ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆಯುವ ಉದ್ದೇಶದಿಂದ ಸರ್ಕಾರಿ ಮೊರಾರ್ಜಿ ಶಾಲೆಯಲ್ಲೂ ಕಳೆದ 10 ವರ್ಷದಿಂದ ದಡ್ಡ ಮಕ್ಕಳನ್ನು 9ನೇ ತರಗತಿ ಮುಗಿಯುತ್ತಿದ್ದಂತೆ ಹೊರಹಾಕುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಈ ಕಳ್ಳಾಟದಿಂದ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಶೇ.100ರಷ್ಟು ಫಲಿತಾಂಶ ಪಡೆದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲಿಸಿದರೆ ಶಾಲೆಗಳ ನಿಜವಾದ ಬಣ್ಣ ಬಯಲಾಗಲಿದೆ.
ಅಕ್ಕ-ತಂಗಿ ಇಬ್ಬರಿಗೂ ಗೇಟ್‌ಪಾಸ್:
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಯಡ್ಡೊಣಿಯ ಹುಲಗಪ್ಪ ಭಜಂತ್ರಿ ಅವರ ಇಬ್ಬರು ಪುತ್ರಿಯರು ಮೊರಾರ್ಜಿ ಶಾಲೆಗೆ ಆಯ್ಕೆಯಾಗಿದ್ದರು. ಅದರಲ್ಲಿ ಓರ್ವಳು ಮೇಣದಾಳ ಮೊರಾರ್ಜಿ ಶಾಲೆ, ಮತ್ತೊರ್ವಳು ಹಿರೇವಂಕಲಕುಂಟಾ ಶಾಲೆಯಲ್ಲಿ ಓದುತ್ತಿದ್ದರು. ಕಳೆದ ವರ್ಷ 9ನೇ ತರಗತಿ ಮುಗಿಸುತ್ತಿದ್ದಂತೆ ಇವರು ದಡ್ಡರಿದ್ದು, ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗುವುದಿಲ್ಲ ಎಂದು ನೇಪ ಹೇಳಿ ಹೊರಹಾಕಿದ್ದಾರೆ.
ಬಳಿಕ ಮಕ್ಕಳ ಭವಿಷ್ಯಕ್ಕಾಗಿ ಹುಲಗಪ್ಪ ವಿವಿಧ ಶಾಲೆಗಳ ಕದ ತಟ್ಟಿದ್ದಾರೆ. ತದನಂತದ ಹಿರೇವಂಕಲಕುಂಟಾ ಸರ್ಕಾರಿ ಪ್ರೌಢಶಾಲೆಗೆ ದಾಖಲಿಸಿದ್ದಾರೆ. ಆದರೆ, 9ನೇ ತರಗತಿಯರೆಗೂ ಮೊರಾರ್ಜಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಓದಿದ್ದ ಈ ವಿದ್ಯಾರ್ಥಿಗಳು 10ನೇ ತಗರತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಿ ತೇರ್ಗಡೆಯಾಗಿದ್ದಾರೆ.
ಶಾಲೆ ತಪ್ಪಿಗೆ 1 ವರ್ಷ ಶೈಕ್ಷಣಿಕ ಜೀವನ ಹಾಳು:
ಹಿರೇವಂಕಲಕುಂಟಾ ಮೊರಾರ್ಜಿ ಶಾಲೆಯಲ್ಲಿ ಓದುತ್ತಿದ್ದ ಯಮನೂರಪ್ಪ ಎನ್ನುವವರ ಮಗನನ್ನು ಕಳೆದ ವರ್ಷ 9ನೇ ತರಗತಿ ಮಧ್ಯದಲ್ಲಿಯೇ ಟೀಸಿ ಕೊಟ್ಟು ಕಳುಹಿಸಿದ್ದಾರೆ. ಬಳಿಕ ಹಿರೇವಂಕಲಕುಂಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ದಾಖಲಿಸಿದರೂ ದಾಖಲಾತಿ ಕಂಪ್ಯೂಟರ್‌ನಲ್ಲಿ ನೋಂದಣಿ ಆಗಿಲ್ಲ. ಹೀಗಾಗಿ ಒಂದು ವರ್ಷ ಶೈಕ್ಷಣಿಕ ಜೀವನ ಹಾಳಾಗಿದ್ದು, ಈ ವರ್ಷವೂ ದಾಖಲಾಗಿಲ್ಲ. ಇದಕ್ಕಾಗಿ ಡಿಡಿಪಿಐ ಕಚೇರಿ ಹಾಗೂ ಯಲಬುರ್ಗಾ ಬಿಇಒ ಕಚೇರಿ ಸುತ್ತಾಡಿದರೂ ಪ್ರಯೋಜನವಾಗಿಲ್ಲ. ಶಾಲೆಗಳ ಕಳ್ಳಾಟಕ್ಕೆ ನನ್ನ ಮಗನ ಭವಿಷ್ಯವೇ ಹಾಳಾಗುತ್ತಿದೆ ಎಂದು ಪಾಲಕರು ಕಣ್ಣೀರು ಹಾಕುತ್ತಿದ್ದಾರೆ.
ಇವು ಕೇವಲ ಉದಾಹರಣೆ. ಇಂತಹ ನೂರಾರು ಘಟನೆಗಳು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಹುತೇಕ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.100ಕ್ಕೆ 100 ಇದ್ದು ಇವುಗಳ ದಾಖಲಾತಿ ಪರಿಶೀಲಿಸಿದರೆ ನಿಜಾಂಶ ಹೊರಬರಲಿದೆ. ಶೇ.100ರಷ್ಟು ಫಲಿತಾಂಶ ಪಡೆಯಲು ಕಳೆದ 10 ವರ್ಷದಿಂದ ಈ ರೀತಿಯ ಕಳ್ಳಾಟ ನಡೆಯುತ್ತಿದೆ ಎಂದು ಹಿರಿಯ ಶಿಕ್ಷಕರೊಬ್ಬರು ಹೇಳಿದ್ದಾರೆ.
ಈ ವರ್ಷ ಫೇಲ್:
ಕಳೆದೆರಡು ವರ್ಷಗಳಿಂದ ವೆಬ್ ಕಾಸ್ಟಿಂಗ್‌ನಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುತ್ತಿರುವುದರಿಂದ ಫಲಿತಾಂಶ ಕುಸಿತವಾಗಿದೆ. ಅದರಲ್ಲೂ ಈ ವರ್ಷ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆಯುವ ಶಾಲೆಯ ಶಿಕ್ಷಕರಿಗೆ ವೇತನ ಬಡ್ತಿ ತಡೆಹಿಡಿಯಲು ಹೇಳಿದ್ದಾರೆ. ಹೀಗಾಗಿ, ಈ ವರ್ಷ 9ನೇ ತರಗತಿಯಲ್ಲಿಯೇ ಅನುತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ಪತ್ತೆ ಮಾಡಲಾಗುತ್ತಿದೆ. 10ನೇ ತರಗತಿ ತೇರ್ಗಡೆಯಾಗುವ ಸಾಧ್ಯತೆ ಇರುವ ವಿದ್ಯಾರ್ಥಿಗಳನ್ನು ಮಾತ್ರ 9ನೇ ತರಗತಿಯಲ್ಲಿ ಪಾಸು ಮಾಡುತ್ತಿದ್ದಾರೆ.
ಪಾಲಕರ ಆಕ್ರೋಶಕ್ಕೆ ಮಣಿದ ಶಾಲೆ:
ಕೊಪ್ಪಳ ಸಮೀಪದ ಭಾಗ್ಯನಗರದ ಪ್ರೌಢಶಾಲೆಯೊಂದರಲ್ಲಿಯೇ 9ನೇ ತರಗತಿಯಲ್ಲಿ 26 ವಿದ್ಯಾರ್ಥಿಗಳನ್ನು ಫೇಲ್ ಮಾಡಲಾಗಿತ್ತು. ಪಾಲಕರು ಮತ್ತು ಎಸ್‌ಎಸ್‌ಡಿಎಂಸಿ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅಷ್ಟೂ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆಯುವ ದೃಷ್ಟಿಯಿಂದ ದಡ್ಡರಿರುವ ವಿದ್ಯಾರ್ಥಿಗಳನ್ನು ಕಳೆದ 10 ವರ್ಷದಿಂದ ಖಾಸಗಿ ಶಾಲೆಗಳು ಹೊರಹಾಕುತ್ತಿವೆ. ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
- ಅಮರೇಶ ಕಡಗದ, ಎಸ್‌ಎಫ್‌ಐ, ಮಾಜಿ ರಾಜ್ಯಾಧ್ಯಕ್ಷ
ನಾನು ಸಹ ಓರ್ವ ವಿದ್ಯಾರ್ಥಿಗೆ 10ನೇ ತರಗತಿ ಪ್ರವೇಶ ಕೊಡಿಸಲು ಶಾಲೆ ಶಾಲೆ ಸುತ್ತಿದ್ದೇನೆ. ದಡ್ಡ ಇದ್ದಾನೆಂಬ ಕಾರಣ ಮುಂದಿಟ್ಟುಕೊಂಡು ಶಾಲೆಗೆ ಸೇರಿಸಿಕೊಳ್ಳಲೇ ಇಲ್ಲ.
- ಸಾವಿತ್ರಿ ಮುಜುಂದಾರ, ಸಮಾಜ ಸೇವಕಿ.