಿ ನಿರ್ಧರಿಸಿದ್ದೆ.

- ಕ್ಯಾಪ್ಟನ್‌ ಸ್ಮಿತ್‌ ಮಚ್ಛರ್‌, ಫ್ಲೈದುಬೈ ವಿಮಾನದ ಪೈಲಟ್‌ಭಾರತೀಯರು ಜೀವ

ಕಾಪಾಡುವವರು

ಭಾರತೀಯರು ಜೀವ ತೆಗೆಯುವವರಲ್ಲ, ಬದಲಾಗಿ ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡಲು ಸಿದ್ಧರಿರುವವರು ಎಂದು ಘಟನೆಯ ಬಳಿಕ ಇಡೀ ದೇಶ ಹೆಮ್ಮೆಯಿಂದ ಹೇಳುತ್ತಿದೆ. ನೀವು (ಕ್ಯಾಪ್ಟನ್‌ ಸ್ಮಿತ್‌) 140 ಕೋಟಿ ಭಾರತೀಯರ ಗೌರವವನ್ನು ಹೆಚ್ಚಿಸಿದ್ದೀರಿ. ನೀವು ನಮ್ಮ ಹೆಮ್ಮೆ.

- ನರೇಂದ್ರ ಮೋದಿ, ಪ್ರಧಾನಿಪಿಟಿಐ ನವದೆಹಲಿ

ಫ್ಲೈದುಬೈ ವಿಮಾನ ಅಪಹರಣವನ್ನು ತಪ್ಪಿಸಿ, ಸ್ವತಃ ದಾಳಿಗೆ ತುತ್ತಾದರೂ ನೂರಾರು ಜನರ ಪ್ರಾಣರಕ್ಷಣೆ ಮಾಡಿದ ಕ್ಯಾಪ್ಟನ್‌ ಸ್ಮಿತ್‌ ಮಚ್ಛರ್‌ ಜತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೋ ಕಾಲ್‌ ಮೂಲಕ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ, ಸ್ಮಿತ್‌ ತಮ್ಮ ಹೋರಾಟದ ಅನುಭವವನ್ನು ಹಂಚಿಕೊಂಡಿದ್ದು, ‘ಆಂಜನೇಯನ ಸ್ತುತಿಯಾದ ‘ಹನುಮಾನ್‌ ಚಾಲೀಸಾ’ ಮಂತ್ರವನ್ನು ಪಠಿಸುತ್ತ ಧೈರ್ಯ ತಂದುಕೊಂಡು ಎಲ್ಲರನ್ನೂ ರಕ್ಷಿಸಿದೆ’ ಎಂಬ ಕುತೂಹಲಕರ ವಿಚಾರ ಬಿಚ್ಚಿಟ್ಟಿದ್ದಾರೆ. ಅವರ ಪರಾಕ್ರಮಕ್ಕೆ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬುಧವಾರ ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಮುಂದಾಗಿದ್ದ ಒಮಾನಿ ಸಹ-ಪೈಲಟ್‌ನನ್ನು ತಡೆದ ಸ್ಮಿತ್‌, ವಿಮಾನದಲ್ಲಿದ್ದ 180 ಜನರ ಪ್ರಾಣರಕ್ಷಣೆ ಮಾಡಿದ್ದರು. ಈ ವೇಳೆ ಸಹ-ಪೈಲಟ್‌ನ ದಾಳಿಗೆ ತುತ್ತಾಗಿ ಜೀವನ್ಮರಣ ಹೋರಾಟದಲ್ಲಿದ್ದರೂ ಅಗಾಧ ಪರಾಕ್ರಮ ಮೆರೆದಿದ್ದರು. ಸದ್ಯ ಅಬುಧಾಬಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಜತೆ, ಮೋದಿ ವಿಡಿಯೋ ಕರೆ ಮೂಲಕ ಮಾತುಕತೆ ನಡೆಸಿ ಆರೋಗ್ಯ ವಿಚಾರಿಸಿದ್ದಾರೆ.

ಹನುಮಾನ್‌ ಚಾಲೀಸಾ ಪಠಿಸುತ್ತಿದ್ದೆ:

ಪ್ರಧಾನಿ ಬಳಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಸ್ಮಿತ್, ‘ಯಾವಾಗೆಲ್ಲ ಸಂಕಟದ ಸಮಯದಲ್ಲಿರುತ್ತೇನೋ, ಆಗೆಲ್ಲ ಹನುಮಾನ್‌ ಚಾಲೀಸಾ ಪಠಿಸುತ್ತೇನೆ. ಆ ಕ್ಷಣದಲ್ಲೂ (ಮೊನ್ನೆ) ನಾನು ಹನುಮಾನ್ ಚಾಲೀಸಾವನ್ನೇ ಪಠಿಸುತ್ತಿದ್ದೆ, ಮತ್ತು ದೇವರು ನನ್ನನ್ನು ರಕ್ಷಿಸಿದನೆಂದು ನನಗೆ ತಿಳಿದಿದೆ. ನಾನು ನನ್ನ ದೇಶದಿಂದ ದೂರವಿದ್ದೇನೆ, ಆದರೆ ನಮ್ಮ ಸಂಸ್ಕೃತಿಯಿಂದಲ್ಲ. ಈ ಘಟನೆ ನನ್ನ ಜೀವನ ಪಯಣದ ಒಂದು ಭಾಗ. ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ’ ಎಂದರು.

ಇತರರ ಪ್ರಾಣ ಉಳಿಸಲು ನಿರ್ಧಾರ:

ತಾನು ಹೇಗೆ ಎಲ್ಲರ ಪ್ರಾಣರಕ್ಷಣೆ ಮಾಡಿದೆ ಎಂಬುದನ್ನು ರೋಚಕವಾಗಿ ವಿವರಿಸಿದ ಸ್ಮಿತ್, ‘ನಾನು ಕಳೆದ 17 ವರ್ಷಗಳಿಂದ ವಿಮಾನ ಹಾರಿಸುತ್ತಿದ್ದೇನೆ. ಕಳೆದ 11 ವರ್ಷಗಳಿಂದ ಕ್ಯಾಪ್ಟನ್ ಆಗಿದ್ದೇನೆ. ನನ್ನ ಕಣ್ಣುಗಳನ್ನು ಮುಚ್ಚಿದ್ದರೂ ವಿಮಾನದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿದೆ. ಇದು ರಕ್ಷಣಾ ಕಾರ್ಯದಲ್ಲಿ ತುಂಬಾ ಸಹಾಯಕ್ಕೆ ಬಂತು’ ಎಂದರು.

‘ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ನಾನು ಕಾಕ್‌ಪಿಟ್‌ನ ನೆಲದ ಮೇಲೆ ಕುಸಿದುಬಿದ್ದೆ. ನನ್ನಲ್ಲಿ ಉಳಿದಿದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತನಾದೆ. ನನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದೆ. ಆದರೆ ಬೇರೆಯವರು ಪ್ರಾಣ ಕಳೆದುಕೊಳ್ಳಲು ಅವಕಾಶ ನೀಡಬಾರದು ಎಂದು ಅದೇ ಸಮಯದಲ್ಲಿ ನಿರ್ಧರಿಸಿದ್ದೆ. ಅದು ಅತ್ಯಂತ ನಿರ್ಣಾಯಕ ಕ್ಷಣವಾಗಿತ್ತು. ವಿಮಾನವು ಕೆಳಗೆ ಬೀಳುತ್ತಿದೆ ಎಂದು ಆ ಕ್ಷಣದಲ್ಲಿ ನನಗೆ ಅರಿವಾಯಿತು. ನನಗೆ ಅನೇಕ ಗಾಯಗಳಾಗಿದ್ದವು. ನಾನು ಒಂದು ಕಡೆ ಹೊಡೆತಗಳನ್ನು ತಿನ್ನುತ್ತಿದ್ದೆ. ಆದರೂ ವಿಮಾನದ ನೆಲದ ಮೇಲೆ ಮಲಗಿದ್ದ ಕಾರಣ ಬಾಗಿಲು ಹತ್ತಿರವೇ ಇದೆ ಎಂದು ಗೊತ್ತಾಯಿತು. ಹೊಡೆತ ತಿನ್ನುತ್ತಿದ್ದರೂ ಕಾಕ್‌ಪಿಟ್‌ನ ಬಾಗಿಲನ್ನು ತೆರೆಯಲು ಪ್ರಯತ್ನಿಸಿ ಯಶ ಕಂಡೆ. ಕಾಕ್‌ಪಿಟ್ ಬಾಗಿಲು ತೆರೆದ ನಂತರ, ಉಳಿದವರೆಲ್ಲರೂ ಒಳಗೆ ಬಂದರು ಮತ್ತು ಎಲ್ಲರೂ ಸಮಾನವಾಗಿ ಪ್ರಮುಖ ಪಾತ್ರ ವಹಿಸಿದರು’ ಎಂದು ವಿವರಿಸಿದರು.

ಮೋದಿ ಬಗ್ಗೆ ಪ್ರಶಂಸೆ:‘ನೀವು (ಮೋದಿ) ನನ್ನ ಜೀವನದ ಬಹುದೊಡ್ಡ ಆದರ್ಶ ವ್ಯಕ್ತಿ. ನೀವೇ ನನಗೆ ಕರೆ ಮಾಡಿ ಮಾತನಾಡಿರುವುದು ಅತ್ಯಂತ ಹೆಮ್ಮೆಯ ಕ್ಷಣ’ ಎಂದು ಸ್ಮಿತ್‌ ಭಾವುಕರಾಗಿ ನುಡಿದರು.

ಮೋದಿ ಶ್ಲಾಘನೆ:

ಈ ವೇಳೆ ಸ್ಮಿತ್‌ರ ಪರಾಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೋದಿ, ‘ಈ ಘಟನೆಯ ನಂತರ, ಭಾರತೀಯರು ಜೀವ ತೆಗೆಯುವವರಲ್ಲ, ಬದಲಾಗಿ ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡಲು ಸಿದ್ಧರಿರುವವರು ಎಂದು ಇಡೀ ದೇಶ ಹೆಮ್ಮೆಯಿಂದ ಹೇಳುತ್ತಿದೆ. ಆ ಸಮಯದಲ್ಲಿ, ನೀವು ತುಂಬಾ ಗಾಯಗೊಂಡಿದ್ದಿರಿ ಮತ್ತು ಸಾವು ಬದುಕಿನ ಹೋರಾಟದಲ್ಲಿದ್ದಿರಿ. ಆದರೆ ನೀವು ನಿಮ್ಮ ಸ್ವಂತ ಸುರಕ್ಷತೆಯನ್ನು ನಿರ್ಲಕ್ಷಿಸಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದಿರಿ. ನೀವು 140 ಕೋಟಿ ಭಾರತೀಯರ ಗೌರವವನ್ನು ಹೆಚ್ಚಿಸಿದ್ದೀರಿ. ನೀವು ನಮ್ಮ ಹೆಮ್ಮೆ’ ಎಂದು ಕೊಂಡಾಡಿದರು.

ದೇಶಾದ್ಯಂತ ಪ್ರಾರ್ಥನೆ:

‘ನೀವು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ದೇಶಾದ್ಯಂತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ. ಅನೇಕ ಭಾರತೀಯರು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುತ್ತಿದ್ದಾರೆ. ನೀವು ಧೈರ್ಯಶಾಲಿ ವ್ಯಕ್ತಿ. ಭಾರತವು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿದೆ’ ಎಂದು ಮೋದಿ ತಿಳಿಸಿದರು.