ಶಿಕ್ಷಣದ ಪ್ರತಿ ಹಂತದಲ್ಲಿ ಕನ್ನಡ ಕಲಿಕೆಗೆ ಆದ್ಯತೆ: ವಿದ್ಯಾರ್ಥಿನಿ ನೇಹಾ ಹೊಸಮನೆ

| Published : Jan 12 2025, 01:15 AM IST

ಶಿಕ್ಷಣದ ಪ್ರತಿ ಹಂತದಲ್ಲಿ ಕನ್ನಡ ಕಲಿಕೆಗೆ ಆದ್ಯತೆ: ವಿದ್ಯಾರ್ಥಿನಿ ನೇಹಾ ಹೊಸಮನೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಶಿಕ್ಷಣದ ಪ್ರತಿಯೊಂದು ಹಂತದಲ್ಲಿ ಕನ್ನಡದ ಕಲಿಕೆಗೆ ಆದ್ಯತೆ ನೀಡುವ ಮೂಲಕ ನಿಜವಾದ ಕಲಿಕೆಯ ಪರಿಪೂರ್ಣತೆಯೆಡೆಗೆ ಸಾಗೋಣ ಎಂದು ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ನೇಹಾ ಹೊಸಮನೆ ಅಭಿಪ್ರಾಯಪಟ್ಟರು. ಶಿವಮೊಗ್ಗ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ವಾಧ್ಯಕ್ಷೆ ಅಭಿಪ್ರಾಯ । ತಾಲೂಕು 11ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮ್ಮ ಶಿಕ್ಷಣದ ಪ್ರತಿಯೊಂದು ಹಂತದಲ್ಲಿ ಕನ್ನಡದ ಕಲಿಕೆಗೆ ಆದ್ಯತೆ ನೀಡುವ ಮೂಲಕ ನಿಜವಾದ ಕಲಿಕೆಯ ಪರಿಪೂರ್ಣತೆಯೆಡೆಗೆ ಸಾಗೋಣ ಎಂದು ತಾಲೂಕು 11 ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ನೇಹಾ ಹೊಸಮನೆ ಅಭಿಪ್ರಾಯಪಟ್ಟರು.

ನಗರದ ಸ್ಯಾನ್ ಜೋಸ್ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ ಶಿವಮೊಗ್ಗ ತಾಲೂಕು 11ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಕ್ಕೆ ಕೈ ಎತ್ತು ಕನ್ನಡದ ಕಂದ ಎಂಬ ಕವಿ ಸಾಲುಗಳನ್ನು ಮೆಲುಕು ಹಾಕುವಾಗ, ಕನ್ನಡವ ಕಾಪಾಡು ಕನ್ನಡಿಗರಿಂದ ಎಂದು ಹೇಳುವ ಸನ್ನಿವೇಶ ಸೃಷ್ಟಿಯಾಗುತ್ತಿರುವುದು ದುರಂತ. ಮಕ್ಕಳಾದ ನಾವು ಕನ್ನಡವನ್ನು ಬೆಳೆಸುವ ಬಳಸುವ ಕನ್ನಡದ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳಬೇಕಿದೆ. ಯಾವುದೇ ಭಾಷೆಯನ್ನು ಕಲಿಯಲು ಪ್ರಯತ್ನಿಸಿದರೂ ಆಂತರ್ಯದಲ್ಲಿ ಗ್ರಹಿಕೆಯಾಗುವುದು ನಮ್ಮ ಮಾತೃಭಾಷೆ ಕನ್ನಡದಿಂದಲೆ ಎಂಬ ಸತ್ಯ ಮರೆಯದಿರಿ. ನಲಿಯಲು, ಕಲಿಯಲು, ಬಾಳಲು, ಬೆಳೆಯಲು, ಕಲಿಸುವ ಪ್ರತಿ ಹಂತಗಳಲ್ಲಿಯೂ ಕನ್ನಡ ಎಂಬುದು ರಾರಾಜಿಸುತ್ತಿರಲಿ ಎಂದು ಆಶಿಸಿದರು.

ನಾಲ್ಕು ಗೋಡೆಗಳ ನಡುವೆ ಪಾಠಕ್ಕಷ್ಟೆ ಸೀಮಿತವಾಗುವ ನಮಗೆ, ಅರಿವಿನ ವಿಸ್ತರಣೆಗೆ ಸಾಹಿತ್ಯ ಸಮ್ಮೇಳನಗಳು ಪ್ರೇರಣೆಯಾಗಿದೆ. ವಿದ್ಯಾರ್ಥಿಗಳಾದ ನಾವು ಶಾಲಾ ಪಠ್ಯಕ್ರಮದ ಜತೆಯಲ್ಲಿ ಸಾಹಿತ್ಯ ಸಂಬಂಧಿ ಪುಸ್ತಕಗಳ ಓದು ರೂಢಿಸಿಕೊಳ್ಳಬೇಕು. ರಾಮಾಯಣ, ಮಹಾಭಾರತದ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಬದುಕಿನ ವಿಕಸನಕ್ಕೆ ದಾರಿ ತೋರುವ ಕೃತಿಗಳನ್ನು ಓದಿ. ಸಮಾಜದಲ್ಲಿ ನಡೆಯುವ ಪ್ರತಿಯೊಂದು ಸರಿ ತಪ್ಪುಗಳನ್ನು ವಿಶ್ಲೇಷಿಸಲು, ಮಕ್ಕಳ ಮೂಲಭೂತ ಹಕ್ಕುಗಳನ್ನು, ಮಹಿಳಾ ದೌರ್ಜನ್ಯಗಳ ಬಗ್ಗೆ ಧ್ವನಿಯೆತ್ತಲು ಮಕ್ಕಳ ಸಾಹಿತ್ಯದ ವೇದಿಕೆಗಳು ಸೃಷ್ಟಿಯಾಗಬೇಕು. ಮಾನವ ಜನ್ಮ ಶ್ರೇಷ್ಠವಾದದ್ದು. ಮಕ್ಕಳಾದ ನಾವು ಮೊಬೈಲ್‌ಗೆ ಸೀಮಿತರಾಗದೆ, ಸಾಹಿತ್ಯವನ್ನು ಅಧ್ಯಯನ ಮಾಡುವ ಮತ್ತು ರಚಿಸುವ ಮೂಲಕ ಸರ್ವತೋಮುಖ ಬೆಳವಣಿಗೆಯಲ್ಲಿ ಸಕ್ರಿಯರಾಗೋಣ ಎಂದು ಕರೆ ನೀಡಿದರು.

ಗಾಜನೂರು ಕೆ.ಪಿ.ಎಸ್. ಶಾಲೆಯ ವಿದ್ಯಾರ್ಥಿನಿ ತಾರಾ ಮಾತನಾಡಿ, ನುಡಿಯ ಬಗ್ಗೆ ಅಭಿಮಾನ ಮೂಡಿದರೆ, ನಾಡಿನ ಬಗ್ಗೆ ತಾನಾಗಿಯೇ ಅಭಿಮಾನ ಮೂಡುತ್ತದೆ. ಭಾಷೆಯ ಜೊತೆಗೆ ಪ್ರಾದೇಶಿಕ ಸಂಸ್ಕೃತಿ, ಸಂಸ್ಕಾರಗಳನ್ನು ಮಕ್ಕಳಾದ ನಾವು ರೂಡಿಸಿಕೊಳ್ಳಬೇಕಿದೆ. ಅನೇಕ ಕನ್ನಡದ ಸಾಹಿತಿಗಳು ಕನ್ನಡ ಸಾಹಿತ್ಯ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸಿದ್ದು, ಅಂತಹ ನೆಲೆಗಟ್ಟುಗಳು ನಮ್ಮಂತಹ ಮಕ್ಕಳಿಗೆ ದಾರಿ ದೀಪವಾಗಲಿದೆ ಎಂದರು.

ಡಿಡಿಪಿಯು ಎಸ್.ಆರ್. ಮಂಜುನಾಥ ಮಾತನಾಡಿ, ಮಾತೃಭಾಷೆಯ ಶಿಕ್ಷಣ ಕಲಿಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕನ್ನಡ ಭಾಷೆಯನ್ನು ಸುಂದರವಾಗಿ ಬರೆಯಲು ಅಭ್ಯಾಸಿಸಿ. ಅಂತಹ ಅಭ್ಯಾಸದ ಜೊತೆಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಲು ಕನ್ನಡ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಕವಿಗಳ ಸಾಧನೆಗಳನ್ನು ಮಕ್ಕಳಿಗೆ ಪರಿಚಯಿಸಿ ಎಂದು ಆಶಿಸಿದರು.

ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಯಾನ್ ಜೋಸ್‌‌ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರೆ. ಫಾದರ್ ಸಾಜನ್ ಕೆ.ಟಿ, ಸಹ ಶಿಕ್ಷಕ ಭದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪದಾಧಿಕಾರಿಗಳಾದ ಡಿ.ಗಣೇಶ್‌, ಅನುರಾಧ, ಸುಶೀಲಾ ಷಣ್ಮುಗಂ, ನಳೀನಾಕ್ಷಿ, ಮೇರಿ ಡಿಸೋಜ, ವಿವಿಧ ಗೋಷ್ಟಿಗಳ ಅಧ್ಯಕ್ಷತೆ ವಹಿಸಿದ್ದ ಕಸ್ತೂರಬಾ ಬಾಲಿಕ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾಹ್ನವಿ, ಮಂಡಘಟ್ಟ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕ್, ಸ್ಯಾನ್ ಜೋಸ್ ಪ್ರೌಢಶಾಲೆಯ ವಿದ್ಯಾರ್ಥಿ ವರುಣ್ ಇತರರು ಹಾಜರಿದ್ದರು.