ಭಾರತಕ್ಕೆ ಅಮೆರಿಕದಿಂದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ MQ-9B ಡ್ರೋನ್‌: ಒಪ್ಪಂದಕ್ಕೆ ಸಹಿ ಸಾಧ್ಯತೆ

| Published : Sep 23 2024, 01:17 AM IST / Updated: Sep 23 2024, 05:15 AM IST

ಭಾರತಕ್ಕೆ ಅಮೆರಿಕದಿಂದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ MQ-9B ಡ್ರೋನ್‌: ಒಪ್ಪಂದಕ್ಕೆ ಸಹಿ ಸಾಧ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಮಾತುಕತೆಗಳು ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ MQ-9B ಡ್ರೋನ್‌ಗಳ ಖರೀದಿಗೆ ದಾರಿ ಮಾಡಿಕೊಟ್ಟಿವೆ. 

 ವಿಲ್ಮಿಂಗ್ಟನ್‌ (ಅಮೆರಿಕ) : ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಿದ್ದು, ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ನೆರವಾಗಲಿರುವ ಎಂಕ್ಯು-9ಬಿ ಡ್ರೋನ್‌ ಖರೀದಿ ಸಂಬಂಧ ಮಾತುಕತೆಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. 

ಇದೇ ವೇಳೆ ಕೋಲ್ಕತಾದಲ್ಲಿ ಅಮೆರಿಕ ಸಹಯೋಗದಲ್ಲಿ ದೇಶದ ಮೊದಲ ರಕ್ಷಣಾ ವಲಯದ ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೂ ಒಪ್ಪಂದ ಏರ್ಪಟ್ಟಿದೆ.ಡ್ರೋನ್‌ ಖರೀದಿ ಬಗ್ಗೆ ಮುಂದಿನ ತಿಂಗಳು ಉಭಯ ದೇಶಗಳು 25 ಸಾವಿರ ಕೋಟಿ ರು. ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.ಇನ್ನು ಕೋಲ್ಕತಾದಲ್ಲಿ ಅಮೆರಿಕ ಸಹಭಾಗಿತ್ವದಲ್ಲಿ ಸೆಮಿಕಂಡಕ್ಟರ್‌ ಫ್ಯಾಬ್ರಿಕೇಶನ್‌ ಘಟಕ ಸ್ಥಾಪಿಸಲು ಭಾರತ ಮುಂದಾಗಿದ್ದು, 1.52 ಲಕ್ಷ ಕೋಟಿ ರು. ಬಂಡವಾಳ ನಿರೀಕ್ಷೆಯನ್ನು ಹೊಂದಿವೆ. 

ಇದು ಭಾರತದ ಮೊದಲ ರಕ್ಷಣಾ ವಲಯದ ಸೆಮಿಕಂಡಕ್ಟರ್‌ ಘಟಕ ಆಗಲಿದೆ. ಭಾರತ, ಅಮೆರಿಕ ಸೇನಾಪಡೆಗಳು ಹಾಗೂ ಮಿತ್ರಕೂಟದ ದೇಶಗಳು ಇಲ್ಲಿ ಉತ್ಪಾದನೆ ಆಗುವ ಚಿಪ್‌ ಬಳಸಿಕೊಳ್ಳಲಿವೆ.ಭಾರತ ಸೆಮಿಕಂಡಕ್ಟರ್ ಮಿಷನ್ ಮತ್ತು ಭಾರತ್ ಸೆಮಿ, 3ಆರ್ಡಿಟೆಕ್ ಕಂಪನಿಗಳು ಮತ್ತು ಯುಎಸ್ ಸ್ಪೇಸ್ ಫೋರ್ಸ್ ಇದರಲ್ಲಿ ಕೈಜೋಡಿಸಲಿವೆ.

ಎಂಕ್ಯು-9ಬಿ ಡ್ರೋನ್‌ ವೈಶಿಷ್ಟ್ಯಅಮೆರಿಕದ ಜನರಲ್‌ ಅಟೋಮಿಕ್ಸ್‌ ಕಂಪನಿ ತಯಾರಿಸುವ ಡ್ರೋನ್‌ ಇದು. ದೂರದಿಂದಲೇ ಇದನ್ನು ನಿಯಂತ್ರಿಸಬಹುದು. ಕ್ಷಿಪಣಿ ಹೊತ್ತೊಯ್ದು ದಾಳಿ ನಡೆಸಬಲ್ಲದು. ಅಲ್ಲದೆ, ಇದನ್ನು ಗಡಿಯಲ್ಲಿ ಕಣ್ಗಾವಲು, ಮಾನವೀಯ ನೆರವು, ಪರಿಹಾರ ಕಾರ್ಯ, ಶೋಧ ಕಾರ್ಯ, ಭೂ, ನೌಕಾ, ವಾಯುಪಡೆ ಯುದ್ಧಗಳ ವೇಳೆ, ಆಗಸದಿಂದ ಎದುರಾಗಬಹುದಾದ ಅಪಾಯಗಳ ಮುನ್ಸೂಚನೆ ಪಡೆಯಲು- ಹೀಗೆ ನಾನಾ ರೀತಿಯ ಕೆಲಸಗಳಿಗೆ ಬಳಸಬಹುದು.

 ಇದು ಸತತವಾಗಿ 35 ಗಂಟೆಗಳ ಕಾಲ ಆಗಸದಲ್ಲೇ ಕಾರ್ಯನಿರ್ವಹಣೆ ಕ್ಷಮತೆ ಹೊಂದಿದೆ. 5670 ಕೆಜಿ ತೂಕ ಹೊರಬಲ್ಲದು. 40 ಸಾವಿರ ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲದು. ನೆಲದಿಂದ ಕೇವಲ 250 ಅಡಿ ಎತ್ತರದಲ್ಲೂ ಶತ್ರುಗಳ ಕಣ್ತಪ್ಪಿಸಿ ಚಲಿಸಬಲ್ಲದು. ಚಲಿಸುವ ಸಾಮರ್ಥ್ಯ ಗಂಟೆಗೆ 442 ಕಿ.ಮೀ. ಇದೆ.

ಚೀನಾ ವಿರುದ್ಧ ಮತ್ತೆ ಕ್ವಾಡ್‌ ದೇಶಗಳ ಗುಡುಗು

ವಾಷಿಂಗ್ಟನ್‌: ಇಂಡೋ- ಪೆಸಿಫಿಕ್‌ ವಲಯದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಹವಣಿಸುತ್ತಿರುವ ಚೀನಾಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿರುವ ಕ್ವಾಡ್‌ ದೇಶಗಳು, ‘ಇಂಡೋ ಪೆಸಿಫಿಕ್‌ ವಲಯದಲ್ಲಿ ಯಥಾಸ್ಥಿತಿಯಲ್ಲಿನ ಯಾವುದೇ ಬದಲಾವಣೆ ಒಪ್ಪಲು ಸಾಧ್ಯವಿಲ್ಲ. ಈ ವಲಯದಲ್ಲಿ ಮುಕ್ತ, ಸ್ವಾತಂತ್ರ್ಯ, ಶಾಂತಿ, ಸ್ಥಿರತೆ ಕಾಪಾಡಲು ನಾವು ಬದ್ಧ’ ಎಂದು ಘೋಷಿಸಿವೆ.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರ ತವರು ಡೆಲಾವರೆಯ ವಿಲ್ಮಿಂಗ್ಟನ್‌ನಲ್ಲಿ ಶನಿವಾರ ನಡೆದ ಭಾರತ- ಅಮೆರಿಕ- ಆಸ್ಟ್ರೇಲಿಯಾ ಮತ್ತು ಜಪಾನ್‌ ದೇಶಗಳ ಒಕ್ಕೂಟವಾದ ಕ್ವಾಡ್‌ ಸಭೆ ಇಂಥದ್ದೊಂದು ನಿರ್ಣಯವನ್ನು ಅಂಗೀಕರಿಸಿದೆ.

‘ಕ್ವಾಡ್‌ ಸದುದ್ದೇಶದ ಶಕ್ತಿಯಾಗಿದೆ ಮತ್ತು ಹಿಂದೆಂದಿಗಿಂತಲೂ ಹೆಚ್ಚು ವ್ಯೂಹಾತ್ಮಕವಾಗಿ ರೂಪುಗೊಂಡಿದೆ. ರೂಪುಗೊಂಡ ನಾಲ್ಕೇ ವರ್ಷಗಳಲ್ಲಿ ಇಂಡೋ- ಪೆಸಿಫಿಕ್‌ ವಲಯದಲ್ಲಿ ಶಾಶ್ವತ ಪರಿಣಾಮಗಳನ್ನು ಬೀರುವಲ್ಲಿ ಸಂಘಟನೆ ಯಶಸ್ವಿಯಾಗಿದೆ ಮತ್ತು ಭವಿಷ್ಯಕ್ಕೆ ಹೊಸ ಮಾರ್ಗ ತೋರಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇಂಡೋ- ಪೆಸಿಫಿಕ್‌ ವಲಯ ಜಾಗತಿಕ ಭದ್ರತೆ ಮತ್ತು ಸಮೃದ್ಧಿಯಲ್ಲಿ ಕಡೆಗಣಿಸಲಾಗದ ಅಂಶವಾಗಿದೆ. 

ಈ ವಲಯದಲ್ಲಿ ಶಾಂತಿ, ಸ್ಥಿರತೆ ಕಾಪಾಡಲು ನಾವು ಬದ್ಧರಾಗಿದ್ದೇವೆ. ಇದರಲ್ಲಿ ಯಾವುದೇ ಬದಲಾವಣೆಗೆ ನಡೆಸುವ ಯಾವುದೇ ಏಕಪಕ್ಷೀಯ ಕಾರ್ಯಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಇತ್ತೀಚೆಗೆ ಈ ವಲಯದಲ್ಲಿ ನಡೆದ ಅಕ್ರಮ ಕ್ಷಿಪಣಿ ದಾಳಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ವಿರುದ್ಧವಾಗಿರುವುದನ್ನು ನಾವು ಗಮನಿಸಿದ್ದೇವೆ. ಸಮುದ್ರಯಾನ ವಲಯದಲ್ಲಿ ಇತ್ತೀಚೆಗೆ ನಡೆಸಲಾದ ಅಪಾಯಕಾರಿ ಮತ್ತು ಆಕ್ರಮಣಕಾರಿ ಕೆಲಸಗಳನ್ನೂ ನಾವು ಖಂಡಿಸುತ್ತೇವೆ’ ಎಂದು ನಿರ್ಣಯದಲ್ಲಿ ಹೇಳಲಾಗಿದೆ. 

ಕ್ಯಾನ್ಸರ್‌ ವಿರುದ್ಧ ಕ್ವಾಡ್‌ ಹೋರಾಟ

ಕೋವಿಡ್‌ ಸಮಯದಲ್ಲಿ ಪಾಲುದಾರಿಕೆ ತೋರಿದ್ದ ಕ್ವಾಡ್‌ ದೇಶಗಳು ಕ್ವಾಡ್‌ ಕ್ಯಾನ್ಸರ್‌ ಮೂನ್‌ಶಾಟ್‌ ಎಂಬ ಹೊಸ ಒಪ್ಪಂದದ ಕುರಿತೂ ಘೋಷಣೆ ಮಾಡಿವೆ. ಈ ಯೋಜನೆ ಮೂಲಕ ಇಂಡೋ- ಪೆಸಿಫಿಕ್‌ ವಲಯದಲ್ಲಿನ ಕ್ಯಾನ್ಸರ್‌ನಿಂದ ಜನರ ಜೀವ ಉಳಿಸಲು ನಾಲ್ಕೂ ದೇಶಗಳು ಪರಸ್ಪರ ಕೈ ಜೋಡಿಸಲು ನಿರ್ಧರಿಸಿವೆ.

 ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆಗೆ ಬೆಂಬಲ

ಭಾರತ ಸೇರಿ ಹಲವು ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆ ಮಾಡಿ ತಮಗೂ ಸದಸ್ಯತ್ವಕ್ಕೆ ಒತ್ತಾಯಿಸುತ್ತಿವೆ. ಈ ಕೂಗನ್ನು ಬೆಂಬಲಿಸಲು ಕ್ವಾಡ್‌ ಶೃಂಗ ನಿರ್ಧರಿಸಿದೆ.. 

ಕ್ವಾಡ್‌ ಯಾರ ವಿರುದ್ಧವೂ ಅಲ್ಲ. ಇದು ಅಂತಾರಾಷ್ಟ್ರೀಯ ನಿಯಮಗಳ ಅನ್ವಯ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸುವ ಒಕ್ಕೂಟ. ಇಂಡೋ- ಪೆಸಿಫಿಕ್‌ ವಲಯದಲ್ಲಿ ಸ್ವತಂತ್ರ, ಮುಕ್ತ, ಸಮೃದ್ಧ ಮತ್ತು ಸಮಗ್ರ ಬೆಳವಣಿಗೆ ನಮ್ಮ ಆದ್ಯತೆ.ನರೇಂದ್ರ ಮೋದಿ, ಪ್ರಧಾನಿ

 ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ: ಬೈಡೆನ್‌ ‘ಖಾಸಗಿ ನುಡಿ’ ಬಹಿರಂಗ

ವಾಷಿಂಗ್ಟನ್‌: ಕ್ವಾಡ್‌ ದೇಶಗಳ ನಾಯಕರ ಜೊತೆಗಿನ ಆಪ್ತ ಸಂವಾದದ ವೇಳೆ, ‘ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಖಾಸಗಿಯಾಗಿ ಆಡಿದ ಮಾತುಗಳು ಮೈಕ್‌ನಲ್ಲಿ ಪ್ರಸಾರವಾಗಿದೆ.ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಕ್ರಮಣಕಾರಿ ವರ್ತಿಸುವ ಮೂಲಕ ಈ ವಲಯದಲ್ಲಿನ ನಮ್ಮನ್ನೆಲ್ಲಾ ವಿವಿಧ ಸ್ತರಗಳಲ್ಲಿ ಪರೀಕ್ಷಿಸುತ್ತಿದ್ದಾರೆ. ಅದರಲ್ಲಿ ತಾಂತ್ರಿಕ ಮತ್ತು ಆರ್ಥಿಕ ವಿಷಯಗಳೂ ಸೇರಿವೆ ಎಂದೂ ಬೈಡೆನ್‌ ಹೇಳಿದ್ದಾರೆ.