ಸಾರಾಂಶ
ಇಸ್ಲಾಮಾಬಾದ್: 26 ಜನರನ್ನು ಬಲಿಪಡೆದ ಪಹಲ್ಗಾಂ ನರಮೇಧದ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಭಾರತದ ದಾಳಿ ಖಚಿತ ಎಂದು ಸ್ವತಃ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ.
ಪಹಲ್ಗಾಂ ಘಟನೆ ಬೆನ್ನಲ್ಲೇ ಸೋಮವಾರ ಸುದ್ಧಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಆಸೀಫ್, ‘ಇತ್ತೀಚಿನ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಭಾರತದ ದಾಳಿ ಖಚಿತ. ಅದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಸೇನೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಗಡಿಯಲ್ಲಿ ನಮ್ಮ ಪಡೆಗಳನ್ನು ಬಲಪಡಿಸಿದ್ದೇವೆ. ಈ ಪರಿಸ್ಥಿತಿಯಲ್ಲಿ ಕೆಲವು ಕಾರ್ಯತಂತ್ರದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಭಾರತದಿಂದ ನಮ್ಮ ಅಸ್ತಿತ್ವಕ್ಕೇನಾದರೂ ಧಕ್ಕೆ ಬಂದರೆ ಪರಮಾಣು ದಾಳಿಗೂ ಸಿದ್ಧರಿದ್ದೇವೆ’ ಎಂದು ಆಸಿಫ್ ತಿಳಿಸಿದ್ದಾರೆ.ಮೊದಲಿಗೆ ಘಟನೆಯಲ್ಲಿ ತನ್ನ ಯಾವುದೇ ಪಾತ್ರ ಇಲ್ಲ ಎಂದಿದ್ದ ಪಾಕಿಸ್ತಾನ, ದಾಳಿಯಲ್ಲಿ ತನ್ನ ಪಾತ್ರದ ಬಗ್ಗೆ ಭಾರತಕ್ಕೆ ಖಚಿತ ಸಾಕ್ಷ್ಯ ಸಿಕ್ಕಿರುವುದು ತಿಳಿಯುತ್ತಲೇ ತಟಸ್ಥ ದೇಶವೊಂದರಿಂದ ತನಿಖೆಯ ಮಾತುಗಳನ್ನು ಆಡಿತ್ತು.
ಪಿಒಕೆ ಉಗ್ರರಿಗೆ ಬಂಕರ್‌ನಲ್ಲಿ ಪಾಕ್ ರಕ್ಷಣೆ ಭಾರತದ ದಾಳಿಗೆ ಹೆದರಿ ಉಗ್ರರ ಸ್ಥಳಾಂತರ
ಇಸ್ಲಾಮಾಬಾದ್: ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಯಾವುದೇ ಸಮಯದಲ್ಲಿ ಭಾರತದ ದಾಳಿ ಬಹುತೇಕ ಖಚಿತ ಎಂದು ನಂಬಿರುವ ಪಾಕಿಸ್ತಾನ, ತಾನು ಅಕ್ರಮಿಸಿಕೊಂಡಿರುವ ಕಾಶ್ಮೀರದ ಉಗ್ರ ನೆಲೆಗಳಲ್ಲಿ ಇರುವ ಉಗ್ರರಿಗೆ ಬಂಕರ್‌ಗಳಲ್ಲಿ ರಕ್ಷಣೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಪಿಒಕೆಯಲ್ಲಿನ ಹಲವು ಉಗ್ರರ ನೆಲೆಗಳನ್ನು ಭಾರತೀಯ ಸೇನಾ ಪಡೆ ಗುರುತಿಸಿ ದಾಳಿಗೆ ಸಿದ್ಧತೆ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ ಎಲ್ಲಾ ಉಗ್ರರನ್ನು ತನ್ನ ಉಸ್ತುವಾರಿಯಲ್ಲಿ ಇರುವ ಕೇಂದ್ರಗಳು ಮತ್ತು ಬಂಕರ್‌ಗಳಿಗೆ ವರ್ಗಾಯಿಸಿದೆ ಎನ್ನಲಾಗಿದೆ. ಈ ತರಬೇತಿ ಕೇಂದ್ರಗಳಲ್ಲಿ ಯುವಕರಿಗೆ ಉಗ್ರವಾದದ ತರಬೇತಿ ನೀಡಿ ಅವರನ್ನು ಭಾರತಕ್ಕೆ ಕಳುಹಿಸುವ ಕೆಲಸವನ್ನು ಪಾಕಿಸ್ತಾನ ಸೇನೆ ಮತ್ತು ಅದರ ಗುಪ್ತಚರ ಸಂಸ್ಥೆ ಐಎಸ್‌ಐ ಮಾಡುತ್ತಿವೆ.
ಟರ್ಕಿಯಿಂದ ಪಾಕ್‌ಗೆ ಯುದ್ಧ ಸಾಮಗ್ರಿ ನೆರವು
6 ವಿಮಾನದಲ್ಲಿ ಯುದ್ಧ ಸಾಮಗ್ರಿ । ನೆರವಿತ್ತ ಭಾರತಕ್ಕೆ ಟರ್ಕಿ ಚೂರಿ
ಇಸ್ಲಾಮಾಬಾದ್: ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತದ ಪ್ರತೀಕಾರ ಕ್ರಮಗಳಿಂದ ತತ್ತರಿಸುತ್ತಿರುವ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿದೆ. ಯುದ್ಧೋಪರಣಗಳನ್ನು ಹೊತ್ತುಕೊಂಡು ಟರ್ಕಿ ವಾಯುಪಡೆಯ 6 ಸಿ -130 ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನವು ಭಾನುವಾರ ಪಾಕಿಸ್ತಾನಕ್ಕೆ ಬಂದಿಳಿದಿವೆ. ಕಾಶ್ಮೀರ ವಿಷಯದಲ್ಲಿ ಹಿಂದಿನಿಂದಲೂ ಟರ್ಕಿ ಪಾಕಿಸ್ತಾನಕ್ಕೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿಕೊಂಡು ಬಂದಿದೆ. ಆದರೆ ಕೆಲ ಸಮಯದಿಂದ ಟರ್ಕಿ ಭೀಕರ ಭೂಕಂಪಕ್ಕೆ ತುತ್ತಾದಾಗ ಅದಕ್ಕೆ ಮೊದಲಿಗೆ ನೆರವು ನೀಡಿದ ದೇಶಗಳಲ್ಲಿ ಭಾರತ ಕೂಡಾ ಒಂದಾಗಿತ್ತು.