ನ್ಯೂಯಾರ್ಕ್‌ : ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸಿದ ಭಾರತೀಯ ವಿದ್ಯಾರ್ಥಿನಿ ಗಡೀಪಾರು

| N/A | Published : Mar 16 2025, 01:45 AM IST / Updated: Mar 16 2025, 07:09 AM IST

ನ್ಯೂಯಾರ್ಕ್‌ : ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸಿದ ಭಾರತೀಯ ವಿದ್ಯಾರ್ಥಿನಿ ಗಡೀಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸಿದ್ದಕ್ಕೆ ಅಮೆರಿಕದಲ್ಲಿನ ಭಾರತೀಯ ಮೂಲದ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಎಂಬಾಕೆಯ ವೀಸಾ ರದ್ದು ಮಾಡಲಾಗಿದೆ. ಇದರ ಬೆನ್ನಲ್ಲೇ ಆಕೆ ಭಾರತಕ್ಕೆ ಸ್ವಯಂ ಗಡೀಪಾರಾಗಿದ್ದಾಳೆ.

ನ್ಯೂಯಾರ್ಕ್‌/ ವಾಷಿಂಗ್ಟನ್‌: ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸಿದ್ದಕ್ಕೆ ಅಮೆರಿಕದಲ್ಲಿನ ಭಾರತೀಯ ಮೂಲದ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಎಂಬಾಕೆಯ ವೀಸಾ ರದ್ದು ಮಾಡಲಾಗಿದೆ. ಇದರ ಬೆನ್ನಲ್ಲೇ ಆಕೆ ಭಾರತಕ್ಕೆ ಸ್ವಯಂ ಗಡೀಪಾರಾಗಿದ್ದಾಳೆ.

ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಕ್ಕೆ ಈಕೆ ವೈದ್ಯಕೀಯ ವ್ಯಾಸಂಗಕ್ಕಾಗಿ ಎಫ್‌-1 ವಿದ್ಯಾರ್ಥಿ ವೀಸಾದ ಮೇಲೆ ತೆರಳಿದ್ದಳು. ಅಲ್ಲಿ ಆಕೆ ಹಮಾಸ್‌ ಸಂಘಟನೆಗೆ ಬೆಂಬಲಿಸಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಗೃಹ ಭದ್ರತಾ ಇಲಾಖೆ ಮಾ.5 ರಂದು ಆಕೆಯ ವೀಸಾವನ್ನು ರದ್ದುಗೊಳಿಸಿದೆ.

ಬಳಿಕ ಮಾ.11ರಂದು ರಂಜನಿ, ಅಮೆರಿಕ ಸರ್ಕಾರದ ಕಸ್ಟಮ್ಸ್‌ ಮತ್ತು ಬಾರ್ಡರ್‌ ಪ್ರೊಟೆಕ್ಸನ್ (ಸಿಬಿಪಿ) ಹೋಮ್ ಆ್ಯಪ್ ಬಳಸಿ ಸ್ವಯಂ ಗಡೀಪಾರಾಗಿದ್ದಾಳೆ. ಆಕೆ ದೇಶ ಬಿಟ್ಟು ಹೋಗುತ್ತಿರುವ ವಿಡಿಯೋ ಗೃಹ ಭದ್ರತಾ ಇಲಾಖೆಗೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರು ಸ್ವಯಂ ಗಡೀಪಾರಾಗಲು ಗೃಹ ಇಲಾಖೆಯು ‘ಸಿಬಿಪಿ ಹೋಮ್ ಅಪ್ಲಿಕೇಶನ್’ ಅನ್ನು ಮಾರ್ಚ್ 10ರಂದು ಪರಿಚಯಿಸಿತ್ತು. ಅದನ್ನು ಈಕೆ ಬಳಸಿಕೊಂಡಿದ್ದಾಳೆ. ಅಮೆರಿಕಕ್ಕೆ ತೆರಳುವ ಮುನ್ನ ಈಕೆ ಗುಜರಾತಿನಲ್ಲಿ ವ್ಯಾಸಂಗ ಮಾಡಿದ್ದಳು.

ಹಿಂಸೆ ಬೆಂಬಲಿಸುವವರಿಗೆ ಜಾಗವಿಲ್ಲ- ಅಮೆರಿಕ: ಈ ಬಗ್ಗೆ ಗೃಹ ಭದ್ರತಾ ಇಲಾಖೆಯ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಪ್ರತಿಕ್ರಿಯಿಸಿದ್ದು, ‘ನೀವು ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವಾಗ ನೀವು ಈ ದೇಶದಲ್ಲಿ ಇರಬಾರದು. ನಿಮಗೆ ನೀಡಿದ ಸವಲತ್ತನ್ನು ರದ್ದುಗೊಳಿಸಬೇಕು. ಕೊಲಂಬಿಯಾ ವಿವಿ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವವರಲ್ಲಿ ಒಬ್ಬರನ್ನು ಸ್ವಯಂ ಗಡೀಪಾರು ಮಾಡಲು ಸಿಬಿಪಿ ಅಪ್ಲಿಕೇಶನ್ ಬಳಸಿರುವುದು ಸಂತೋಷವಾಗಿದೆ’ ಎಂದಿದ್ದಾರೆ.